ಯಶಸ್ಸಿಗಾಗಿ ದೇವರ ಮೊರೆ ಹೋದ ಕುಮಾರಸ್ವಾಮಿ: ಬಿಡದಿಯ ತೋಟದ ಮನೆಯಲ್ಲಿ ಶತ ಚಂಡಿಕಾ ಯಾಗ
ಇದೀಗ ಚುನಾವಣೆ ಹೊಸ್ತಿಲಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ದೇವರ ಮೊರೆ ಹೋಗಿದ್ದು, ರಾಮನಗರ ಜಿಲ್ಲೆಯ ಬಿಡದಿಯ ತಮ್ಮ ತೋಟದ ಮನೆಯಲ್ಲಿ ಶತ ಚಂಡಿಕಾ ಯಾಗ ಹಾಗೂ ಕೋಟಿ ಮೃತ್ಯುಂಜಯ ಜಪ ಹಮ್ಮಿಕೊಂಡಿದ್ದಾರೆ.
ರಾಮನಗರ, ಮಾರ್ಚ್ 3: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಹುಮತ ಸಾಧಿಸಲೇ ಬೇಕು ಎಂದು ಪಣತೊಟ್ಟಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಗೆಲುವಿಗಾಗಿ ರಾಜ್ಯಾದ್ಯಂತ ಪಂಚರತ್ನ ಯಾತ್ರೆ ಕೈಗೊಂಡಿದ್ದಾರೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಪಂಚರತ್ನ ಯಾತ್ರೆಗೆ ಭರ್ಜರಿ ಸ್ಪಂದನೆ ಸಿಕ್ಕಿದ್ದು, ಜೆಡಿಎಸ್ ಅಭ್ಯರ್ಥಿಗಳಲ್ಲಿ ಗೆಲುವಿನ ವಿಶ್ವಾಸ ಮೂಡಿದೆ.
ಇದೀಗ ಚುನಾವಣೆ ಹೊಸ್ತಿಲಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ದೇವರ ಮೊರೆ ಹೋಗಿದ್ದು, ರಾಮನಗರ ಜಿಲ್ಲೆಯ ಬಿಡದಿಯ ತಮ್ಮ ತೋಟದ ಮನೆಯಲ್ಲಿ ಬಹುದೊಡ್ಡ ಯಾಗ ಹಮ್ಮಿಕೊಂಡಿದ್ದಾರೆ. ಮಾರ್ಚ್ 3ರಿಂದ 9 ದಿನಗಳ ಕಾಲ ರಾಮನಗರ ತಾಲೂಕಿನ ಬಿಡದಿಯ ಕೇತಿಗಾನಹಳ್ಳಿಯ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಶತ ಚಂಡಿಕಾ ಯಾಗ ಹಾಗೂ ಕೋಟಿ ಮೃತ್ಯುಂಜಯ ಜಪ ನಡೆಯಲಿದೆ.

ಕುಟುಂಬಸ್ಥರ ಆರೋಗ್ಯಕ್ಕಾಗಿ ಹಾಗೂ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಯಶಸ್ಸಿಗಾಗಿ ಕುಮಾರಸ್ವಾಮಿ ಶತ ಚಂಡಿಕಾ ಯಾಗ ನಡೆಸುತ್ತಿದ್ದು, ಸತತ 9 ದಿನಗಳ ಕಾಲ ಈ ಪೂಜಾ ಕಾರ್ಯ ನಡೆಯಲಿದೆ. ಇಂದಿನಿಂದಲೇ ಪೂಜೆ ಆರಂಭವಾಗಿದ್ದು, ಶೃಂಗೇರಿಯಿಂದ ಆಗಮಿಸಿರುವ 25 ಮಂದಿ ಪುರೋಹಿತರ ತಂದ ಈ ಯಾಗವನ್ನು ನೆರವೇರಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಶತ ಚಂಡಿಕಾ ಯಾಗ ಹಾಗೂ ಕೋಟಿ ಮೃತ್ಯುಂಜಯ ಜಪ ಪೂಜಾ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಎಚ್.ಡಿ ರೇವಣ್ಣ ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದು, ವಿಶೇಷ ಯಾಗದ ಹಿನ್ನಲೆಯಲ್ಲಿ ಆಪ್ತರನ್ನು ಹೊರತುಪಡಿಸಿ ತೋಟದ ಮನೆಗೆ ಇತರರಿಗೆ ನಿರ್ಭಂಧ ಹೇರಲಾಗಿದೆ.

ಮೊಣಕಾಲು ನೋವಿನಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇ ಗೌಡರು ಇತ್ತೀಚಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದರ ಬೆನ್ನಲ್ಲೇ ಕುಮಾರಸ್ವಾಮಿ ಶತ ಚಂಡಿಕಾ ಯಾಗ ಹಾಗೂ ಕೋಟಿ ಮೃತ್ಯುಂಜಯ ಜಪ ನಡೆಸುತ್ತಿದ್ದು, ದೇವೇಗೌಡರ ಆರೋಗ್ಯ ವೃದ್ಧಿಗಾಗಿ ಕುಟುಂಬಸ್ಥರು ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥನೆ ಮಾಡಿದ್ದಾರೆ.
ಹಾಸನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಇನ್ನೂ ಜೆಡಿಎಸ್ ಟಿಕೆಟ್ ಘೋಷಣೆಯಾಗದೇ ಗೊಂದಲದಲ್ಲೇ ಇದ್ದು, ಇನ್ನು ಟಿಕೆಟ್ ಘೋಷಣೆಯಾಗಿರುವ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಗೂ ಕಾರ್ಯಕರ್ತರ ನಡುವೆ ಅಸಮಾಧಾನ ಕಂಡು ಬರುತ್ತಿದೆ. ಸದ್ಯ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲಾ ಸಮಸ್ಯೆಗಳು ದೂರಾಗಿ ಪಕ್ಷ ಯಶಸ್ಸಿನ ಹಾದಿಯತ್ತ ಸಾಗಲಿ ಎಂದು ಕುಮಾರಸ್ವಾಮಿ ವಿಶೇಷ ಪೂಜೆ ನಡೆಸಿದ್ದಾರೆ. ಇನ್ನು ಇತ್ತೀಚಿಗಷ್ಟೇ ಕುಮಾರಸ್ವಾಮಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಾಮನಗರದಲ್ಲಿ ಅದ್ಧೂರಿಯಾಗಿ ಶ್ರೀನಿವಾಸ ಕಲ್ಯಾಣ ನಡೆಸಲಾಗಿತ್ತು.












Click it and Unblock the Notifications