ಭೂ ಕುಸಿತ, ದಟ್ಟಮಂಜು : ಆಗುಂಬೆ ಘಾಟ್ ಸಂಚಾರ ಸ್ಥಗಿತ
ಶಿವಮೊಗ್ಗ, ಜೂನ್ 27 : ಮಲೆನಾಡಿನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಭಾರೀ ಮಳೆಯ ಕಾರಣ ಆಗುಂಬೆ ಘಾಟ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಗುರುವಾರ ಸಂಜೆಯಿಂದ ಆಗುಂಬೆ ಘಾಟ್‍ನಲ್ಲಿ ದಟ್ಟ ಮಂಜು ಆವರಿಸಿದೆ. ಇಂದು ಬೆಳಗ್ಗೆ ಘಾಟ್ ರಸ್ತೆಯ 7ನೇ ತಿರುವಿನಲ್ಲಿ ಭೂ ಕುಸಿತ ಉಂಟಾಗಿದೆ. ಆದ್ದರಿಂದ, ಶುಕ್ರವಾರ ಬೆಳಗ್ಗೆ ತನಕ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ರಸ್ತೆ ಕುಸಿದ ಬಳಿಕ ಲಘುವಾಹನಗಳಿಗೆ ಮಾತ್ರ ಘಾಟ್ ರಸ್ತೆಯಲ್ಲಿ ಸಾಗಲು ಅವಕಾಶ ನೀಡಲಾಗಿತ್ತು. ಆದರೆ, ರಾತ್ರಿ ವೇಳೆ ವಾಹನಗಳ ಮೇಲೆ ನಿಗಾ ವಹಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಆಗುವ ಅಪಘಾತ ತಪ್ಪಿಸಲು ವಾಹನ ಸಂಚಾರ ನಿಷೇಧಿಸಲಾಗಿದೆ.

'ದಟ್ಟ ಮಂಜು ಮತ್ತು ಭೂ ಕುಸಿತದ ಕಾರಣ ರಾತ್ರಿ ವೇಳೆ ವಾಹನಗಳ ಅವಘಡಗಳನ್ನು ತಪ್ಪಿಸುವ ಉದ್ದೇಶದಿಂದ ಆಗುಂಬೆ ರಸ್ತೆಯನ್ನ ಬೆಳಗ್ಗೆ ತನಕ ಬಂದ್ ಮಾಡಲಾಗಿದೆ' ಎಂದು ಪೊಲೀಸರು ಹೇಳಿದ್ದಾರೆ.
ಶಿವಮೊಗ್ಗ ಮೂಲಕ ಮಂಗಳೂರು, ಉಡುಪಿ, ಕುಂದಾಪುರದ ಕಡೆ ತೆರಳುವ ಪ್ರಯಾಣಿಕರು ಹೊಸನಗರದ ಹುಲಿಕಲ್ ಘಾಟ್ ಮಾರ್ಗವಾಗಿ ಸಂಚರಿಸಬೇಕು ಎಂದು ಸೂಚಿಸಲಾಗಿದೆ.












Click it and Unblock the Notifications