ರಾಮನಗರ ಜಿಲ್ಲೆಯ 5ನೇ ತಾಲ್ಲೂಕು ಕಾರ್ಯಾರಂಭಕ್ಕೆ ದಿನಗಣನೆ
ರಾಮನಗರ, ಜನವರಿ 30; ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಕೊನೆಯ ಬಜೆಟ್‌ನಲ್ಲಿ ರಾಮನಗರ ಜಿಲ್ಲೆಯ 5ನೇ ತಾಲ್ಲೂಕು ಕೇಂದ್ರವನ್ನಾಗಿ ಹಾರೋಹಳ್ಳಿ ಪಟ್ಟಣವನ್ನು ಘೋಷಣೆ ಮಾಡಿದ್ದರು. ಇದೀಗ ಎಲ್ಲಾ ಹಂತದ ಪ್ರಕ್ರಿಯೆಗಳನ್ನು ಮುಗಿಸಿ ತಾಲ್ಲೂಕು ಕೇಂದ್ರವಾಗಿ ಕಾರ್ಯಾರಂಭ ಮಾಡಲು ದಿನಗಣನೆ ಪ್ರಾರಂಭವಾಗಿದೆ.
ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದಲ್ಲಿ ಘೋಷಣೆಯಾದ ನೂತನ ತಾಲ್ಲೂಕು ಕೇಂದ್ರ, ಮಾಜಿ ಮುಖ್ಯಮಂತ್ರಿಗಳ ಕನಸಿನ ಕೂಸು ಹಾರೋಹಳ್ಳಿ. ನೂತನ ತಾಲ್ಲೂಕು ಕೇಂದ್ರವನ್ನಾಗಿ 2019ರ ಫೆಬ್ರವರಿ 8ರಂದು ಮಂಡಿಸಿದ್ದ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಸಮ್ಮಿಶ್ರ ಸರ್ಕಾರ ಮಾಡಿದ್ದ ತಾಲ್ಲೂಕು ಘೋಷಣೆಯನ್ನು ಪ್ರಸ್ತುತ ಬಿಜೆಪಿ ನೇತೃತ್ವದ ಸರ್ಕಾರ ಎಲ್ಲಾ ಪ್ರಕ್ರಿಯೆಗಳನ್ನು ಹಂತ ಹಂತವಾಗಿ ಪೂರೈಸಿ ಅಂತಿಮವಾಗಿ ಅಧಿಸೂಚನೆ ಹೊರಡಿಸಿದೆ. ಈವರೆಗೂ 4 ತಾಲ್ಲೂಕುಗಳನ್ನು ಹೊಂದಿದ್ದ ರಾಮನಗರ ಜಿಲ್ಲೆಯಲ್ಲಿ ಇನ್ನೂ ಕೆಲವೇ ದಿನಗಳಲ್ಲಿ 5ನೇ ತಾಲ್ಲೂಕು ಕಾರ್ಯಾರಂಭ ಮಾಡಲಿದೆ.
ಹಾರೋಹಳ್ಳಿ ಹೋಬಳಿಯನ್ನು ತಾಲ್ಲೂಕು ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ಸಕರಾತ್ಮಕ ಹೆಜ್ಜೆಗಳನ್ನು ಇಟ್ಟಿದೆ. ಕನಕಪುರ ತಾಲೂಕಿನಿಂದ ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಗಳ 26 ಕಂದಾಯ ವೃತ್ತಗಳನ್ನು ಬೇರ್ಪಡಿಸಿ ರಾಜ್ಯಪತ್ರದಲ್ಲಿ ಅಂತಿಮ ಅಧಿ ಸೂಚನೆ ಹೊರಡಿಸಲಾಗಿದೆ.
ಪೂರ್ವಕ್ಕೆ ತಮಿಳುನಾಡು ರಾಜ್ಯದ ಗಡಿ ಆನೇಕಲ್ ತಾಲೂಕು ಮತ್ತು ಬೆಂಗಳೂರು ನಗರ ಜಿಲ್ಲೆಯ ಗಡಿ, ಪಶ್ಚಿಮದಲ್ಲಿ ರಾಮನಗರ ಮತ್ತು ಕನಕಪುರತಾಲೂಕುಗಳ ಗಡಿ, ಉತ್ತರಕ್ಕೆ ಬೆಂಗಳೂರು ದಕ್ಷಿಣ ತಾಲ್ಲೂಕು, ಆನೇಕಲ್ ಮತ್ತು ರಾಮನಗರ ತಾಲ್ಲೂಕು ಗಡಿ, ದಕ್ಷಿಣಕ್ಕೆ ಕನಕಪುರ ತಾಲ್ಲೂಕು ಗಡಿಯನ್ನು ನೂತನ ಹಾರೋಹಳ್ಳಿ ತಾಲೂಕು ಕೇಂದ್ರ ಹೊಂದಲಿದೆ.

26 ಕಂದಾಯ ವೃತ್ತಗಳು
ನೂತನ ಹಾರೋಹಳ್ಳಿ ತಾಲ್ಲೂಕು ಕೇಂದ್ರ 26 ಕಂದಾಯ ವೃತ್ತಗಳನ್ನು ಒಳಗೊಂಡಿದೆ. ಕನಕಪುರ ತಾಲೂಕಿನಲ್ಲಿ ಹಾಲಿ 81 ಕಂದಾಯ ವೃತ್ತಗಳಿವೆ. ಈ ಪೈಕಿ 26 ವೃತ್ತಗಳನ್ನು ಕನಕಪುರ ತಾಲ್ಲೂಕಿನಿಂದ ಬೇರ್ಪಡಿಸಿ ನೂತನ ಹಾರೋಹಳ್ಳಿ ತಾಲೂಕನ್ನು ಸೃಷ್ಠಿಸಲಾಗುತ್ತಿದೆ. ಹಾರೋಹಳ್ಳಿ ಹೋಬಳಿಯ ಹಾರೋಹಳ್ಳಿ, ಗಬ್ಬಾಡಿ, ಕಗ್ಗಲಹಳ್ಳಿ, ಕಾಡು ಜಕ್ಕಸಂದ್ರ, ಕೋನಸಂದ್ರ, ಬನ್ನಿಕುಪ್ಪೆ ಮೇಡ ಮಾರನಹಳ್ಳಿ, ಕೊಟ್ಟಿಗನಹಳ್ಳಿ, ಪಿಚ್ಚನಕೆರೆ, ಚಿಕ್ಕಕಬ್ಬಾಳು, ದೊಡ್ಡಮುದುವಾಡಿ ಗ್ರಾಮ ಲೆಕ್ಕಿಗ ವೃತ್ತಗಳು ತಾಲ್ಲೂಕು ಕೇಂದ್ರಕ್ಕೆ ಸೇರಲಿವೆ.
ಮರಳವಾಡಿ ಹೋಬಳಿಯ ದೊಡ್ಡಮರಳವಾಡಿ, ಚಿಕ್ಕಮರಳವಾಡಿ, ತೇರು ಬೀದಿ, ಯಲಚವಾಡಿ, ಕಲ್ಲನಕುಪ್ಪೆ, ಬನವಾಸಿ, ತಟ್ಟೆಕೆರೆ, ಮಲ್ಲಿಗಮೆಟ್ಟು ತೋಕಸಂದ್ರ, ಎಂ.ಮಯಂ ಬಾಳ್, ಟಿ.ಹೊಸಹಳ್ಳಿ, ಚೀಲೂರು, ದೊಡ್ಡ ದೇನಹಳ್ಳಿ, ಅವರೆಮಾಳ, ಗೋಡೂರು ವೃತ್ತಗಳು ನೂತನ ತಾಲೂಕಿನ ವ್ಯಾಪ್ತಿಗೆ ಬರಲಿವೆ. ಹಾರೋಹಳ್ಳಿ ಹೋಬಳಿಯ ವೃತ್ತಕ್ಕೆ 107 ಗ್ರಾಮಗಳು ಮತ್ತು ಮರಳವಾಡಿ ಹೋಬಳಿಯ ವೃತ್ತಕ್ಕೆ 145 ಗ್ರಾಮಗಳು ಒಟ್ಟು 252 ಗ್ರಾಮಗಳು ನೂತನ ಹಾರೋಹಳ್ಳಿ ತಾಲೂಕು ವ್ಯಾಪ್ತಿಗೆ ಬರಲಿವೆ.

