ರಾಮನಗರ ಕೊರೊನಾ ಕಂಟೈನ್ಮೆಂಟ್ ಕಮಾಂಡರ್ ಆಗಿ ಶುಭಾ ನೇಮಕ
ರಾಮನಗರ, ಏಪ್ರಿಲ್ 25: ಪಾದರಾಯನಪುರದ ಗಲಭೆಕೋರರಿಂದಾಗಿ ರಾಮನಗರ ಗ್ರೀನ್ ಝೋನ್ ನಿಂದ ರೆಡ್ ಝೋನ್ ಗೆ ಬದಲಾಗಿದೆ. ಇದೀಗ ರಾಮನಗರ ಕೊರೊನಾ ಕಂಟೈನ್ಮೆಂಟ್ ಝೋನ್ ವ್ಯಾಪ್ತಿಗೆ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಯಾಗಿ ನಗರಸಭೆ ಪೌರಾಯುಕ್ತೆ ಶುಭಾ ಅವರನ್ನು ಸರ್ಕಾರ ನೇಮಕ ಮಾಡಿದೆ.
ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ಪದ್ಮಿನಿದೇವಿ ಪೌರಾಯುಕ್ತೆ ಶುಭಾರವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣ ತರುವುದು ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿಯನ್ನು ನೇಮಕ ಮಾಡಿದ್ದು, ಕೋವಿಡ್-19 ಪ್ರಕ್ರಿಯೆ ಮುಕ್ತಾಯಗೊಳ್ಳುವರೆಗೆ ಶುಭಾ ಕಾರ್ಯನಿರ್ವಾಹಕ ದಂಡಾಧಿಕಾರಿಯಾಗಿ ಮುಂದುವರಿಯಲಿದ್ದಾರೆ ಎಂದು ಸರ್ಕಾರ ಆದೇಶ ಮಾಡಿದೆ.

ಜೈಲಿನ ಸುತ್ತಲಿನ ಒಂದು ಕಿ.ಮೀ ಪ್ರದೇಶ ವ್ಯಾಪ್ತಿಯಲ್ಲಿರುವ ಪೂರ್ವಕ್ಕೆ ಮೈಸೂರು ರೈಲ್ವೆ ಟ್ರ್ಯಾಕ್, ಪಶ್ಚಿಮಕ್ಕೆ ಬೆಂಗಳೂರು ಮೈಸೂರು ಹೆದ್ದಾರಿ, ಉತ್ತರಕ್ಕೆ ಜೈಲು ಅಧೀಕ್ಷಕರ ವಸತಿಗೃಹ ಹಾಗೂ ದಕ್ಷಿಣಕ್ಕೆ ಜಿಲ್ಲಾ ಪೊಲೀಸ್ ಭವನದ ಒಳಗಿನ ಪ್ರದೇಶಗಳನ್ನು ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗಿದೆ. ಜೈಲಿನ ಸುತ್ತ 5 ಕಿಲೋ ಮೀಟರ್ ವ್ಯಾಪ್ತಿಯೊಳಗಿನ ಪ್ರದೇಶಗಳಾದ ಪೂರ್ವಕ್ಕೆ ಮಾಯಾಗಾನಹಳ್ಳಿ, ಪಶ್ಚಿಮಕ್ಕೆ ಜಾನಪದಲೋಕ, ಉತ್ತರಕ್ಕೆ ಹರಿಸಂದ್ರ ಹಾಗೂ ದಕ್ಷಿಣಕ್ಕೆ ಅಂಜನಾಪುರ ಗ್ರಾಮಗಳ ವ್ಯಾಪ್ತಿಯನ್ನು ಕೊರೊನಾ ಬಫರ್ ಝೋನ್ ಎಂದು ಜಿಲ್ಲಾಡಳಿತ ಘೋಷಣೆ ಮಾಡಿದೆ.












Click it and Unblock the Notifications