ಎರಡ್ಮೂರು ತಿಂಗಳಲ್ಲಿ ಹೊಸ ರಾಜಕೀಯ ಬದಲಾವಣೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಚ್.ಡಿ.ಕುಮಾರಸ್ವಾಮಿ
ರಾಮನಗರ, ಮೇ, 18: ಚನ್ನಪಟ್ಟಣದಲ್ಲಿ ಜೆಡಿಎಸ್‌ನಿಂದ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ, ಈಗಿನ ರಾಜಕೀಯ ಬೆಳವಣಿಗೆ ಬಗ್ಗೆ ಆತಂಕ ಬೇಡ. ಇನ್ನು ಎರಡ್ಮೂರು ತಿಂಗಳಲ್ಲಿ ಹೊಸ ರಾಜಕೀಯ ಬದಲಾವಣೆ ಆಗುತ್ತದೆ ಎಂದು ಭವಿಷ್ಯ ಹೇಳಿದ್ದಾರೆ.
ಈಗಿನ ಕಾಂಗ್ರೆಸ್ ಸರ್ಕಾರದ ನಾಟಕ ನೋಡುತ್ತಿದ್ದೀರಿ. ನಾವು ಇವರಿಂದ ಒಳ್ಳೆಯ ಆಡಳಿತದ ನಿರೀಕ್ಷೆ ಇಟ್ಟುಕೊಂಡಿಲ್ಲ. ನಾನು ಸ್ವಾಭಿಮಾನ ಕಳೆದುಕೊಂಡು ಮಂತ್ರಿಗಳ ಮುಂದೆ ನಿಲ್ಲಲು ಆಗುವುದಿಲ್ಲ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುವ ರೀತಿಯಲ್ಲೂ ನಡೆದುಕೊಳ್ಳಲು ನಾನು ತಯಾರಿಲ್ಲ. ಅಭಿವೃದ್ಧಿ ಹಣ ತರುತ್ತಿದೆ, ಆದರೆ ಈ ಸರ್ಕಾರದಲ್ಲಿ ಹಣ ತಂದು ಅಭಿವೃದ್ಧಿ ಮಾಡುತ್ತಾರೆ ಎನ್ನುವ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡಿ. ಪಾರ್ಲಿಮೆಂಟ್ ಚುನಾವಣೆ ಬಳಿಕ ಏನು ಅಭಿವೃದ್ಧಿ ಆಗುತ್ತದೆಯೋ ನೋಡೋಣ ಎಂದರು.

ಎರಡ್ಮೂರು ತಿಂಗಳಲ್ಲಿ ಬದಲಾವಣೆ
ಹಾಗೆಯೆ ಮುಂದೆ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಚುನಾವಣೆ ಬರುತ್ತದೆ. ನನ್ನನ್ನು ಗೆಲ್ಲಿಸಿದಂತೆ ಎಲ್ಲಾ ಸ್ಥಾನಗಳನ್ನು ಗೆಲ್ಲುವಂತೆ ಹೋರಾಟ ಮಾಡೋಣ. ನಾನು ನಿಮ್ಮ ಜೊತೆ ಇರುತ್ತೇನೆ. ಈಗಿನ ರಾಜಕೀಯ ಬೆಳವಣಿಗೆ ಬಗ್ಗೆ ಆತಂಕ ಬೇಡ. ಇನ್ನು ಎರಡ್ಮೂರು ತಿಂಗಳಲ್ಲಿ ಅಂದರೆ ಅಕ್ಟೋಬರ್, ನವಂಬರ್ ತಿಂಗಳಿನೊಳಗೆ ಹೊಸ ರಾಜಕೀಯ ಬದಲಾವಣೆ ಆಗುತ್ತದೆ ಎಂದು ಬಾಂಬ್ ಸಿಡಿಸಿದರು.
ದೇವರ ಅನುಗ್ರಹ ಇದೆ
ಚನ್ನಪಟ್ಟಣದಲ್ಲಿ ನಮ್ಮ ಕಾರ್ಯಕರ್ತರು, ಜನರು ಯಾರ ಆಮೀಷಕ್ಕೂ ಒಳಗಾಗದೆ ನನ್ನ ಕೈ ಹಿಡಿದಿದ್ದಾರೆ. ಹಲವಾರು ಕಡೆ ನಮ್ಮ ಪಕ್ಷಕ್ಕೆ ಹಿನ್ನೆಡೆಯಾಗಿದೆ. ಇದರಿಂದ ಪಕ್ಷದ ಕಾರ್ಯಕರ್ತರು ದೃತಿಗೆಡುವ ಅಗತ್ಯವಿಲ್ಲ. ಹೀಗೆ ಪಕ್ಷಕ್ಕೆ ಈ ರೀತಿಯ ಸೋಲು ಹೊಸದೇನಲ್ಲ. ಪಕ್ಷಕ್ಕೆ ಪ್ರಾಮಾಣಿಕ ಕಾರ್ಯಕರ್ತರ ಜೊತೆ ದೇವರ ಅನುಗ್ರಹ ಇದೆ. ಫಲಿತಾಂಶದಿಂದ ಹಲವರಿಗೆ ಗೊಂದಲ ಇದೆ. ಹಾಗೆಯೆ ನನಗೆ ಹಲವಾರು ಜನ ದೂರವಾಣಿ ಮೂಲಕ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದರು.
