ಚನ್ನಪಟ್ಟಣದಲ್ಲಿ ಪ್ರತ್ಯಕ್ಷರಾದರು ಬರಿಗೈಯಲ್ಲಿ ವಿಭೂತಿ ಕೊಡುವ ಬಾಬಾ
ಚನ್ನಪಟ್ಟಣ, ನವೆಂಬರ್ 28: ಪಟ್ಟಣದ ಚಿಕ್ಕಮಳೂರಿನಲ್ಲಿ ಕಳೆದ ಒಂದು ವಾರದಿಂದ ಸನ್ಯಾಸಿಯೊಬ್ಬರು ಕಾಣಿಸಿಕೊಂಡಿದ್ದು, ಬರಿಗೈನಲ್ಲಿ ಭಕ್ತರಿಗೆ ವಿಭೂತಿ, ತಾಯತ, ಸಿಹಿ ತಿನಿಸು ನೀಡುವ ಈ ಬಾಬಾ ನೋಡಲು ಭಕ್ತರ ದಂಡೇ ಹರಿದುಬರುತ್ತಿದೆ.
ಕಳೆದ ಕೆಲ ದಿನಗಳಿಂದ ಕಾಣಿಸಿಕೊಂಡಿರುವ ಸನ್ಯಾಸಿಯ ಈ ಚಮತ್ಕಾರವನ್ನು ಕಾಣಲು ಜನ ಮರಳೋ ಜಾತ್ರೆ ಮರಳೋ ಎಂಬಂತೆ ಜನ ಮುಗಿಬೀಳುತ್ತಿದ್ದಾರೆ. ಅಷ್ಟೇ ಅಲ್ಲ, ಬಾಬಾನಿಂದ ಆರ್ಶೀವಾದ ಪಡೆದು ಇವರು ಶಿರಡಿ ಬಾಬಾ, ಸತ್ಯಸಾಯಿ ಬಾಬಾ ಅವತಾರ ಎಂದೂ ಹೊಗಳುತ್ತಿದ್ದಾರೆ.
ಪ್ರೇಮ್ ಸಾಯಿ ಬಾಬಾ ಎಂಬ ಹೆಸರಿರುವ ಈ ಸನ್ಯಾಸಿ ವಾರದ ಹಿಂದೆ ಚಿಕ್ಕಮಳೂರಿನ ಸ್ಮಶಾನದಲ್ಲಿ ಪುಟ್ಟಸ್ವಾಮಿಗೌಡ ಎಂಬುವವರ ಸಮಾಧಿ ಬಳಿ ಕಾಣಿಸಿಕೊಂಡಿದ್ದರು. ಇದೀಗ ಮೂರು ದಿನಗಳಿಂದ ಮಂಗಳವಾರಪೇಟೆಯ ಪ್ರಕಾಶ್ ಎಂಬುವವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ.

ಬರಿಗೈನಲ್ಲಿ ಭಕ್ತರಿಗೆ ವಿಭೂತಿ, ತಾಯತ, ಸಿಹಿ ತಿನಿಸು ನೀಡುತ್ತಾ ಪವಾಡ ಮಾಡುತ್ತಿದ್ದಾರೆ, ಅವರಿಂದ ಆಶೀರ್ವಾದ ತೆಗೆದುಕೊಳ್ಳಬೇಕು ಎಂಬ ಸುದ್ದಿ ಜನರ ಬಾಯಿಯಿಂದ ಬಾಯಿಗೆ ಹರಡಿ ಬಾಬಾ ಬಳಿ ಬಂದು ಆರ್ಶಿವಾದ ಪಡೆದು ಸಮಸ್ಯೆಗಳನ್ನು ಹೇಳಿಕೊಂಡು ಕಷ್ಟ ಪರಿಹಾರಕ್ಕೆ ಭಜನೆ ಮಾಡುತ್ತಿದ್ದಾರೆ. ಬರುವ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿಭೂತಿ, ಕೆಲವರಿಗೆ ಸಾಯಿಬಾಬಾ ಫೋಟೋ, ತಾಯತ, ಸಿಹಿ ತಿನಿಸು ನೀಡುತ್ತಿದ್ದಾರಂತೆ.
ಆರ್ಶಿವಾದ ಬೇಡಿ ಬರುವ ಭಕ್ತರಿಂದ ಯಾವುದೇ ಕಾಣಿಕೆ ಪಡೆಯದೇ ದರ್ಶನ ನೀಡಿ, ಸಮಸ್ಯೆಗಳಿಗೆ ಪರಿಹಾರವನ್ನೂ ಹೇಳುತ್ತಿದ್ದಾರೆ ಎಂಬ ಮಾತು ಚನ್ನಪಟ್ಟಣದಾದ್ಯಂತ ಹರಿದಾಡುತ್ತಿದೆ.












Click it and Unblock the Notifications