ಸ್ಯಾಂಟ್ರೋ ರವಿ ಬಂಧನದ ಬಗ್ಗೆ ರಾಮನಗರ ಎಸ್‌ಪಿ ಸ್ಪಷ್ಟನೆ: ತನಿಖೆಗೆ ವಿಶೇಷ ತಂಡ ರಚನೆ
ರಾಮನಗರ, ಜನವರಿ 12: ಪೊಲೀಸರ ಕೈಗೆ ಸಿಗದೆ ಚಳ್ಳೆಹಣ್ಣು ತಿನ್ನುಸುತ್ತಿರುವ ಸ್ಯಾಂಟ್ರೋ ರವಿ ರಾಮನಗರದಲ್ಲಿ ಬಂಧನವಾಗಿದೆ ಎಂಬ ಸುದ್ದಿಯನ್ನು ಅಲ್ಲಗಳೆದಿರುವ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ ಬಾಬು, ಸ್ಯಾಂಟ್ರೋ ರವಿ ರಾಮನಗರ ಭಾಗದಲ್ಲಿ ತಲೆ ಮರಸಿಕೊಂಡಿರುವ ಗುಮಾನಿ ಇದೆ. ಹಾಗಾಗಿ ರಾಮನಗರದಲ್ಲಿ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಐಜಿಪಿ ಸೂಚನೆ ಮೇರೆಗೆ ಸ್ಯಾಂಟ್ರೋ ರವಿ ಪತ್ತೆಗಾಗಿ ರಾಮನಗರ ಜಿಲ್ಲೆಯಲ್ಲಿ ಪೊಲೀಸರ ವಿಶೇಷ ತಂಡ ರಚನೆ ಮಾಡಲಾಗಿದೆ. ವಿಶೇಷ ತಂಡದ ನೇತೃತ್ವವನ್ನು ಸ್ವತಃ ಜಿಲ್ಲಾ ವರಿಷ್ಠಾಧಿಕಾರಿ ಸಂತೋಷ ಬಾಬು ವಹಿಸಿದ್ದು, ತಂಡದಲ್ಲಿ ಓರ್ವ ಡಿವೈಎಸ್‌ಪಿ, ಇಬ್ಬರು ಇನ್ಸ್‌ಪೆಕ್ಟರ್, ಐವರು ಕ್ರೈಮ್ ಪೊಲೀಸರು ಕಾರ್ಯನಿರ್ವಹಿಸಲಿದ್ದಾರೆ. ಪೊಲೀಸರು ಈಗಾಗಲೇ ಸ್ಯಾಂಟ್ರೋ ರವಿ ಬಂಧನಕ್ಕೆ ಬಲೆ ಬೀಸಿದ್ದಾರೆ.
ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿರುವ ಸ್ಯಾಂಟ್ರೋ ರವಿ ಮೊಬೈಲ್ ಬಳಸದೆ ಪೊಲೀಸರಿಗೆ ಸುಲಭವಾಗಿ ದಿಕ್ಕು ತಪ್ಪಿಸುತ್ತಿರುವ ಹಿನ್ನಲೆಯಲ್ಲಿ, ಟೆಕ್ನಿಕಲ್ ವಿಭಾಗದಲ್ಲಿ ಪರಿಣಿತಿ ಪಡೆದಿರುವ ರಾಮನಗರ ಎಸ್‌ಪಿ ಸಂತೋಷ ಬಾಬು ಅವರನ್ನು ವಿಶೇಷ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ ಎನ್ನಲಾಗಿದ್ದು, ಎಸ್‌ಪಿ ನೇತೃತ್ವದ ವಿಶೇಷ ತಂಡ ಹಲವು ಭಾಗಗಳಲ್ಲಿ ಹುಡುಕಾಟ ನಡೆಸಿದ್ದಾರೆ.

ಕರ್ನಾಟಕದ ರಾಜಕೀಯದಲ್ಲಿ ಭಾರೀ ಚರ್ಚೆಯಲ್ಲಿರುವ ಹೆಸರು ಸ್ಯಾಂಟ್ರೊ ರವಿ, ಮೈಸೂರಿನಲ್ಲಿ ತನ್ನ ವಿರುದ್ಧ ದೂರು ದಾಖಲಾದ ಬಳಿಕ ಪರಾರಿಯಾಗಿದ್ದು, ಪೊಲೀಸರು ಆತನ ಬಂಧನಕ್ಕೆ 11 ವಿಶೇಷ ತಂಡಗಳನ್ನು ರಚನೆ ಮಾಡಿದ್ದರು. ನಿರೀಕ್ಷಣಾ ಜಾಮೀನು ಕೋರಿ ಸ್ಯಾಂಟ್ರೊ ರವಿ ಕೋರ್ಟ್‌ಗೂ ಅರ್ಜಿ ಸಲ್ಲಿಕೆ ಮಾಡಿದ್ದರು.
ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ ಸ್ಯಾಂಟ್ರೊ ರವಿ ತಲೆಮರೆಸಿಕೊಂಡಿದ್ದು, ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ಅರ್ಜಿ ವಿಚಾರಣೆ ಗುರುವಾರಕ್ಕೆ ಮುಂದೂಡಲಾಗಿತ್ತು.












Click it and Unblock the Notifications