ಲಿಂಗನಮಕ್ಕಿ ತುಂಬಲು ಬರೀ ಅರ್ಧ ಅಡಿ ಬಾಕಿ; ಹನ್ನೊಂದು ಗೇಟ್ ಗಳಿಂದಲೂ ನೀರು, ನೋಡಿ ಜೋಗದ ವೈಭವ
ಶಿವಮೊಗ್ಗ, ಸೆಪ್ಟೆಂಬರ್ 3: ಜಿಲ್ಲೆಯ ಹೊಸನಗರ ಹಾಗೂ ಸಾಗರದಲ್ಲಿ ಭಾರಿ ಮಳೆ ಮುಂದುವರೆದಿದೆ. ಹೀಗಾಗಿ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯದಲ್ಲೂ ನೀರಿನ ಮಟ್ಟ ಹೆಚ್ಚಿದ್ದು, ಲಿಂಗನಮಕ್ಕಿ ತುಂಬಲು ಬರೀ ಅರ್ಧ ಅಡಿ ಬಾಕಿ ಉಳಿದಿದೆ.
ಬೆಂಗಳೂರಿನ ದಾಹ ತಣಿಸಲು ಶರಾವತಿ, ತುಂಗಾ ಭದ್ರಾ ನೀರು
ಜಲಾಶಯದ ಸಾಮರ್ಥ್ಯ ಮಟ್ಟ 1,819 ಅಡಿಯಿದ್ದು, ಇದೀಗ ನೀರು 1,818.50 ಅಡಿಗೆ ಬಂದು ಮುಟ್ಟಿದೆ. ಹೀಗಾಗಿ ಹನ್ನೊಂದು ಗೇಟ್ ಗಳನ್ನೂ ತೆರೆದು ಶರಾವತಿಗೆ ನೀರು ಬಿಡಲಾಗಿದೆ. ಇಂದು ಬೆಳಿಗ್ಗೆ ಹನ್ನೊಂದು ಗೇಟುಗಳ ಮೂಲಕ 15,993 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಸೋಮವಾರ ಸಂಜೆ 3 ಗೇಟ್‌ಗಳ ಮೂಲಕ ನೀರು ಹೊರ ಬಿಡಲಾಗಿತ್ತು.
ನೀರು ಹೆಚ್ಚಿರುವ ಕಾರಣ ಸನಿಹದ ಜೋಗ್ ಫಾಲ್ಸ್ ನಲ್ಲೂ ಜಲಧಾರೆ ಧುಮ್ಮಿಕ್ಕಿದೆ. ತುಂಬಿ ಹರಿಯುತ್ತಿರುವ ನೀರಿನಿಂದ ಜೋಗಜಲಪಾತ ತನ್ನ ಸೌಂದರ್ಯವನ್ನು ಮರಳಿ ಪಡೆದಿದೆ. ಜಲಾನಯನ ಪ್ರದೇಶವಾದ ಹೊಸನಗರ ಮತ್ತು ಸಾಗರದಲ್ಲಿ ಸತತ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನ ಮಳೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.