ಮೂಲಸೌಕರ್ಯದ ಕೊರತೆ
ಹಾರೋಹಳ್ಳಿ ತಾಲೂಕು ಕೇಂದ್ರವಾಗಿ ಕಾರ್ಯಾರಂಭ ಮಾಡಲು ಅಗತ್ಯ ಮೂಲಸೌಕರ್ಯದ ಕೊರತೆಗಳು ಎದ್ದುಕಾಣುತ್ತಿದ್ದು, ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದರಷ್ಟೇ ಸಾಲದು ತಾಲ್ಲೂಕಿಗೆ ಬೇಕಾದ ಮೂಲಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಮುಂದೆ ಈಗ ಇರುವ ದೊಡ್ಡ ಸವಾಲು. ಹಾರೋಹಳ್ಳಿ ತಾಲ್ಲೂಕು ಕೇಂದ್ರಕ್ಕೆ ಅತೀ ಮುಖ್ಯವಾಗಿ ತಾಲೂಕು ಕಚೇರಿ, ನ್ಯಾಯಾಲಯ ಸಂರ್ಕೀಣ, ಸ್ಥಳೀಯ ಸಂಸ್ಥೆಗಳ ಕಟ್ಟಡಗಳು, ವಾಣಿಜ್ಯ ಸಂರ್ಕೀಣ, ಸರಕಾರಿ ಕಚೇರಿಗಳು, ಜಿಲ್ಲಾ ಪಂಚಾಯತಿ ಉಪ ವಿಭಾಗಗಳಾದ ಸುಮಾರು 26 ಇಲಾಖೆಗಳ ಕಟ್ಟಡಗಳು ಹಾಗೂ ಅಗತ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನೇಮಕ ಹೀಗೆ ಸಾಕಷ್ಟು ಸವಲತ್ತುಗಳನ್ನು ಹಾರೋಹಳ್ಳಿ ತಾಲ್ಲೂಕು ಕೇಂದ್ರ ಎದರು ನೋಡುತ್ತಿದೆ.

ಸಂತಸ ವ್ಯಕ್ತಪಡಿಸಿದ ಶಾಸಕಿ ಅನಿತಾ ಕುಮಾರಸ್ವಾಮಿ
ಹಾರೋಹಳ್ಳಿ ನೂತನ ತಾಲ್ಲೂಕು ಕೇಂದ್ರ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಗೆಜೆಟ್‌ನಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿದ ಸರ್ಕಾರ ಕ್ರಮಕ್ಕೆ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದರು. ತಾಲ್ಲೂಕು ಆಡಳಿತ ಕಾರ್ಯಾರಂಭಕ್ಕೆ ಅನುವಾಗುವಂತೆ ಅಗತ್ಯ ಮೂಲಸೌಕರ್ಯಗಳನ್ನು ತ್ವರಿತವಾಗಿ ಒದಗಿಸುವಂತೆ ಸರ್ಕಾರವನ್ನು ಶಾಸಕಿ ಅನಿತಾ ಕುಮಾರಸ್ವಾಮಿ ಒತ್ತಾಯಿಸಿದರು.
