ಲಾಲೂ ಪ್ರಸಾದ್ ಯಾದವ್‌ಗೆ ಕೊರೊನಾ ಭೀತಿ: ಪೆರೋಲ್‌ಗೆ ಮನವಿ
ರಾಂಚಿ, ಏಪ್ರಿಲ್ 28: ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್‌ಗೆ ಕೊರೊನಾ ಭೀತಿ ಎದುರಾಗಿದ್ದು ಅವರನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಪಕ್ಷ ಬೇಡಿಕೆ ಇಟ್ಟಿದೆ.
ಕಿಡ್ನಿ ವೈಫಲ್ಯದಿಂದ ಲಾಲೂಪ್ರಸಾದ್ ಯಾದವ್ ಬಳಲುತ್ತಿದ್ದು, ಅವರಿಗೆ 71 ವರ್ಷ ವಯಸ್ಸಾಗಿದೆ. ಕಳೆದ ಕೆಲವು ದಿನಗಳಿಂದ ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರ ಆರೋಗ್ಯದ ದೃಷ್ಟಿಯಿಂದ ಅವರನ್ನು ಜಾರ್ಖಂಡ್ ಸರ್ಕಾರ ಏಕೆ ಬಿಡುಗಡೆ ಮಾಡುತ್ತಿಲ್ಲ ಎಂದು ಪಕ್ಷ ಪ್ರಶ್ನಿಸಿದೆ.ಲಾಲೂ ಪ್ರಸಾದ್ ಅವರು ಚಿಕಿತ್ಸೆ ಪಡೆಯುತ್ತಿರುವ ಘಟಕದಲ್ಲೇ ದಾಖಲಾಗಿದ್ದ ರೋಗಿಯೊಬ್ಬರಿಗೆ ಕೊರೊನಾ ದೃಢಪಟ್ಟಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಆಸ್ಪತ್ರೆ ಆಡಳಿತ ಮಂಡಳಿ ಲಾಲೂ ಪ್ರಸಾದ್ ಅವರನ್ನು ಬೇರೆ ವಾರ್ಡ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಕೊರೊನಾ ಸೋಂಕಿತ ರೋಗಿಯ ಸಂಪರ್ಕಕ್ಕೆ ಬಂದಿರುವ ಎಲ್ಲಾ ವೈದ್ಯರು ಮತ್ತು ಇತರೆ ಸಿಬ್ಬಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಹಾಗೂ ವೈದ್ಯ ಉಮೇಶ್ ಪ್ರಸಾದ್ ಮತ್ತು ತಂಡವನ್ನು ಪ್ರತ್ಯೇಕವಾಗಿರಿಸಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.
ಕಳೆದ ಮೂರು ವಾರಗಳಿಂದ ವೈದ್ಯ ಉಮೇಶ್ ಮತ್ತು ತಂಡದಿಂದ ಈ ರೋಗಿಯ ಮೇಲ್ವಿಚಾರಣೆ ನಡೆಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಆ ರೋಗಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆದರೆ ಅದೇ ವೈದ್ಯರು ಲಾಲೂ ಪ್ರಸಾದ್‌ರನ್ನು ನೋಡಿಕೊಳ್ಳುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications