ಜೆಡಿಎಸ್ ಪಕ್ಷದ ಜಾತ್ಯಾತೀತ ನಿಲುವಿಗೆ ಕುಮಾರಸ್ವಾಮಿ ತಿಲಾಂಜಲಿ ಬಿಟ್ಟಿದ್ದಾರೆ-ಶಾಸಕ ಎಚ್.ಸಿ ಬಾಲಕೃಷ್ಣ
ರಾಮನಗರ, ನವೆಂಬರ್ 18: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನನ್ನನ್ನು ಭೇಟಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ಮಾಡಿದ್ದು ಸತ್ಯ ಎಂದು ಶಾಸಕ ಜಿ.ಟಿ ದೇವೇಗೌಡ ಹೇಳಿಕೆ ನೀಡಿದ ಬೆನ್ನಲ್ಲೇ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷದ ಹಾಲಿ ಶಾಸಕರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದು ಮಾಗಡಿ ಹೆಚ್.ಸಿ.ಬಾಲಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಎರೇಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನೆ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರ್ಪಡೆ ಬಗ್ಗೆ ನನಗೆ ಗೊತ್ತಿಲ್ಲ. ಈಗಾಗಲೇ ಇಬ್ಬರು ಜೆಡಿಎಸ್ ಮಾಜಿ ಶಾಸಕರು ಕಾಂಗ್ರೆಸ್ ಸೇರಿದ್ದಾರೆ. ಮುಂದೆ ಹಾಲಿ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂದರು.

ಹಿಂದೆ ರಾಜ್ಯದಲ್ಲಿ ಎರಡು ಜಾತ್ಯಾತೀತ ಶಕ್ತಿಗಳು ಇದ್ದವು. ಪ್ರತಿ ಚುನಾವಣೆಯಲ್ಲಿ ಜಾತ್ಯಾತೀತ ಮತಗಳು ವಿಭಜನೆಯಾಗುತ್ತಿದ್ದವು. ಅದರೆ ಜೆಡಿಎಸ್ ಬಿಜೆಪಿ ಮೈತ್ರಿಯಿಂದ ಜಾತ್ಯಾತೀತ ಮತಗಳು ವಿಭಜನೆಯಾಗದೆ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷಕ್ಕೆ ಬರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಿದೆ ಎಂದು ಶಾಸಕ ಹೆಚ್.ಸಿ ಬಾಲಕೃಷ್ಣ ಭವಿಷ್ಯ ನುಡಿದರು.
ಜಾತ್ಯಾತೀತ ನಿಲುವಿಗೆ ತಿಲಾಂಜಲಿ ಇಟ್ಟ ಕುಮಾರಸ್ವಾಮಿ
ಕಾಂಗ್ರೆಸ್ ಪಕ್ಷದ ರೀತಿಯಲ್ಲೇ ಜೆಡಿಎಸ್ ಪಕ್ಷ ಜಾತ್ಯಾತೀತ ನೆಲಗಟ್ಟಿನಲ್ಲಿ ಸ್ಥಾಪಿಸಿದ ಪಕ್ಷ ಆದರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಕೈಜೋಡಿಸುವ ಮೂಲಕ ಜೆಡಿಎಸ್ ಪಕ್ಷದ ಜಾತ್ಯಾತೀತ ನಿಲುವಿಗೆ ತಿಲಾಂಜಲಿ ಬಿಟ್ಟಿದ್ದಾರೆ. ಹಾಗಾಗಿ ಜಾತ್ಯಾತೀತ ನಿಲುವಿಗೆ ಅಂಟಿಕೊಂಡಿರುವ ನಾಯಕರು ಕಾಂಗ್ರೆಸ್ ಪಕ್ಷದ ಕಡೆ ಮುಖ ಮಾಡಿದ್ದಾರೆ ಎಂದು ಹೇಳಿದರು.
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಜನರು ಸೊಂಬೇರಿ ಹಾಗೂ ಉಡಾಫೆ ಸಂಸದರನ್ನು ಆಯ್ಕೆಮಾಡದೆ, ಪ್ರತಿ ದಿನ ನಮ್ಮ ಮಧ್ಯ ಇದ್ದು ಜನರ ಕಷ್ಟ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವಂತಹ ಸಂಸದರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಕರೆ ನೀಡಿದರು. ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಈಗಾಗಲೇ ಸಂಘಟನೆ ಮಾಡುತ್ತಿದ್ದು, ಪ್ರತಿ ಗ್ರಾಮದಲ್ಲೂ ಜನಸ್ಪಂದನೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಶಾಸಕ ಎಚ್.ಸಿ ಬಾಲಕೃಷ್ಣ ತಿಳಿಸಿದರು.












Click it and Unblock the Notifications