74ನೇ ದಿನಕ್ಕೆ ಕಾಲಿಟ್ಟ ಟೊಯೊಟಾ ಕಾರ್ಮಿಕರ ಹೋರಾಟ: ಸಾಥ್ ಕೊಟ್ಟ ಕುಟುಂಬಸ್ಥರು
ರಾಮನಗರ, ಜನವರಿ 21: ಏಷ್ಯಾದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಬಿಡದಿ ಘಟಕದ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಬಿಕ್ಕಟ್ಟು ಇನ್ನೂ ಶಮನವಾಗಿಲ್ಲ. ಕಂಪನಿಯ ಧೋರಣೆಗಳ ವಿರುದ್ಧ ಸಿಡಿದೆದ್ದ ಕಾರ್ಮಿಕರು ಪ್ರತಿಭಟನೆಗೆ ಧುಮುಕಿ 74 ದಿನ ಕಳೆದರೂ ಕಾರ್ಮಿಕರ ಬೇಡಿಕೆ ಇನ್ನೂ ಈಡೇರಿಲ್ಲ.
ಕಾರ್ಮಿಕರನ್ನು ಕಂಪನಿಯ ಆಡಳಿತ ಮಂಡಳಿಯು ಪಶುಗಳಂತೆ ದುಡಿಸಿಕೊಳ್ಳುವುದಲ್ಲದೇ, ಕಾರ್ಮಿಕರನ್ನು ಗುಲಾಮರಂತೆ ನೋಡುತ್ತಿದೆ ಎಂದು ಆರೋಪಿಸಿ ಕಳೆದ 73 ದಿನಗಳಿಂದ ಪಟ್ಟು ಬಿಡದೆ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಸರ್ಕಾರ ನಡೆಸಿದ ಹಲವು ಸುತ್ತಿನ ಮಾತುಕತೆಗಳು ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ಬಿಕ್ಕಟ್ಟು ಇತ್ಯರ್ಥಪಡಿಸಲು ವಿಫಲವಾಗಿದೆ.
ಲಾಕ್ಔಟ್ ಹಿಂಪಡೆದ ಟೊಯೊಟಾ ಕಿರ್ಲೋಸ್ಕರ್: 66 ಕಾರ್ಮಿಕರ ವಿಚಾರಣೆ ಕಾಯ್ದಿರಿಸಿದ ಕಂಪನಿ
ಇಂದು ನಡೆದ 74ನೇ ದಿನದ ಕಾರ್ಮಿಕ ಹೋರಾಟದಲ್ಲಿ ಮಕ್ಕಳೂಂದಿಗೆ ಕಾರ್ಮಿಕರ ಕುಟುಂಬಸ್ಥರು ಭಾಗವಹಿಸಿ ಕಾರ್ಮಿಕ ಹೋರಾಟಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಿದರು. ಕಾರ್ಮಿಕರ ಮಕ್ಕಳು, ಮಹಿಳೆಯರ ಮತ್ತು ಕುಟುಂಬದ ಇತರೆ ಸದಸ್ಯರು ಧರಣಿ ಸತ್ಯಾಗ್ರಹದಲ್ಲಿ ಭಾಗಿಯಾದರು.
ಏನೂ ಅರಿಯದ ಪುಟ್ಟ ಕಂದಮ್ಮಗಳು ಕಂಪನಿ ಕಾರ್ಮಿಕ ಧೋರಣೆಗಳನ್ನು ಖಂಡಿಸುವ ಬರಹಗಳಿದ್ದ ಬೋರ್ಡ್ ಗಳನ್ನು ಕೈಯಲ್ಲಿ ಹಿಡಿದು ತಮ್ಮ ತಂದೆಯ ಹೋರಾಟಕ್ಕೆ ಬೆಂಬಲಕ್ಕೆ ಕುಳಿತಿದ್ದ ದೃಶ್ಯ, ಕಂಪನಿಯ ಹಠಮಾರಿ ಧೋರಣೆ, ಸರ್ಕಾರ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಂತೆ ಭಾಸವಾಗುತ್ತಿತ್ತು.
ಕಾರ್ಮಿಕರು ಇಂದಿನ ಹೋರಾಟಕ್ಕೆ ಹಲವು ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು, ಕಾರ್ಮಿಕರು ಕಂಪನಿಯ ಮುಂದೆ ಟೊಯೊಟೊ ಆಡಳಿತ ಮಂಡಳಿಯ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.