ಮಹದೇಶ್ವರ ಪ್ರಸಾದ ತರದ ಪತಿ, ನೇಣಿಗೆ ಶರಣಾದ ಪತ್ನಿ!
ರಾಮನಗರ, ಮಾರ್ಚ್ 22; ದೇವರ ದರ್ಶನಕ್ಕೆ ಹೋದ ಪತಿ ದೇವಾಲಯದಿಂದ ಪ್ರಸಾದ ತರಲಿಲ್ಲ ಎಂದು ಗಂಡನೊಂದಿಗೆ ಜಗಳವಾಡಿಕೊಂಡು ಎರಡು ತಿಂಗಳ ಹಸುಗೂಸು ಬಿಟ್ಟು ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈಗ ತಾನೇ ಕಣ್ಣು ಬಿಟ್ಟು ಪ್ರಪಂಚಕ್ಕೆ ಕಾಲಿಟ್ಟ ಎರಡು ತಿಂಗಳ ಕಂದ, ಮತ್ತೊಂದು ಕಡೆ ತಾಯಿ ಇಲ್ಲ ಎಂಬ ವಿಷಯವೇ ಅರಿಯದ ಮಕ್ಕಳು, ಈ ಕರುಳು ಹಿಂಡುವ ದೃಶ್ಯ ಕಂಡುಬಂದಿದ್ದು, ರಾಮನಗರದ ರಾಯರದೊಡ್ಡಿ ಬಡಾವಣೆಯಲ್ಲಿ.
ಶ್ವೇತಾಳ ಎಂಬ 4 ಮಕ್ಕಳ ತಾಯಿ ಕ್ಷುಲ್ಲಕ ಕಾರಣಕ್ಕೆ ತಾನು ವಾಸವಾಗಿದ್ದ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಶ್ವೇತಾಳ ಪತಿ ಶಿವನಂಜ ಹಾಗೂ ಮಗ ಮಹದೇಶ್ವರ ಬೆಟ್ಟದ ದೇವಸ್ಥಾನಕ್ಕೆ ಹೋಗಿದ್ದರು. ವಾಪಸ್ ಮನೆಗೆ ಬರುವಾಗ ದೇವಾಲಯದಿಂದ ಪ್ರಸಾದ ತಂದಿಲ್ಲ ಎಂಬ ಒಂದೇ ಕಾರಣಕ್ಕೆ ಪತಿಯ ಜತೆಗೆ ಜಗಳವಾಡಿದ್ದಾಳೆ ಶ್ವೇತಾ. ಇದೇ ಕಾರಣಕ್ಕೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಭಂದ ಐಜೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆಗೆ ಶರಣಾದ ಶ್ವೇತಾ ಮತ್ತು ಶಿವನಂಜ ಪಕ್ಕದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದವರು. ಕಳೆದ 8 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಜೋಡಿ. ಕೆಲಸ ಅರಿಸಿ ರಾಮನಗರಕ್ಕೆ ಬಂದು ರಾಯರದೊಡ್ಡಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು.ದಂಪತಿಗಳಿಗೆ 4 ಮಕ್ಕಳಿವೆ.
ದಂಪತಿಗೆ ನಾಲ್ಕು ಮಕ್ಕಳಿದ್ದು, ಅವುಗಳಲ್ಲಿ ಎರಡು ತಿಂಗಳ ಹಸುಗೂಸು ಸಹ ಸೇರಿದೆ. ಗಂಡನನ್ನು ಭಯಪಡಿಸಲು ಹೋಗಿ ತೆಗೆದುಕೊಂಡ ಆತುರದ ತೀರ್ಮಾನ ಶ್ವೇತಾ ಚಿರನಿದ್ರೆಗೆ ಜಾರುವಂತೆ ಮಾಡಿದೆ. ಮತ್ತೊಂದು ಕಡೆ ತಾಯಿ ಕಳೆದುಕೊಂಡು ಆ ನಾಲ್ಕು ಕಂದಮ್ಮಗಳು ಅನಾಥವಾಗಿವೆ.
ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು ಶಿವನಂಜ ಮತ್ತು ಶ್ವೇತಾ. ದಂಪತಿಗಳ ನಡುವೆ ಸಣ್ಣ ಪುಟ್ಟ ವಿಷಯಕ್ಕೆ ಗಲಾಟೆ ನಡೆಯುತ್ತಿತ್ತು. ಶಿವನಂಜ ಬೆಳಗ್ಗೆ ಬೇಕರಿಗೆ ಕೆಲಸಕ್ಕೆ ಅಂತಾ ಹೋದರೆ ಸಂಜೆ ಬರುತ್ತಿದ್ದ ತುಂಬಾ ಕಷ್ಟಪಟ್ಟು ಸಂಸಾರ ಸಾಗಿಸುತ್ತಿದ್ದ. ಸಣ್ಣ ಜಗಳಕ್ಕೆ ಶ್ವೇತ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುತ್ತಾರೆ ಪಕ್ಕದ ಮನೆಯ ಗೃಹಿಣಿ.
ಒಟ್ಟಾರೆ ತಾಯಿಯ ಆಸರೆಯಲ್ಲಿ ಬದುಕಿ ಬಾಳಬೇಕಿದ್ದ ಕಂದಮ್ಮಗಳು, ತಾಯಿಯ ದುಡುಕಿನ ನಿರ್ಧಾರದಿಂದ ಅನಾಥವಾಗಿವೆ. ಇನ್ನೂ ಹಾಲು ಕುಡಿಯುತ್ತಿದ್ದ ಮಗುವಿನ ಲಾಲನೆ ಪಾಲನೆ ಯಾರು ಮಾಡುತ್ತಾರೆ? ಎಂಬ ಚಿಂತೆ ಶವ ನೋಡಲು ಬಂದ ಸಂಬಂಧಿಕರದ್ದು.
ಮಕ್ಕಳ ಭವಿಷ್ಯ?; ಆತ್ಮಹತ್ಯೆಗೆ ಶರಣಾದ ಶ್ವೇತಾ ಮತ್ತು ಶಿವನಂಜ ಪ್ರೇಮ ವಿವಾಹವಾದ ಕಾರಣ ಶಿವನಂಜ ತನ್ನ ತಂದೆ ತಾಯಿಯಿಂದ ದೂರವಾಗಿದ್ದ. ಶ್ವೇತಾಳ ತಾಯಿ ಕಡು ಬಡವಾರಗಿದ್ದು, ಆಕೆಗೆ ಕಣ್ಣು ಕಾಣವುದಿಲ್ಲ. ಶವ ಕೊಂಡಯ್ಯಲ್ಲೂ ಹಣ ಇಲ್ಲದ್ದನ್ನು ಮನಗಂಡ ರಾಯರದೊಡ್ಡಿ ಬಡವಾಣೆಯ ಜನರೇ ಚಂದಾ ಎತ್ತಿ ಪೋಲಿಸರ ನೆರವಿನೊಂದಿಗೆ ಶ್ವೇತಾಳ ಶವವನ್ನು ಸಾಗಿಸಲು ನೆರವಾಗಿದ್ದಾರೆ.
ಇನ್ನು ಶಿವನಂಜನ ತಾಯಿ ಕೂಡ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಲ್ಲದೇ ಶಿವನಂಜ ಕೂಡ ಕುಡಿತದ ಚಟ ಅಂಟಿಸಿಕೊಂಡಿದ್ದು ನಾಲ್ಕು ಮಕ್ಕಳ ಭವಿಷ್ಯ ಅತಂತ್ರವಾಗಿದೆ.
ಆತ್ಮಹತ್ಯೆ ತಡೆ ಸಹಾಯವಾಣಿ; ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications