ವಿಧಾನ ಪರಿಷತ್ ಮರು ಮತದಾನ: ಸೆಕ್ಷನ್ 144 ಜಾರಿ ಮಾಡಿದ ರಾಮನಗರ ಡಿಸಿ
ರಾಮನಗರ, ಡಿಸೆಂಬರ್ 13: ಬೆಂಗಳೂರು ಗ್ರಾಮಾಂತರ- ರಾಮನಗರ ಜಿಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಾರಾಯಣಪುರದ ಮತಗಟ್ಟೆಯಲ್ಲಿ ಚುನಾವಣಾ ಆಯೋಗ ಮರು ಮತದಾನಕ್ಕೆ ಆದೇಶಿಸಿದ ಹಿನ್ನಲೆಯಲ್ಲಿ ರಾಮನಗರ ಜಿಲ್ಲಾಧಿಕಾರಿಗಳು ಮರು ಮತದಾನ ನಡೆಯುವ ಮತಗಟ್ಟೆ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ಕಲಂ 144 ರನ್ವಯ ನಿಷೇದಾಜ್ಞೆ ಆದೇಶ ಹೊರಡಿಸಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕಸಬಾ ಹೋಬಳಿ, ನಾರಾಯಣಪುರ ಗ್ರಾಮ ಪಂಚಾಯತಿಯ ಮತಗಟ್ಟೆ ಸಂಖ್ಯೆ 205ರಲ್ಲಿ ಡಿ.10 ರಂದು ನಡೆದ ಮತದಾನವನ್ನು ಅಸಿಂಧು ಎಂದು ಘೋಷಿಸಿ, ಡಿ.13 (ಇಂದು) ರಂದು ಬೆಳಗ್ಗೆ 8.00 ಗಂಟೆಯಿಂದ ಸಂಜೆ 4.00 ಗಂಟೆಯವರಗೆ ಮರು ಮತದಾನ ನಡೆಸಲು ಆದೇಶ ಮಾಡಿದೆ.
ಭಾರತ ಚುನಾವಣಾ ಆಯೋಗದ ಆದೇಶದ ಮೇರೆಗೆ ಮರು ಮತದಾನ ನಡೆಯುವ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಚುನಾವಣಾ ಪ್ರಕ್ರಿಯೆಯೂ ಮುಕ್ತ ಹಾಗೂ ನಿಷ್ಪಕ್ಷಪಾತ ರೀತಿಯಲ್ಲಿ ಶಾಂತಿಯುತವಾಗಿ ನಡೆಯಬೇಕೆಂಬ ದೃಷ್ಟಿಯಿಂದ, ನಾರಾಯಣಪುರ ಗ್ರಾಮ ಪಂಚಾಯಿತಿಯ ಮತಗಟ್ಟೆ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ ಕಲಂ 144 ರನ್ವಯ ನಿಷೇದಾಜ್ಞೆಯನ್ನು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಹೊರಡಿಸಿದ್ದಾರೆ.

ಸೋಮವಾರ ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಮರು ಮತದಾನ ನಡೆಯುವ ನಾರಾಯಣಪುರ ಮತಗಟ್ಟೆಯ ಸುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ 6 ಗಂಟೆಯಿಂದ ಸೋಮವಾರ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇದಾಜ್ಞೆ ಜಾರಿ ಮಾಡಿದ್ದಾರೆ.

Recommended Video
ಡಿ.10 ರಂದು ವಿಧಾನ ಪರಿಷತ್ ಚುನಾವಣೆಯ 25 ಸ್ಥಾನಗಳಿಗೆ ಮತದಾನ ನಡೆದಿದ್ದು, ಡಿ.14ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಮೇಲ್ಮನೆಯಲ್ಲಿ ರಾಜಕೀಯ ಅಧಿಪತ್ಯ ಸಾಧಿಸಲು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಈ ಚುನಾವಣೆ ಮಹತ್ವವೆನಿಸಿದೆ.












Click it and Unblock the Notifications