ಅಧಿಕಾರಿಗಳು ಬಡವರನ್ನು ಒಕ್ಕಲೆಬ್ಬಿಸಬಾರದು: ಡಿಕೆ ಶಿವಕುಮಾರ್
ಶಿವಮೊಗ್ಗ, ಫೆಬ್ರವರಿ 25; "ಮುಂದಿನ ದಿನದಲ್ಲಿ ಎಲ್ಲ ವರ್ಗದವರಿಗೆ 35 ರ್ಷದ ಮಿತಿಯೊಳಗೆ ಅರಣ್ಯ ಹಕ್ಕು ನೀಡಲು ಸರ್ಕಾರ ಬದ್ದವಾಗಿದೆ. ಅಧಿಕಾರಿಗಳು ಬಡವರನ್ನು ಒಕ್ಕಲೆಬ್ಬಿಸಬಾರದು. ಶರಾವತಿ ಸಂತ್ರಸ್ತರ ರಕ್ಷಣೆ ಬಗ್ಗೆ ನಮ್ಮ ಬದ್ದತೆ ಇದ್ದು, ಬಡತನ ನಿರ್ಮೂಲನೆ ನಮ್ಮ ಯುದ್ಧವಾಗಿದೆ" ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಶಿವಮೊಗ್ಗ ನಗರದ ಅಲ್ಲಮಪ್ರಭು ಮೈದಾನದಲ್ಲಿ ಏರ್ಪಡಿಸಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

"ಉಳುವವನೆ ಭೂಮಿ ಒಡೆಯ ಹಕ್ಕು ವಿಚಾರ ನಿರ್ವಹಿಸಲಾಗುತ್ತಿದೆ. ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಸೌಲಭ್ಯಗಳನ್ನು ನೀಡಲು ಮನೆ ಬಾಗಿಲಿಗೆ ನಮ್ಮ ಸರ್ಕಾರ ಬಂದಿದೆ. ಸದುಪಯೋಗ ಪಡೆಯಿರಿ. ಎಲ್ಲ ವರ್ಗಗಳಿಗೆ ಅನುಕೂಲವಾಗುವ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ" ಎಂದು ಡಿ. ಕೆ. ಶಿವಕುಮಾರ್ ತಿಳಿಸಿದರು.
ಜಾತಿ ಆಧಾರವಲ್ಲ, ನೀತಿ ಆಧಾರ: ಸಮಾವೇಶದಲ್ಲಿ ಮಾತನಾಡಿದ ಡಿ. ಕೆ. ಶಿವಕುಮಾರ್, "ಜಾತಿಯ ಆಧಾರದಲ್ಲಿ ಅಲ್ಲ, ಬದಲಾಗಿ ನೀತಿಯ ಆಧಾರದಲ್ಲಿ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಚುನಾವಣಾ ಪೂರ್ವ ಸಮಿತಿಯನ್ನು ರಚಿಸಿ, ಗ್ಯಾರಂಟಿ ಕಾರ್ಡುಗಳನ್ನು ಮನೆ ಮನೆಗಳಿಗೆ ತಲುಪಿಸಿದಂತೆ ಸರ್ಕಾರ ರಚನೆಯಾದ ತಕ್ಷಣ ಯೋಜನೆಗಳನ್ನು ಜಾರಿ ಮಾಡಿ ನಡೆದಂತೆ ನುಡಿದಿದ್ದೇವೆ" ಎಂದರು.
"ಹೆಣ್ಣು ಕುಟುಂಬದ ಕಣ್ಣು. ಅವರ ಕುಟುಂದಲ್ಲಿ ಭಾಗ್ಯೋದಯವಾಗಲೆಂದು ಗೃಹಲಕ್ಷ್ಮಿ ಯೋಜನೆಯನ್ನು ಬೆಳಗಾವಿಯಲ್ಲಿ ಚಾಲನೆ ನೀಡಿ, ಇದುವರೆಗೆ 1 ಕೋಟಿ 10 ಲಕ್ಷ ಮಹಿಳೆಯರಿಗೆ ರೂ. 2000 ಭತ್ಯೆ ನೀಡಲಾಗಿದ್ದು ರಾಷ್ಟ್ರದಲ್ಲೇ ಇದೊಂದು ಇತಿಹಾಸ" ಎಂದು ಹೇಳಿದರು.
