ನೀವು ಕೆಂಪೇಗೌಡರ ಮಗನಾದರೆ, ನಾನು ಕಾಳೇಗೌಡರ ಮೊಮ್ಮಗ; ರಿಷಿ ಕುಮಾರ ಸ್ವಾಮೀಜಿ
ರಾಮನಗರ, ಜನವರಿ 10: "ಕನಕಪುರಕ್ಕೂ ಕಾಳಿಗೂ ಏನ್ ಸಂಬಂಧ ಅಂತೀರಾ, ನಾನು ಕನಕಪುರದ ಮೊಮ್ಮಗ. ನಾನು ಕೆಂಪೇಗೌಡರ ಮಗ ಅಂತೀರಲ್ಲ ಹಾಗೇ ಕಾಳೇಗೌಡರ ಮೊಮ್ಮಗ ನಾನು" ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕಾಳಿ ಮಠದ ರಿಷಿ ಕುಮಾರ ಸ್ವಾಮೀಜಿ ಎದುರೇಟು ಹಾಕಿದ್ದಾರೆ.
ಕೆಲ ದಿನಗಳ ಹಿಂದೆ ಕಪಾಲ ಬೆಟ್ಟಕ್ಕೆ ಭೇಟಿ ನೀಡಿ ಏಸು ಪ್ರತಿಮೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ರಿಷಿ ಕುಮಾರ ಸ್ವಾಮೀಜಿ, ಕಪಾಲ ಬೆಟ್ಟದ ಮೇಲೆ ಪ್ರತಿಮೆ ನಿರ್ಮಾಣಕ್ಕೆ ದಾಸ್ತಾನು ಮಾಡಿರುವ ಕಲ್ಲಿನ ದಿಮ್ಮಿಗಳನ್ನು ಜಿಲ್ಲಾಡಳಿತ ವಶಪಡಿಸಿಕೊಳ್ಳಬೇಕೆಂದು ಆಗ್ರಹಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ನಂತರ ಮಾಧ್ಯಮಗಳೂಂದಿಗೆ ಮಾತನಾಡಿದರು.
ಕಾಳಿ ಮಠಕ್ಕೂ ಕನಕಪುರಕ್ಕೂ ಏನು ಸಂಬಂಧ ಎಂದು ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, "ಹೆದರಿಸಬೇಡಿ. ಇಲ್ಲಿ ಹೆದರಿಕೊಳ್ಳುವವರು ಯಾರೂ ಇಲ್ಲ. ಕನಕಪುರ ನಿಮ್ಮದಲ್ಲ, ರಾಮನಗರ ನಿಮ್ಮದಲ್ಲ, ಕರ್ನಾಟಕ ನಿಮ್ಮದಲ್ಲ, ನಮ್ಮದೂ ರಾಮನಗರನೇ, ಬೆಟ್ಟಕ್ಕೆ ಭೇಟಿ ನೀಡಿದ ಬಳಿಕ ಅಪಪ್ರಚಾರ ಮತ್ತು ದೂರಿನ ಮೂಲಕ ಹೆದರಿಸಲು ನೋಡ್ತಿದ್ದೀರಿ. ಇದಕ್ಕೆಲ್ಲ ನಾವು ಹೆದರುವವನಲ್ಲ. ರಿಷಿ ಕುಮಾರಸ್ವಾಮೀಜಿ ಮೊದಲಿನಂತಿಲ್ಲ, ಹೆದರಿಸಬೇಡಿ" ಎಂದು ಡಿಕೆಶಿ ಹೆಸರೇಳದೆ ಹರಿಹಾಯ್ದರು.

ಪ್ರತಿಮೆ ನಿರ್ಮಾಣಕ್ಕೆ ದಾಸ್ತಾನು ಮಾಡಿರುವ ಬೃಹತ್ ಕಲ್ಲಿನ ದಿಮ್ಮಿಗಳು ಮತ್ತು ಯಂತ್ರವನ್ನು ಇದೇ 19ರ ಒಳಗೆ ತೆರವು ಮಾಡಬೇಕು. ಹೀಗೆ ಮಾಡದಿದ್ದರೆ 20 ರಂದು ಕೋತಿ ಆಂಜನೇಯ ದೇವಾಲಯದಿಂದ ಕಪಾಲ ಬೆಟ್ಟಕ್ಕೆ ಪಾದಯಾತ್ರೆ ಮಾಡ್ತೇವೆ. ಪಾದಯಾತ್ರೆಯಲ್ಲಿ ಅನೇಕ ಸಾಧು ಸಂತರು, ಹಿಂದು ಸಂಘಟನೆಗಳು ಭಾಗವಹಿಸಲಿವೆ" ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.












Click it and Unblock the Notifications