ವಿಧಾನ ಪರಿಷತ್ ಚುನಾವಣೆ: ರಾಮನಗರ ಜಿಲ್ಲೆಯಲ್ಲಿ ದಾಖಲೆ ಮತದಾನ!
ರಾಮನಗರ, ಡಿಸೆಂಬರ್ 10: ಬೆಂಗಳೂರು ಗ್ರಾಮಾಂತರ ಚುನಾಯಿತ ಪ್ರತಿನಿಧಿಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ರಾಮನಗರ ಜಿಲ್ಲೆಯಲ್ಲಿ ಶೇ.99.95ರಷ್ಟು ಮತದಾನ ದಾಖಲಾಗಿದೆ.
ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಸ್ಥಾನಕ್ಕೆ ಇಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ನಡೆದ ಮತದಾನದಲ್ಲಿ ರಾಮನಗರ ಜಿಲ್ಲೆ ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸಿದರು.
ರಾಮನಗರ ಜಿಲ್ಲೆಯ ನಾಲ್ಕು ತಾಲೂಕುಗಳ ಪೈಕಿ ಕನಕಪುರ ತಾಲೂಕಿನಲ್ಲಿ ಮಾತ್ರವೇ ಒಬ್ಬ ಮತದಾರ ಮತ ಚಲಾವಣೆ ಮಾಡಿಲ್ಲ. ಇನ್ನುಳಿದ ಮೂರು ತಾಲ್ಲೂಕುಗಳಲ್ಲಿ ಶೇ.100ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿನ 2069 ಮತದಾರರ ಪೈಕಿ 2058 ಮತದಾರರು ಮತಚಲಾಯಿಸಿದ್ದು, ಒಬ್ಬರು ಮಾತ್ರ ಮತದಾನದಿಂದ ದೂರ ಉಳಿದಿದ್ದರು ಎಂಬುದೇ ವಿಶೇಷ.

ಮಾಗಡಿ ತಾಲ್ಲೂಕಿನಲ್ಲಿ 879, ರಾಮನಗರ ತಾಲ್ಲೂಕಿನಲ್ಲಿ 390, ಕನಕಪುರ ತಾಲ್ಲೂಕಿನಲ್ಲಿ 677 ಹಾಗೂ ಚನ್ನಪಟ್ಟಣ ತಾಲ್ಲೂಕಿನಲ್ಲಿ 513 ಮಂದಿ ಮತದಾನ ಮಾಡಿದ್ದಾರೆ. ಒಟ್ಟು 2059 ಮತಗಳಲ್ಲಿ 2058 ಮತಗಳು ಚಲಾವಣೆಗೊಂಡಿವೆ.
ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆಗೆ 126 ಮತಗಟ್ಟೆ ಸ್ಥಾಪನೆ ಮಾಡಲಾಗಿತ್ತು. ಜಿಲ್ಲೆಯಲ್ಲಿ 49 ಸೂಕ್ಷ್ಮ, 24 ಅತಿಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಿ ಹೆಚ್ಚಿನ ಪೊಲೀಸ್ ಭದ್ರತೆ ನೀಡಲಾಗಿತ್ತು. ಚುನಾವಣೆ ಭದ್ರತೆಗೆ ಸಿಪಿಐ, ಪಿಎಸ್‌ಐ ಸೇರಿದಂತೆ 160ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು.
ಚುನಾವಣಾ ಕಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್. ರವಿ, ಜೆಡಿಎಸ್ ಪಕ್ಷದ ಅಭ್ಯರ್ಥಿ ಎಚ್.ಎಂ. ರಮೇಶ್ ಗೌಡ ಹಾಗೂ ಬಿಜೆಪಿ ಅಭ್ಯರ್ಥಿ ಸಿ. ನಾರಾಯಣಸ್ವಾಮಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಮೂರು ಪಕ್ಷದ ನಾಯಕರು ತಮ್ಮ ಅಭ್ಯರ್ಥಿಗಳೊಂದಿಗೆ ಭರ್ಜರಿ ಪ್ರಚಾರ ನಡೆಸಿದ್ದರು. ಅಂತಿಮವಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪೈಪೋಟಿ ನಡೆದಿರುವುದು ಮತದಾನದ ಫಲಿತಾಂಶದಿಂದ ಸ್ಪಷ್ಟವಾಗಿದ್ದು, ಇದೀಗ ಅಭ್ಯರ್ಥಿಗಳ ಹಣೆಬರಹ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಡಿ.14ರಂದು ಅಭ್ಯರ್ಥಿ ಭವಿಷ್ಯ ನಿರ್ಧಾರವಾಗಲಿದೆ.
ಮತದಾನ ಮಾಡಿದ ಗಣ್ಯರು
ಬೆಂಗಳೂರು ಗ್ರಾಮಾಂತರ ಚುನಾಯಿತ ಪ್ರತಿನಿಧಿಗಳ ಕ್ಷೇತ್ರಕ್ಕೆ ನಡೆದ ಮತದಾನದಲ್ಲಿ ರಾಮನಗರ ಜಿಲ್ಲೆಯ ನಾಲ್ಕು ಜನ ಶಾಸಕರು, ಓರ್ವ ಸಂಸದರು ಮತ್ತು ಓರ್ವ ವಿಧಾನ ಪರಿಷತ್ ಸದಸ್ಯರು ತಮ್ಮ ಹಕ್ಕು ಚಲಾಯಿಸಿದರು.
ಮಾಜಿ ಮುಖ್ಯಮಂತ್ರಿ ಹಾಗೂ ಚನ್ನಪಟ್ಟಣ ಶಾಸಕ ಎಚ್.ಡಿ. ಕುಮಾರಸ್ವಾಮಿ ಚನ್ನಪಟ್ಟಣ ನಗರಸಭೆಯಲ್ಲಿ ಸ್ಥಾಪಿಸಿದ್ದ ಮತಗಟ್ಟೆ ಸಂಖ್ಯೆ 168ರಲ್ಲಿ ಮತ ಚಲಾಯಿಸಿದರು. ಈ ವೇಳೆ ನಗರಸಭೆ ಅವರಣದಲ್ಲಿ ಸದಸ್ಯರು ಪಕ್ಷಭೇದ ಮರೆತು ಎಚ್‌ಡಿಕೆಯವರನ್ನು ಮಾತನಾಡಿಸಿದ್ದು ವಿಶೇಷವಾಗಿತ್ತು.

