• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಂಚಾರಿ ವಿಜಯ್ ಶಿವಮೊಗ್ಗ ನಂಟು; ಪಡ್ಡು, ಮೊಸರು ಅವಲಕ್ಕಿ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜೂನ್ 15; ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಂತ್ಯಕ್ರಿಯೆ ಮಂಗಳವಾರ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ನಡೆದಿದೆ. ಸಂಚಾರಿ ವಿಜಯ್‌ಗೆ ಪಕ್ಕದ ಜಿಲ್ಲೆ ಶಿವಮೊಗ್ಗದ ನಂಟು ಉತ್ತಮವಾಗಿತ್ತು.

ಸಂಚಾರಿ ವಿಜಯ್‍ಗೆ ಶಿವಮೊಗ್ಗ ಜಿಲ್ಲೆಯ ಜೊತೆಗೆ ಉತ್ತಮ ನಂಟಿತ್ತು. ತೀರ್ಥಹಳ್ಳಿಯಲ್ಲಿರುವ ಕವಿಶೈಲ ವಿಜಯ್ ನೆಚ್ಚಿನ ತಾಣಗಳಲ್ಲೊಂದು. ಶಿವಮೊಗ್ಗದ ಹೊಟೇಲ್‍ ಒಂದರ ತಿಂಡಿ ಅಚ್ಚುಮೆಚ್ಚಾಗಿತ್ತು. ರಾಷ್ಟ್ರ ಪ್ರಶಸ್ತಿ ಪಡೆದ ಬಳಿಕ ಸಂಚಾರಿ ವಿಜಯ್‍ಗೆ ಮೊದಲ ನಾಗರಿಕ ಸನ್ಮಾನವಾಗಿದ್ದು ಭದ್ರಾವತಿಯಲ್ಲಿ.

ಸಂಚಾರ ಮುಗಿಸಿ ಮಣ್ಣಿನಲ್ಲಿ ಲೀನವಾದ ನಟ ಸಂಚಾರಿ ವಿಜಯ್ ಸಂಚಾರ ಮುಗಿಸಿ ಮಣ್ಣಿನಲ್ಲಿ ಲೀನವಾದ ನಟ ಸಂಚಾರಿ ವಿಜಯ್

ಸಂಚಾರಿ ವಿಜಯ್‌ಗೆ ರಾಜ್ಯದ ವಿವಿಧೆಡೆ ಗೆಳೆಯರ ಬಳಗವಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅವರ ಆಪ್ತರ ಪೈಕಿ ಒಬ್ಬರು ಶಂಕರ್ ಮಿತ್ರ. ಸಂಚಾರಿ ವಿಜಯ್ ಶಿವಮೊಗ್ಗಕ್ಕೆ ಬಂದಾಗಲೆಲ್ಲ ಇವರನ್ನು ಭೇಟಿಯಾಗುತ್ತಿದ್ದರು. ಒಟ್ಟಿಗೆ ಸುತ್ತಾಡುತ್ತಿದ್ದರು.

ವ್ಯಕ್ತಿಚಿತ್ರ: ಬದುಕಿನ ಸಂಚಾರ ಮುಗಿಸಿದ ವಿಜಯ್‌ ಬೆಳೆದು ಬಂದ ದಾರಿವ್ಯಕ್ತಿಚಿತ್ರ: ಬದುಕಿನ ಸಂಚಾರ ಮುಗಿಸಿದ ವಿಜಯ್‌ ಬೆಳೆದು ಬಂದ ದಾರಿ

ಬೆಂಗಳೂರಿನಿಂದ ಸಂಚಾರಿ ವಿಜಯ್ ಪಾರ್ಥಿವ ಶರೀರವನ್ನು ಮಧ್ಯಾಹ್ನ 3 ಗಂಟೆ ವೇಳೆಗೆ ಹುಟ್ಟೂರು ಪಂಚನಹಳ್ಳಿಗೆ ತರಲಾಯಿತು. ಸಂಚಾರಿ ವಿಜಯ್ ಸ್ನೇಹಿತ ರಘು ತೋಟದಲ್ಲಿ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು.

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್ ನಿಧನ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್ ನಿಧನ

ಮಲೆನಾಡು ಊಟ, ತಿಂಡಿ

ಮಲೆನಾಡು ಊಟ, ತಿಂಡಿ

"ಸಂಚಾರಿ ವಿಜಯ್‌ಗೆ ಮಲೆನಾಡಿನ ಊಟ, ತಿಂಡಿ ಬಹಳ ಇಷ್ಟ. ನೀರ್ ದೋಸೆ, ಚಟ್ನಿ ತುಂಬಾ ಪ್ರೀತಿ. ಮೀನಾಕ್ಷಿ ಭವನ ಹೊಟೇಲ್‍ನ ದೋಸೆ, ಮೊಸರು ಅವಲಕ್ಕಿ ಇಷ್ಟಪಡುತ್ತಿದ್ದರು. ಶಿವಮೊಗ್ಗಕ್ಕೆ ಬಂದಾಗಲೆಲ್ಲ ನೆನಪು ಮಾಡಿಕೊಂಡು ಅಲ್ಲಿಗೆ ಹೋಗುತ್ತಿದ್ದರು" ಅಂತಾರೆ ಶಂಕರ್.

ಎರಡು ಪ್ಲೇಟ್ ಪಡ್ಡು ತಿನ್ನುತ್ತಿದ್ದರು

ಎರಡು ಪ್ಲೇಟ್ ಪಡ್ಡು ತಿನ್ನುತ್ತಿದ್ದರು

ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿ ಫುಟ್‍ಪಾತ್‍ ಮೇಲೆ ಗಾಡಿಯಲ್ಲಿ ಮಾಡುವ ಪಡ್ಡು ಸಂಚಾರಿ ವಿಜಯ್‌ಗೆ ಇಷ್ಟವಾಗಿತ್ತು. ಎರಡು ಪ್ಲೇಟ್‍ ಪಡ್ಡು ತಿಂದರಷ್ಟೆ ಅವರಿಗೆ ಸಮಾಧಾನವಾಗುತ್ತಿತ್ತು ಎಂದು ಒಡನಾಟವನ್ನು ಶಂಕರ್ ನೆನಪು ಮಾಡಿಕೊಳ್ಳುತ್ತಾರೆ.

ಮೊದಲ ನಾಗರಿಕ ಸನ್ಮಾನ

ಮೊದಲ ನಾಗರಿಕ ಸನ್ಮಾನ

'ನಾನು ಅವನಲ್ಲ ಅವಳು' ಸಿನಿಮಾಗೆ ರಾಷ್ಟ್ರಪ್ರಶಸ್ತಿ ಬಂದಾಗ ಸಂಚಾರಿ ವಿಜಯ್‌ಗೆ ಮೊಟ್ಟಮೊದಲು ನಾಗರಿಕ ಸನ್ಮಾನವಾಗಿದ್ದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ. ಇಲ್ಲಿನ ಎಂಪಿಎಂ ರಂಗಮಂದಿರ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ. ಕೆ. ಸಂಗಮೇಶ್ವರ್ ಮತ್ತು ಅಪ್ಪಾಜಿಗೌಡರ ಉಪಸ್ಥಿತಿಯಲ್ಲಿ ಸನ್ಮಾನ ಮಾಡಲಾಗಿತ್ತು.

ಕುಪ್ಪಳಿ, ಕವಿಶೈಲ, ಮಂಡಗದ್ದೆ

ಕುಪ್ಪಳಿ, ಕವಿಶೈಲ, ಮಂಡಗದ್ದೆ

"ನಟ ಸಂಚಾರಿ ವಿಜಯ್ ಅವಕಾಶ ಸಿಕ್ಕಾಗಲೆಲ್ಲ ಕುಪ್ಪಳಿಗೆ ಭೇಟಿ ನೀಡುತ್ತಿದ್ದರು. ಕವಿಶೈಲವನ್ನು ತುಂಬಾ ಇಷ್ಟಪಡುತ್ತಿದ್ದರು" ಅನ್ನುತ್ತಾರೆ ಶಂಕರ್ ಮಿತ್ರ. ರಾಷ್ಟ್ರಕವಿ ಕುವೆಂಪು ಮತ್ತು ಪೂರ್ಣ ತೇಜಸ್ವಿ ಅವರ ಸಮಾಧಿ ಬಳಿಗೆ ಹೋಗಿ ನಮಸ್ಕರಿಸಿ ಮೌನಕ್ಕೆ ಶರಣಾಗುತ್ತಿದ್ದರು. ಮಂಡಗದ್ದೆ, ಗಾಜನೂರಿಗೆ ಒಮ್ಮೆ ಹೋಗಿ ಪ್ರಕೃತಿ ಸೊಬಗಿನ ಜೊತೆ ಸಮಯ ಕಳೆಯಬೇಕು ಎಂದು ಹೇಳಿದ್ದರಂತೆ. ಸಿಗಂದೂರು ದೇವಸ್ಥಾನ, ಶರಾವತಿ ಹಿನ್ನೀರಿನ ಲಾಂಚ್‍ನಲ್ಲಿನ ಸಂಚಾರ ಬಲು ಅಚ್ಚುಮೆಚ್ಚು ಆಗಿತ್ತು. ನಾತಿಚರಾಮಿ ಸಿನಿಮಾ ತಂಡದ ಜೊತೆ ಒಮ್ಮೆ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದರು. ನಟಿ ಶೃತಿ ಹರಿಹರನ್ ಸೇರಿದಂತೆ ಹಲವರು ಈ ತಂಡದಲ್ಲಿದ್ದರು.

