H.D Kumaraswamy: ಬುಧವಾರವೂ ಮುಂದವರೆಯಲಿದೆ ಹೆಚ್‌ಡಿಕೆ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ
ಹೈಕೋರ್ಟ್ ಆದೇಶದ ಬೆನ್ನಲ್ಲೇ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ ಕುಮಾರಸ್ವಾಮಿ ಹಾಗೂ ಸಂಬಂಧಿಕರಿಂದ ಒತ್ತುವರಿಯಾಗಿರುವ 14 ಎಕರೆ ಭೂಮಿಯನ್ನು ತೆರವುಗೊಳಿಸುವ ಕಾರ್ಯಾಚರಣೆ ಮಂಗಳವಾರ ಆರಂಭವಾಗಿದ್ದು, ಬುಧವಾರವೂ ಕೂಡ ಮುಂದುವರೆಯಲಿದೆ. ರಾಮನಗರ ಜಿಲ್ಲಾಡಳಿತ ಮಂಗಳವಾರ ಕಾರ್ಯಾಚರಣೆ ಆರಂಭಿಸಿದ್ದು, ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಸೇರಿದ ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆಯ ಸುತ್ತ ಕಾರ್ಯಾಚರಣೆ ನಡೆಯುತ್ತಿದೆ.
ಮಂಗಳವಾರ ಹೆಚ್.ಡಿ. ಕುಮಾರಸ್ವಾಮಿ ಅವರ ತೋಟದ ಮನೆಗೆ ಜಿಲ್ಲಾಧಿಕಾರಿ, ಕಂದಾಯ ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ಭೇಟಿ ನೀಡಿದರು. ತೋಟ ಮಾಡಲು ಅತಿಕ್ರಮಣ ಮಾಡಿರುವ 14 ಎಕರೆಗೂ ಹೆಚ್ಚಿನ ಸರ್ಕಾರಿ ಭೂಮಿಯನ್ನು ತೆರವು ಮಾಡಲು ಕೆಲಸ ಆರಂಭಿಸಲಾಯಿತು.

ಕೋರ್ಟ್ ಆದೇಶ ಪ್ರತಿ ಜೊತೆ ಒತ್ತುವರಿ ಸರ್ವೆ ವರದಿಯೊಂದಿಗೆ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಮಂಗಳವಾರ ಕೇತಗಾನಹಳ್ಳಿಯ ಹೆಚ್‌ಡಿಕೆ ಒಡೆತನದ ಜಮೀನಿಗೆ ಭೇಟಿ ನೀಡಿದರು. ಉಪವಿಭಾಗಾಧಿಕಾರಿ ಬಿನೋಯ್, ರಾಮನಗರ ತಾಲೂಕು ತಹಸೀಲ್ದಾರ್ ತೇಜಸ್ವಿನಿ, ಸರ್ವೆ ಅಧಿಕಾರಿ ಹನುಮೇಗೌಡ, ಎಸ್‌ಐಟಿ ಅಧಿಕಾರಿಗಳು, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಸಹಿತ ಪೊಲೀಸರು ಅನೇಕ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಹೇಗೆ ನಡೆಯುತ್ತಿದೆ ತೆರವು ಕಾರ್ಯಾಚರಣೆ
ಮೊದಲು ಒತ್ತುವರಿ ಆಗಿರುವ ಜಾಗವನ್ನು ಗುರುತು ಮಾಡಲಾಗಿದ್ದು ನಂತರ ಜಾಗವನ್ನು ತೆರವು ಮಾಡುವ ಕಾರ್ಯಾಚರಣೆ ನಡೆಯಲಿದೆ. ಹೆಚ್. ಡಿ ಕುಮಾರಸ್ವಾಮಿ, ಅವರ ಸಹೋದರಿ ಅನಸೂಯ ಮಂಜುನಾಥ್ ಮತ್ತು ಡಿ.ಸಿ ತಮ್ಮಣ್ಣ ಅವರ ಒಡೆತನದ ಜಮೀನಿನಲ್ಲಿ 14 ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ ಎಂದು ಮಾಜಿ ಸಂಸದ ದಿವಂಗತ ಜಿ. ಮಾದೇಗೌಡ ಹಾಗೂ ಸಮಾಜ ಪರಿವರ್ತನಾ ವೇದಿಕೆಯ ಸಾಮಾಜಿಕ ಹೋರಾಟಗಾರರು ಕೇಸು ದಾಖಲಿಸಿದ್ದರು.
ಕೋರ್ಟ್ ಆದೇಶ ನೀಡಿದ ಮೇಲೂ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದರು. ನಿಗದಿತ ಅವಧಿಯಲ್ಲಿ ತನಿಖಾ ವರದಿ ಸಲ್ಲಿಸಲು ವಿಫಲವಾಗಿದ್ದರು. ಇದರಿಂದ ಸಿಟ್ಟಾದ ಸಮಾಜ ಪರಿವರ್ತನಾ ವೇದಿಕೆಯ ಮುಖ್ಯಸ್ಥ ಎಸ್.ಆರ್. ಹಿರೇಮಠ್ ಮತ್ತು ಸಾಮಾಜಿಕ ಕಾರ್ಯಕರ್ತರು ಹೈಕೋರ್ಟ್‌ನಲ್ಲಿ ಸಿವಿಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸದ್ದರು.
ಜನವರಿ 29ರಂದು ನ್ಯಾಯಮೂರ್ತಿ ಕೆ. ಸೋಮಶೇಖರ್ ನೇತೃತ್ವದ ವಿಭಾಗೀಯ ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸಿದ್ದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ಕೋರ್ಟ್ ಆದೇಶದ ಬೆನ್ನಲ್ಲೇ ಜಮೀನು ಸರ್ವೆ ಮಾಡಿ, ಒತ್ತುವರಿ ತನಿಕೆ ಮಾಡುವಂತೆ ವಿಶೇಷ ತನಿಖಾ ತಂಡವನ್ನು ರಚಿಸಿತ್ತು, ಫೆಬ್ರವರಿ 18 ಮತ್ತು 19ರಂದು ಎಸ್‌ಐಟಿ ಅಧಿಕಾರಿಗಳು ಸರ್ವೆ ಕೆಲಸ ಮುಗಿಸಿದ್ದರು. ಈಗ ಎಸ್‌ಐಟಿ ಅಧಿಕಾರಿಗಳ ವರದಿ ಆಧರಿಸಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಹೋರಾಟ ನಡೆಸುತ್ತೇನೆ
ಒತ್ತುವರಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, 40 ವರ್ಷಗಳ ಹಿಂದ ಈ ಆಸ್ತಿಯನ್ನು ಖರೀದಿ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರ ನಮ್ಮ ಹೆಸರು ಹಾಳು ಮಾಡಲು ಷಡ್ಯಂತ್ರ ಮಾಡಿದ್ದು, ಕಾನೂನು ಮೂಲಕವೇ ಇದಕ್ಕೆ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications