2024 ರೊಳಗೆ ಅಕ್ರಮ ವಲಸಿಗರು ಹೊರಕ್ಕೆ: ಅಮಿತ್ ಶಾ
ರಾಂಚಿ, ಡಿಸೆಂಬರ್ 02: ಇಡೀ ದೇಶದಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಅನುಷ್ಠಾನಗೊಳಿಸುತ್ತೇವೆ, ಆ ಮೂಲಕ 2024 ಲೋಕಸಭಾ ಚುನಾವಣೆಗೂ ಮುನ್ನ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಜಾರ್ಖಂಡ್ ವಿಧಾನಸಭಾ ಚುನಾವಣೆಯ ಬಿಜೆಪಿ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ದೇಶದಾದ್ಯಂತ ಜಾರಿಗೆ ತರುತ್ತೇವೆ, ಅಕ್ರಮ ವಲಸಿಗರನ್ನು ಗುರುತಿಸಿ, ಅವರನ್ನು ದೇಶದಿಂದ ಹೊರದಬ್ಬಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎನ್ಆರ್ ಸಿ ಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರಸ್ ಯುವರಾಜ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡರು. ಈ ಅಕ್ರಮ ವಲಸಿಗರಲ್ಲಿ ರಾಹುಲ್ ಬಾಬಾಗೆ ಸಂಬಂಧಿಗಳಿರಬಹುದು ಎಂದು ತರಾಟೆಗೆ ತೆಗೆದುಕೊಂಡರು.

ಅವರು ಏಕೆ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಅನುಷ್ಠಾನ ಮಾಡಬೇಕು, ಏಕೆ ಅಕ್ರಮ ವಲಸಿಗರನ್ನು ಹೊರ ಹಾಕಬೇಕು ಎಂದು ಕೇಳುತ್ತಾರೆ, ಬಹುಶಃ ಅದರಲ್ಲಿ ಅವರ ಸಂಬಂಧಿಗಳಿರಬಹುದು ಎಂದು ಮೂದಲಿಸಿದರು.
ಜಾರ್ಖಂಡ್ ನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಮೊದಲ ಹಂತದ ಚುನಾವಣೆ ಮುಕ್ತಾಯ ಕಂಡಿದೆ.












Click it and Unblock the Notifications