ಶಿವಮೊಗ್ಗದಲ್ಲಿ ಕಾಂಗ್ರೆಸ್-ಜೆಡಿಎಸ್ ಸೋಲಿಗೆ 5 ಕಾರಣಗಳು!
Recommended Video

ಶಿವಮೊಗ್ಗ, ನವೆಂಬರ್ 06 : ತೀವ್ರ ಕುತೂಹಲ ಕೆರಳಿಸಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ತವರು ಜಿಲ್ಲೆಯಲ್ಲಿ ಪುತ್ರ ಬಿ.ವೈ.ರಾಘವೇಂದ್ರ ಗೆಲ್ಲಿಸಿಕೊಂಡು ಬರಲು ಯಶಸ್ವಿಯಾಗಿದ್ದಾರೆ.
ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಉಪ ಚುನಾವಣೆಯ ಮತ ಎಣಿಕೆ ನಡೆಯಿತು. ಮೊದಲ ನಾಲ್ಕು ಸುತ್ತುಗಳಲ್ಲಿ ಜೆಡಿಎಸ್‌ನ ಮಧು ಬಂಗಾರಪ್ಪ ಮತ್ತು ಬಿಜೆಪಿಯ ಬಿ.ವೈ.ರಾಘವೇಂದ್ರ ನಡುವೆ ತೀವ್ರ ಪೈಪೋಟಿ ಇತ್ತು. ಅಂತಿಮವಾಗಿ ಬಿಜೆಪಿಗೆ ಗೆಲುವು ಸಿಕ್ಕಿದೆ.
ಬಿ.ಎಸ್.ಯಡಿಯೂರಪ್ಪ ರಾಜೀನಾಮೆಯಿಂದ ತೆರವಾಗಿದ್ದ ಶಿವಮೊಗ್ಗ ಕ್ಷೇತ್ರದಲ್ಲಿ ಅವರ ಪುತ್ರ ಬಿ.ವೈ.ರಾಘವೇಂದ್ರ ಗೆಲುವು ಸಾಧಿಸಿದ್ದಾರೆ. 5 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಮಾತ್ರ ಗೆಲ್ಲುವ ಮೂಲಕ ಬಿಜೆಪಿ ಮುಖಭಂಗ ತಪ್ಪಿಸಿಕೊಂಡಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಮಧು ಬಂಗಾರಪ್ಪ ಅವರು ಒಮ್ಮತದ ಅಭ್ಯರ್ಥಿಯಾಗಿದ್ದರು. ಆದರೆ, ಬಿಜೆಪಿಯ ಭದ್ರಕೋಟೆಯನ್ನು ಛಿದ್ರಮಾಡಿ ಗೆಲುವು ಸಾಧಿಸುವುದು ಸಾಧ್ಯವಾಗಲಿಲ್ಲ....

ಕಾರಣ - 1
ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಉಂಟಾದ ಗೊಂದಲ ಶಿವಮೊಗ್ಗ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸೋಲಿಗೆ ಪ್ರಮುಖ ಕಾರಣವಾಯಿತು. ಹೌದು, ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂದು ಜೆಡಿಎಸ್ ತಿಳಿದಿತ್ತು. ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಜೆಡಿಎಸ್‌ಗೆ ಬೆಂಬಲ ಸೂಚಿಸಿತು. ನಾಮಪತ್ರ ಸಲ್ಲಿಸಲು 2 ದಿನ ಇರುವಾಗ ಜೆಡಿಎಸ್ ಮಧು ಬಂಗಾರಪ್ಪ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿತು. ತರಾತುರಿಯಲ್ಲಿ ಅಭ್ಯರ್ಥಿ ಘೋಷಣೆ ಮಾಡಿದ್ದು, ಹಿನ್ನಡೆಗೆ ಕಾರಣವಾಯಿತು.

ಕಾರಣ - 2
ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಹಿನ್ನಡೆ ಉಂಟಾಗಲು ಶಾಸಕರ ಬಲ ಇಲ್ಲದಿರುವುದು ಪ್ರಮುಖ ಕಾರಣವಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದಲ್ಲಿ ಭದ್ರಾವತಿಯಲ್ಲಿ ಮಾತ್ರ ಕಾಂಗ್ರೆಸ್ ಶಾಸಕರು ಇದ್ದರು. ಜೆಡಿಎಸ್‌ನ ಯಾವುದೇ ಶಾಸಕರು ಜಿಲ್ಲೆಯಲ್ಲಿ ಇಲ್ಲ. ಚುನಾವಣೆಯಲ್ಲಿ ಇದು ಬಹಳ ಪರಿಣಾಮ ಬೀರಿದೆ. ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಬೇಕು ಎಂದು ಪಣತೊಟ್ಟು ಎಲ್ಲಾ ಶಾಸಕರು ಒಟ್ಟಾಗಿ ಪ್ರಚಾರ ನಡೆಸಿದ್ದರು.

ಕಾರಣ - 3
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿಯ ಪ್ರಭಾವ ಕ್ಷೇತ್ರದಲ್ಲಿ ಹೆಚ್ಚಿದ್ದು, ಅದನ್ನು ಛಿದ್ರಗೊಳಿಸಲು ಮೈತ್ರಿಕೂಟ ವಿಫಲವಾಯಿತು. ಅದರಲ್ಲಿಯೂ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅವರೇ ಪಕ್ಷದ ಅಭ್ಯರ್ಥಿಯಾಗಿದ್ದು, ಬಿಜೆಪಿ ಬಲವನ್ನು ಮತ್ತಷ್ಟು ಹೆಚ್ಚು ಮಾಡಿತು. ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಹೇಳಿಕೊಳ್ಳುವಂತಹ ಪ್ರಭಾವಿ ನಾಯಕರು ಇಲ್ಲ. ಇದು ಉಪ ಚುನಾವಣೆಯಲ್ಲಿ ಹಿನ್ನಡೆ ಉಂಟು ಮಾಡಿದೆ.

ಕಾರಣ - 4
ಮಧು ಬಂಗಾರಪ್ಪ ಅವರ ಸೋಲಿಗೆ ಸ್ವ ಕ್ಷೇತ್ರದಲ್ಲಿನ ಹಿನ್ನಡೆಯೂ ಕಾರಣವಾಗಿದೆ. ಸೊರಬ ಕ್ಷೇತ್ರದಲ್ಲಿ ಬಿಜೆಪಿಗೆ 34,719 ಮತ, ಜೆಡಿಎಸ್‌ಗೆ 28,695 ಮತಗಳು ಬಂದಿವೆ. ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಸ್ವ ಕ್ಷೇತ್ರದಲ್ಲಿಯೇ ಹೆಚ್ಚು ಮತಗಳನ್ನು ಪಡೆಯಲು ವಿಫಲರಾದರು. ಸೊರಬ ಕ್ಷೇತ್ರದ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಅವರು ಬಿ.ವೈ.ರಾಘವೇಂದ್ರ ಪರವಾಗಿ ಭರ್ಜರಿಯಾಗಿ ಪ್ರಚಾರ ಮಾಡಿದ್ದರು.

ಕಾರಣ - 5
ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಆದರೆ, ಮೈತ್ರಿ ಫಲಕೊಟ್ಟಿಲ್ಲ. ಜಿಲ್ಲೆಯಲ್ಲಿ ಪ್ರಭಾವಿ ಎನಿಸಿಕೊಂಡ ಕಾಂಗ್ರೆಸ್ ನಾಯಕರು ಇಲ್ಲ. ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ, ಬೇಳೂರು ಗೋಪಾಲಕೃಷ್ಣ ಅವರ ಪ್ರಭಾವ ಅವರವರ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದೆ. ಆದ್ದರಿಂದ, ಕಾಂಗ್ರೆಸ್ ಜೊತೆಗಿನ ಮೈತ್ರಿಯೂ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ವಿಫಲವಾಗಿದೆ.












Click it and Unblock the Notifications