ನೂತನ ತಾಲ್ಲೂಕು ಕೇಂದ್ರ ರಚನೆಗೆ ಅಂತಿಮ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಹಾರೋಹಳ್ಳಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಜನರು ತಮ್ಮ ಸಂತೋಷ ವ್ಯಕ್ತಪಡಿಸಿದರು. ಅಲ್ಲದೇ ಹಾರೋಹಳ್ಳಿ ತಾಲ್ಲೂಕು ರಚನೆಗೆ ಒತ್ತಾಸೆಯಾಗಿ ನಿಂತ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಎಚ್. ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಹಾರೋಹಳ್ಳಿಯನ್ನು ತಾಲೂಕು ಎಂದು ಘೋಷಿಸಿದ್ದರು. ಬಳಿಕ ತಾಲೂಕು ರಚನೆ ಕುಂಠಿತಗೊಂಡಿತ್ತು. ಈ ಸಂಬಂಧ ಸತತ ಪತ್ರ ವ್ಯವಹಾರ ನಡೆಸಿದ್ದ ಶಾಸಕಿ ಅನಿತಾ ಕುಮಾರಸ್ವಾಮಿ ವಿಧಾನಸಭಾ ಸದನದಲ್ಲೂ ಪ್ರಶ್ನೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಲ್ಲದೇ ನನ್ನ ಪ್ರಶ್ನೆಗಳಿಗೆ ಕಂದಾಯ ಸಚಿವ ಆರ್. ಅಶೋಕ ಉತ್ತರ ನೀಡಿದ್ದರು.
Recommended Video

ಜನರ ಬವಣೆ ತಪ್ಪಲಿದೆ
"ಹಾರೋಹಳ್ಳಿಯನ್ನು ತಾಲೂಕು ಮಾಡುವಂತೆ ಇಲ್ಲಿಯ ಜನರ ಬಹುದಿನದ ಬೇಡಿಕೆ ಇತ್ತು, ಹೋಬಳಿಯ ಜನರು ಸಣ್ಣ ಪುಟ್ಟ ಕೆಲಸಗಳಿಗೂ ಕನಕಪುರ ತಾಲ್ಲೂಕಿನ ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಿತ್ತು. ಪ್ರಸ್ತುತ ಹಾರೋಹಳ್ಳಿ ತಾಲ್ಲೂಕು ರಚನೆಯ ನಂತರ ಇಲ್ಲಿನ ಜನರ ಬವಣೆ ತಪ್ಪುತ್ತದೆ. ಹಾಗಾಗಿ ಜನರು ಖುಷಿಯಾಗಿದ್ದಾರೆ. ಜನರ ಖುಷಿಯೆ ನಮ್ಮ ಖುಷಿ" ಎನ್ನುತ್ತಾರೆ ಶಾಸಕಿ ಅನಿತಾ ಕುಮಾರಸ್ವಾಮಿ.
"ಹಿಂದಿನಿಂದಲೂ ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಯ ಜನರು ಕುಮಾರಸ್ವಾಮಿ ಮೇಲೆ ಪ್ರೀತಿ ಅಭಿಮಾನಿ ಹೊಂದಿದ್ದಾರೆ. ಹಾಗಾಗಿ ಸಿಎಂ ಆಗಿದ್ದ ವೇಳೆ ಹಾರೋಹಳ್ಳಿಯನ್ನು ತಾಲ್ಲೂಕು ಕೇಂದ್ರವಾಗಿ ಘೋಷಣೆ ಮಾಡುವ ಮೂಲಕ ಜನರ ಋಣ ತೀರಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್ ಭೀತಿ ಇರುವ ಹಿನ್ನಲೆಯಲ್ಲಿ ಯಾವುದೇ ಅದ್ಧೂರಿ ಕಾರ್ಯಕ್ರಮ ಮಾಡಲು ಮುಂದಾಗಿಲ್ಲ, ಮುಂದಿನ ದಿನಗಳಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡು ಜನರೊಂದಿಗೆ ಸಂತಸ ಹಂಚಿಕೊಳ್ಳುವುದಾಗಿ" ಎಂದರು.












Click it and Unblock the Notifications