ಸಿಟಿ ಸೆಂಟರ್’ಗೆ ಕೊನೆ ಭೇಟಿ

ಸಿಟಿ ಸೆಂಟರ್’ಗೆ ಕೊನೆ ಭೇಟಿ

ನಟ ಸಂಚಾರಿ ವಿಜಯ್ 'ಆಕ್ಟ್ 1978' ಸಿನಿಮಾದ ಪ್ರಮೋಷನ್‍ಗಾಗಿ ಶಿವಮೊಗ್ಗಕ್ಕೆ ಬಂದಿದ್ದರು. ಸಿಟಿ ಸೆಂಟರ್‍ ಮಾಲ್‍ನ ಭಾರತ್ ಸಿನಿಮಾಸ್‍ನಲ್ಲಿ ಚಿತ್ರದ ಪ್ರಚಾರ ಕಾರ್ಯ ನಡೆಸಲಾಗಿತ್ತು ಎಂದು ಸ್ಮರಿಸಿಕೊಳ್ಳುತ್ತಾರೆ ಶಂಕರ್ ಮಿತ್ರ. ಪ್ರತಿ ಭಾರಿ ಶಿವಮೊಗಕ್ಕೆ ಬಂದಾಗಲೂ ಇಲ್ಲಿಯ ರಂಗ ತಂಡಗಳು, ರಂಗ ಕರ್ಮಿಗಳನ್ನು ಭೇಟಿಯಾಗಲು ಇಷ್ಟಪಡುತ್ತಿದ್ದರು.

ಕೊನೆಯ ಫೋನ್ ಕರೆ

ಕೊನೆಯ ಫೋನ್ ಕರೆ

"ಸಂಚಾರಿ ವಿಜಯ್‌ ಸಾಹಿತ್ಯ ಪ್ರೇಮಿ. ಇತ್ತೀಚಗೆ ಆತ್ಮಚರಿತ್ರೆಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಿದ್ದರು. ಪ್ರಾಜೆಕ್ಟ್ ಒಂದಕ್ಕಾಗಿ ಆತ್ಮಚರಿತ್ರೆಗಳನ್ನು ಓದುತ್ತಿದ್ದರು. ಕಳೆದ ಶುಕ್ರವಾರ ಕೊನೆಯ ಬಾರಿಗೆ ಕರೆ ಮಾಡಿದ್ದ ಅವರು, ಒಂದೊಳ್ಳೆ ಆಟೋಬಯೋಗ್ರಫಿಯನ್ನು ರೆಫರ್ ಮಾಡುವಂತೆ ಕೇಳಿದ್ದರು" ಅನ್ನುತ್ತಾರೆ ಶಂಕರ್‍ ಮಿತ್ರ.

ಶಿವಮೊಗ್ಗದ ಜೊತೆ, ಇಲ್ಲಿಯ ರಂಗಕರ್ಮಿಗಳು ಸೇರಿದಂತೆ ಹಲವರ ಜೊತೆ ಉತ್ತಮ ನಂಟು ಹೊಂದಿದ್ದರು. ಈಗ ಅವರ ಅಕಾಲಿಕ ಮರಣ ಸ್ನೇಹಿತರ ಬಳಗಕ್ಕೆ ನೋವನ್ನುಂಟು ಮಾಡಿದೆ.

English summary
National award winning actor Sanchari Vijay was good relationship with Shivamogga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion