ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ತಗ್ಗಿದ ಮೃತರ ಸಂಖ್ಯೆ-ಅಲೋಕ್ ಕುಮಾರ್ ಟ್ವೀಟ್
ರಾಮನಗರ, ಆಗಸ್ಟ್ 05: ಅಪಘಾತಗಳ ಹೆದ್ದಾರಿ ಎಂಬ ಕುಖ್ಯಾತಿ ಪಡೆದಿದ್ದ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪೋಲಿಸ್ ಇಲಾಖೆ ಕೈಗೊಂಡ ಕಠಿಣ ಕ್ರಮಗಳಿಂದ ಇದೀಗ ಅಪಘಾತ ಸಂಖ್ಯೆ ಇಳಿಮುಖವಾಗಿದೆ. ಈ ಸಂಬಂದ ಎಡಿಜಿಪಿ ಅಲೋಕ್ ಕುಮಾರ್ ಅವರು ಟ್ವೀಟ್ ಮಾಡುವ ಮೂಲಕ ಪೊಲೀಸ್ ಸಿಬ್ಬಂದಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಡಿಸಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರ ಮೈಸೂರು ಎರಡು ನಗರಗಳನ್ನು ತ್ವರಿತವಾಗಿ ಸಂಪರ್ಕಿಸುವ ನಿಟ್ಟಿನಲ್ಲಿ ದಶಪಥ ಹೆದ್ದಾರಿ ನಿರ್ಮಾಣವಾಗಿತ್ತು. ಆದರೆ ಎಕ್ಸ್‌ಪ್ರೆಸ್ ಹೈವೇ ಉದ್ಘಾಟನೆಯ ನಂತರದಲ್ಲಿ ದಿನ ದಿಂದ ದಿನಕ್ಕೆ ಅಪಘಾತ ಸಂಖ್ಯೆ ಹೆಚ್ಚಾಗಿ ಅಪಘಾತಗಳಲ್ಲಿ ನೂರಾರು ಮಂದಿ ತಮ್ಮ ಪ್ರಾಣ ಕಳೆದುಕೊಂಡ ಹಿನ್ನಲೆಯಲ್ಲಿ ಅಪಘಾತಗಳ ಹೆದ್ದಾರಿ ಎಂದು ಹಣೆಪಟ್ಟಿ ಪಡೆದುಕೊಂಡಿತ್ತು.

ಮೈಸೂರು ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಅಖಾಡಕ್ಕಿಳಿದ ಪೊಲೀಸ್ ಇಲಾಖೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳಿಗೆ ಕಾರಣವಾದ ಅಂಶಗಳ ಬಗ್ಗೆ ತಜ್ಞರೊಂದಿಗೆ ಹೆದ್ದಾರಿ ಪರಿಶೀಲನೆ ನಡೆಸಿ ಅಪಘಾತ ವಲಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವರದಿ ನೀಡಿತು.
ಒಂದು ಅಂಕಿಗಿಳಿದ ಸಾವಿನ ಸಂಖ್ಯೆ
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ದಶಪಥ ಹೆದ್ದಾರಿ ಪರಿಶೀಲನೆ ಕೈಗೊಂಡ ಬೆನ್ನಲ್ಲೇ ಎಡಿಜಿಪಿ ಅಲೋಕ್ ಕುಮಾರ್ ಸ್ವತಃ ಎರಡು ಬಾರಿ ಬೆಂಗಳೂರುನಿಂದ ಮೈಸೂರುವರೆಗೆ ಪರಿಶೀಲನೆ ನಡೆಸಿದರು. ತಮ್ಮೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಇಂಜಿನಿಯರ್ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಅಧ್ಯಯನ ನಡೆಸಿ ಅಪಘಾತ ತಡೆಗೆ ಹಲವು ಕ್ರಮಗಳ ಸಲಹೆ ನೀಡಿದ್ದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸ್ ಇಲಾಖೆ ಹಾಗೂ ಹೆದ್ದಾರಿ ಪ್ರಾಧಿಕಾರ ಅಳವಡಿಸಿಕೊಂಡ ಅಗತ್ಯ ಕ್ರಮಗಳಿಂದ ಅಪಘಾತ ಸಂಖ್ಯೆ ಇಳಿಮುಖವಾಗಿದೆ. ಬೆಂಗಳೂರಿನಿಂದ ಮೈಸೂರಿನ ವರೆಗಿನ ಎಕ್ಸ್‌ಪ್ರೆಸ್ ಹೈವೇಯಲ್ಲಿ ಮೇ ತಿಂಗಳಿನಲ್ಲಿ 29 ಮಂದಿ ಸಾವನ್ನಪ್ಪಿದರು. ಜೂನ್ ತಿಂಗಳಿನಲ್ಲಿ 28 ಮಂದಿ ಅಪಘಾತಗಳಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದರು.
ಹೆದ್ದಾರಿಯಲ್ಲಿ ಸ್ಪಿಡ್ ಲಿಮಿಟ್, ಕ್ಯಾಮರಾ ಅಳವಡಿಕೆ ಹಾಗೂ ಲಘು ವಾಹನ ಸಂಚಾರ ನಿಷೇಧ ಸೇರಿದಂತೆ ಕೈಗೊಂಡ ಕಠಿಣ ಕ್ರಮಗಳಿಂದ ಜುಲೈ ತಿಂಗಳಿನಲ್ಲಿ ನಡೆದ ಅಪಘಾತಗಳಲ್ಲಿ ಕೇವಲ 8 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ 3 ಮಂದಿ ಹಾಗೂ ಮಂಡ್ಯ ಜಿಲ್ಲಾ ವ್ಯಾಪ್ತಿಯ ನಡೆದ ಅಪಘಾತಗಳಲ್ಲಿ 5 ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ ಹೆದ್ದಾರಿ ಅಪಘಾತದಲ್ಲಿ ಎರಡಂಕಿ ಇದ್ದ ಸಾವಿನ ಸಂಖ್ಯೆ ಒಂದಂಕಿಗೆ ಇಳಿದಿದೆ.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೈವೇಯಲ್ಲಿ ಸಾವಿನ ಸಂಖ್ಯೆ ಇಳಿಮುಖವಾಗಿರುವ ಹಿನ್ನಲೆಯಲ್ಲಿ ಟ್ವೀಟ್ ಮಾಡುವ ಮೂಲಕ ಎಡಿಜಿಪಿ ಅಲೋಕ್ ಕುಮಾರ್ ಅವರು ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಒಂದಂಕಿಗಿಳಿದಿರುವ ಸಾವಿನ ಸಂಖ್ಯೆಯನ್ನು ಶೂನ್ಯಕ್ಕಿಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಪಘಾತ ಸಂಖ್ಯೆ ಮತ್ತಷ್ಟು ಇಳಿಮುಖ ಆದರೆ ವೇಗ ಮಿತಿ ಪ್ರತಿ ಗಂಟೆಗೆ 100 ರಿಂದ 120ಕಿ.ಮೀಗೆ ಏರಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.












Click it and Unblock the Notifications