"ಗೃಹಜ್ಯೋತಿ ಯೋಜನೆಯಡಿ ಇದುವರೆಗೆ 1.5 ಕೋಟಿ ಜನರಿಗೆ ಉಚಿತ 200 ಯೂನಿಟ್ ವಿದ್ಯುತ್ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಜೊತೆ ಇನ್ನುಳಿದ 5 ಕೆಜಿ ಅಕ್ಕಿ ಬದಲು ಪ್ರತಿ ಸದಸ್ಯರಿಗೆ ಒಂದು ಕೆಜಿಗೆ ರೂ. 34 ರಂತೆ ಹಣ ನೀಡಲಾಗುತ್ತಿದೆ" ಎಂದು ಡಿ. ಕೆ. ಶಿವಕುಮಾರ್ ವಿವರಿಸಿದರು.
"ಪ್ರಸ್ತುತ ಬೆಲೆ ಏರಿಕೆ ಸಂಕಷ್ಟದಲ್ಲಿ ಸರ್ಕಾರ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಜಾರಿಗೊಳಿಸಿದೆ. ಹಾಗೂ ಪ್ರಸ್ತುತ ಹೊಸದಾಗಿ 1000 ಬಸ್ ಖರೀದಿ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಈ ಬಜೆಟ್ ನಲ್ಲಿ 50 ಸಾವಿರ ಕೊಟಿ ಮೀಸಲು ಇಡಲಾಗಿದೆ" ಎಂದರು.
"ರೈತರು, ಕಾರ್ಮಿಕರು, ಶಿಕ್ಷಕರು ಹಾಗೂ ಎಲ್ಲ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸರ್ಕಾರದ ಹಂತದಲ್ಲಿ ಸಮಿತಿ ರಚಿಸಲಾಗಿದೆ. ಯುವನಿಧಿ ಯೋಜನೆ ಮೂಲಕ ಪದವಿ ಪೂರ್ಣಗೊಳಿಸಿದವರಿಗೆ ರೂ. 3 ಸಾವಿರ ಹಾಗೂ ಡಿಪ್ಲೊಮಾದಾರರಿಗೆ ರೂ.1500 ನೀಡುವ ಮೂಲಕ ಯುವಜನರಿಗೆ ಆಶಾಕಿರಣವಾಗಿದ್ದು ಐದು ಗ್ಯಾರಂಟಿ ಯೋಜನೆಗಳು ಜನರಲ್ಲಿ ಶಕ್ತಿ ತುಂಬಿದೆ" ಎಂದು ಹೇಳಿದರು.
ಶಿವಮೊಗ್ಗದ ಬಗ್ಗೆ ಮಾತನಾಡಿದ ಡಿ. ಕೆ. ಶಿವಕುಮಾರ್, "ಶಿವಮೊಗ್ಗ ಜಿಲ್ಲೆ ಸಮಾಜವಾದಿ ಹೋರಾಟದ ನಾಡು. ಶಿವಪ್ಪನಾಯಕ ಆಳಿದ ನೆಲೆ. ಕುವೆಂಪು ಜನ್ಮದ ಬೀಡು. ಗೋಪಾಲಗೌಡರು, ಕಾಗೋಡು, ಬಂಗಾರಪ್ಪನವರಂತಹ ಹೋರಾಟಗಾರರ ನಾಡು" ಎಂದು ಬಣ್ಣಿಸಿದರು.
"ಅತಿ ಹೆಚ್ಚು ಮುಖ್ಯಮಂತ್ರಿ ನೀಡಿದ ಜಿಲ್ಲೆ ಇದಾಗಿದ್ದು, ದೊಡ್ಡ ಇತಿಹಾಸ ಹೊಂದಿದ ಮಲೆನಾಡು. ಪ್ರಜ್ಞಾವಂತರ ನಾಡು. ತಾಯಂದಿರು, ಯುವಕರು, ರೈತರು ಚಿಂತೆ ಮಾಡಬೇಡಿ. ನಮ್ಮ ಬಲಿಷ್ಠ ಸರ್ಕಾರ ನಿಮ್ಮ ಜೊತೆಗೆ ಇದೆ. ಏನೇ ಟೀಕೆ ಟಿಪ್ಪಣಿ ಇದ್ದರೂ ಮುಂದೆಯೂ ಗ್ಯಾರಂಟಿ ಮುಂದುವರೆಯುವುದು" ಎಂದು ಡಿ. ಕೆ. ಶಿವಕುಮಾರ್ ಭರವಸೆ ನೀಡಿದರು.












Click it and Unblock the Notifications