ಹಣ ಎಲ್ಲಿಂದ ತರುತ್ತಾರೆಯೋ ನೋಡೋಣ
ಇನ್ನು 15 ದಿನಗಳಲ್ಲಿ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಲಿದ್ದೇನೆ. ಹಾಗೂ ಹೊಸ ಸರ್ಕಾರ ಹೇಳಿರುವ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದು ಅಷ್ಟು ಸುಲಭವಲ್ಲ. ಈಗ ಘೋಷಣೆ ಮಾಡಿರುವ ಯೋಜನೆಗೆ 62 ರಿಂದ 70 ಸಾವಿರ ಕೋಟಿ ರೂಪಾಯಿ ಬೇಕಾಗುತ್ತದೆ. ಇದನ್ನು ಎಲ್ಲಿಂದ ತರುತ್ತಾರೆ ಅನ್ನುವುದನ್ನು ಕಾದು ನೋಡೋಣ ಎಂದರು.
ಚನ್ನಪಟ್ಟಣದಲ್ಲಿ ನನ್ನ ಮೇಲೆ ವಿಶ್ವಾಸ ಇಟ್ಟು ಉಳಿಸಿಕೊಂಡಿದ್ದೀರಿ. ನಿಮ್ಮ ಶಕ್ತಿಯಿಂದ ರಾಜ್ಯದಲ್ಲಿ ದ್ವನಿಯಾಗಿರಲು ಸಹಕಾರ ಕೊಟ್ಟಿದ್ದೀರಿ. ಆದ್ದಾರಿಂದ ಚನ್ನಪಟ್ಟಣದ ಜನತೆ ಜೊತೆ ಇರುತ್ತೇನೆ ಎಂದರು.
ಹಾಗೆಯೆ ಒಂದೊಂದು ಸಮಾಜಕ್ಕೆ ಸೇರಿದ ಮಾಜಿ, ಹಾಲಿ ಶಾಸಕರಿಗೆ ಜವಾಬ್ದಾರಿ ನೀಡಬೇಕು ಅಂದುಕೊಂಡಿದ್ದೇನೆ. ಎಲ್ಲವನ್ನೂ ನನ್ನ ಮೇಲೆ ಹಾಕಬೇಡಿ. ನೀವು ಜವಾಬ್ದಾರಿ ತೆಗದುಕೊಂಡು ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸುವ ಜವಬ್ದಾರಿ ಅವರಿಗೆ ನೀಡುತ್ತೇನೆ. ವಿಭಾಗೀಯವಾರು ನಾಯಕರನ್ನು ಆಯ್ಕೆ ಮಾಡಿ ಜವಾಬ್ದಾರಿ ನೀಡುತ್ತೇನೆ ಎಂದರು.
ಜೊತೆಗೆ ನಾನು ಕಾರ್ಯಕರ್ತರ ಬೆನ್ನೆಲುಭಾಗಿ ನಿಲ್ಲುತ್ತೇನೆ. ರಾಮನಗರ, ಚನ್ನಪಟ್ಟಣದ, ಮಾಗಡಿ, ಕನಕಪುರ ಭಾಗದಲ್ಲಿ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
ಇನ್ನು ಸಿದ್ದರಾಮಯ್ಯಗೆ ಸಿಎಂ ಹಾಗೂ ಡಿ.ಕೆ.ಶಿವಕುಮಾರ್‌ಗೆ ಡಿಸಿಎಂ ಸ್ಥಾನ ವಿಚಾರಕ್ಕೆ ಪ್ರತಿಕ್ರಿಯಿಸಿ,
ಅದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ವಿಚಾರವಾಗಿದೆ. ಅವರ ಪಕ್ಷದವರು ಸೇರಿ ತೀರ್ಮಾನ ಮಾಡಿದ್ದಾರೆ. ಈ ಬಗ್ಗೆ ನಾನೇನೂ ಮಾತನಾಡುವುದಿಲ್ಲ. ಇಂದು ಚನ್ನಪಟ್ಟಣ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ. ಈಗ ಹೊಸ ಸರ್ಕಾರ ರಚನೆ ಆಗಬೇಕು. ಅವರ ಬಜೆಟ್, ಗ್ಯಾರಂಟಿಗಳು ಹೇಗೆಲ್ಲಾ ಅನುಷ್ಠಾನಕ್ಕೆ ತರುತ್ತಾರೆಯೋ ಇಲ್ಲವೋ ಅನ್ನುವುದನ್ನು ಕಾದುನೋಡಬೇಕು ಎಂದರು.
ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎಂತಾ ಒಕ್ಕಲಿಗ ಸ್ವಾಮೀಜಿ ಮಾಡಿದ್ದರೆನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ,ಏನೋ ಅಭಿಮಾನದಲ್ಲಿ ಹೇಳಿರುತ್ತಾರೆ. ಅದರಲ್ಲಿ ತಪ್ಪೇನು ಇಲ್ಲ ಎನ್ನುವ ಮೂಲಕ ಡಿ.ಕೆ.ಶಿ ಪರ ಬ್ಯಾಟಿಂಗ್ ಮಾಡಿದರು. ಇಂದಿನ ದಿನಗಳಲ್ಲಿ ಜಾತಿ ಜಾತಿ ನಡುವೆ ಈ ರೀತಿ ಮಾಡಿದರೆ ಸಂಘರ್ಷ ಏರ್ಪಡುತ್ತದೆ. ಯಾರೇ ಮುಖ್ಯಮಂತ್ರಿ ಆದರೂ ಅವರು ಒಂದು ಸಮಾಜದ ಪರವಾಗಿ ಇರಬಾರದು. ಇಡೀ ರಾಜ್ಯದ ಜನರ ಸಮಸ್ಯೆಗಳನ್ನು ಬಗೆಹರಿಸುವವರು ಸಿಎಂ ಆಗಬೇಕು ಎಂದರು.












Click it and Unblock the Notifications