ಕೆಪಿಸಿಸಿ ಅಧ್ಯಕ್ಷ ಹಾಗೂ ಶಾಸಕ ಡಿ.ಕೆ. ಶಿವಕುಮಾರ್ ಕನಕಪುರ ನಗರಸಭೆಯಲ್ಲಿ ಸ್ಥಾಪಿಸಿದ್ದ ಮತಗಟ್ಟೆ ಸಂಖ್ಯೆ 228ರಲ್ಲಿ ಮತ ಚಲಾಯಿಸಿದರು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ರಾಮನಗರ ನಗರಸಭೆ ಅವರಣದಲ್ಲಿ ಸ್ಥಾಪಿಸಿದ್ದ ಮತಗಟ್ಟೆ ಸಂಖ್ಯೆ 189ರಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಅನಿತಾ ಕುಮಾರಸ್ವಾಮಿಗೆ ನಗರಸಭಾ ಸದಸ್ಯರು ಸಾಥ್ ನೀಡಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ.ಕೆ. ಸುರೇಶ್ ರಾಮನಗರ ನಗರಸಭೆಯಲ್ಲಿ ಸ್ಥಾಪಿಸಿದ್ದ ಮತಗಟ್ಟೆ ಸಂಖ್ಯೆ 189ರಲ್ಲಿ ಮತದಾನ ಮಾಡಿದರು. ಸಂಸದರಿಗೆ ಕಾಂಗ್ರೆಸ್ ಸದಸ್ಯರು ಜೊತೆಯಾದರು.
ಇನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್. ರವಿ ಹಾಲಿ ವಿಧಾನ ಪರಿಷತ್ ಸದಸ್ಯರಾಗಿದ್ದು, ಅವರು ಕನಕಪುರ ನಗರಸಭೆಯ ಮತಗಟ್ಟೆ ಸಂಖ್ಯೆ 228ರಲ್ಲಿ ಮತದಾನ ಮಾಡಿದರು. ಜಿಲ್ಲೆಯ ಕಾಂಗ್ರಸ್ ನಾಯಕರ ಬೆಂಬಲದೊಂದಿಗೆ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಮಾಗಡಿ ಕ್ಷೇತ್ರದ ಶಾಸಕ ಎ. ಮಂಜುನಾಥ್ ಮಾಗಡಿ ಪುರಸಭೆಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಅಲ್ಲದೇ ಚುನಾವಣೆಯಲ್ಲಿ ಅಭ್ಯರ್ಥಿ ಮುಖ್ಯವಲ್ಲ ಕುಮಾರಣ್ಣನವರ ಅಭಿವೃದ್ಧಿ ನೋಡಿ ಮತದಾರ ನಮ್ಮ ಅಭ್ಯರ್ಥಿ ಬೆಂಬಲಿಸುತ್ತಾರೆ ಭವಿಷ್ಯ ನುಡಿದರು.












Click it and Unblock the Notifications