ಶಿವಮೊಗ್ಗ: ಜಮೀನು ವಿವಾದ, ಕೆಂಪೇಗೌಡ ಚಿತ್ರದ ನಟಿಯ ಮೇಲೆ ಹಲ್ಲೆ
ಶಿವಮೊಗ್ಗ, ಜುಲೈ 04: ಕಿರುತೆರೆ ಹಾಗೂ ಕನ್ನಡ ಚಲನಚಿತ್ರ ನಟಿ ಅನಿತಾ ಗೌಡ (ಅನು ಗೌಡ) ಮೇಲೆ ಸ್ಥಳೀಯ ನಿವಾಸಿಗಳೇ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಶಿವಮೊಗ್ಗದ ಸಾಗರ ತಾಲೂಕಿನ ಉಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಸ್ಪಾಡಿ ಗ್ರಾಮದಲ್ಲಿ ಘಟನೆ ನಡೆದಿದೆ.
ಜಮೀನು ವಿವಾದದ ಗಲಾಟೆಯಲ್ಲಿ ಸ್ಥಳೀಯ ನಿವಾಸಿಗಳಾದ ಮೋಹನ್ ಹಾಗೂ ನೀಲಮ್ಮ ನಟಿ ಅನಿತಾ ಗೌಡ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಜೂನ್ 30ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನಟಿ ಅನಿತಾ ಗೌಡ ಕಾಸ್ಪಾಡಿ ಗ್ರಾಮದ ಸ.ನಂ 43 ರಲ್ಲಿ ಜಮೀನು ಹೊಂದಿದ್ದಾರೆ. ಅನಿತಾ ಗೌಡ ಅವರ ತಂದೆ ಶ್ರೀನಿವಾಸ ಗೌಡ ಜಮೀನು ನೋಡಿಕೊಂಡು ಕಾಸ್ಪಾಡಿಯಲ್ಲೇ ವಾಸವಾಗಿದ್ದರು. ಬೆಂಗಳೂರಿನಲ್ಲಿದ್ದ ಅನಿತಾ ಆಗಾಗ ಶಿವಮೊಗ್ಗಕ್ಕೆ ಹೋಗಿ ಬರುತ್ತಿದ್ದರು. ನಟಿ ಅನಿತಾ ಗೌಡ (ಅನು ಗೌಡ) ಕಳೆದ ಶುಕ್ರವಾರ ಸಹ ಕಾಸ್ಪಾಡಿಗೆ ಬಂದಿದ್ದು, ಜಮೀನಿಗೆ ತೆರಳಿದ್ದರು.
ಈ ವೇಳೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮೋಹನ್ ಹಾಗೂ ನೀಲಮ್ಮ ಜಮೀನಿಗೆ ಆಗಮಿಸಿ ನಟಿ ಅನಿತಾ ಗೌಡಗೆ ಕೆಟ್ಟ ಶಬ್ದಗಳಿಂದ ಬೈದು, ಅವರ ಬಟ್ಟೆ ಹಿಡಿದು ಎಳೆದಾಡಿ, ಕೊನೆಗೆ ಕೆಳಗೆ ಬೀಳಿಸಿ ಅಲ್ಲೇ ಇದ್ದ ಕೋಲಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಘಟನೆಯನ್ನು ಕಂಡ ಚಂದ್ರ ಹಾಗೂ ರೂಪೇಶ್ ಅವರು ಜಗಳ ಬಿಡಿಸಿ ಅನಿತಾ ಗೌಡ ಅವರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಿದ್ದಾರೆ.
ಸದ್ಯ ನಟಿ ಅನಿತಾ ಗೌಡ ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ತಲೆ ಹಾಗೂ ಮುಖದ ಭಾಗಕ್ಕೆ ಗಾಯಗಳಾಗಿರುವುದು ಕಂಡು ಬಂದಿದೆ. ಘಟನೆ ಸಂಬಂಧ ಸಾಗರದ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಟಿ ಅನಿತಾ ಗೌಡ (ಅನು ಗೌಡ) ಹುಡುಗರು ಹಾಗೂ ಕೆಂಪೇಗೌಡ ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದು, ಕಿರುತೆರೆಯ ಧಾರವಾಹಿಗಳಲ್ಲೂ ಕೂಡ ನಟಿಸಿದ್ದಾರೆ.












Click it and Unblock the Notifications