ಕನಕಪುರಕ್ಕೆ ಮೆಡಿಕಲ್ ಕಾಲೇಜು ಸ್ಥಳಾಂತರ: ಸೆಪ್ಟೆಂಬರ್ 8 ರಂದು ರಾಮನಗರ ಬಂದ್‌ಗೆ ಕರೆ
ರಾಮನಗರ, ಆಗಸ್ಟ್, 29: ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಸೇರಿದ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ಸ್ಥಾಳಾಂತರ ಮಾಡಿರುವ ಹಿನ್ನೆಲೆಯಲ್ಲಿ ಕೆಂಗಲ್ ಹನುಮಂತಯ್ಯ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಸೆಪ್ಟೆಂಬರ್ 8ರಂದು ರಾಮನಗರ ಬಂದ್‌ಗೆ ಕರೆ ನೀಡಿದೆ.
ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಶಿಫ್ಟ್ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಬಿಜೆಪಿ, ಜೆಡಿಎಸ್ ಮುಖಂಡರು ಸೇರಿದಂತೆ ಹಲವು ರಾಜಕೀಯ ಮುಖಂಡರು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು ಪೂರ್ವಭಾವಿ ಸಭೆ ನಡೆಸಿ ಶ್ರೀಕೆಂಗಲ್ ಹನುಮಂತಯ್ಯ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ರಚನೆ ಮಾಡಿಕೊಂಡು ಹೋರಾಟ ಮಾಡುವ ಪ್ರತಿಜ್ಞೆಯನ್ನು ಸ್ವೀಕರಿಸಿದರು.

ರಾಜೀವ್ ಗಾಂಧಿ ಆರೋಗ್ಯ ವಿವಿ ಆವರಣದಲ್ಲಿ ನಿರ್ಮಾಣವಾಗಬೇಕಾದ ಕೆಂಗಲ್ ಹನುಮಂತಯ್ಯ ಮೆಡಿಕಲ್ ಕಾಲೇಜು ಜಿಲ್ಲಾ ಕೇಂದ್ರದಿಂದ ಯಾವುದೇ ಕಾರಣಕ್ಕೂ ಸ್ಥಳಾಂತರ ಆಗಬಾರದು. ಮೆಡಿಕಲ್ ಕಾಲೇಜು ರಾಮನಗರ ಜಿಲ್ಲೆಯ ಕನಸಿನ ಕೂಸು. ಹಾಗಾಗಿ ಸ್ಥಳಾಂತರ ಖಂಡಿಸಿ ಸರ್ಕಾರದ ಗಮನ ಸೆಳೆಯಲು ಸಭೆಯಲ್ಲಿ ತೀರ್ಮಾನ ಮಾಡಿತ್ತು.
ಚುನಾವಣೆ ಸಮಯದಲ್ಲಿ ಜಿಲ್ಲೆಯ ಹಿತ ಕಾಯುವ ಭರವಸೆ ನೀಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಮನಗರ ತಮ್ಮ ಜಿಲ್ಲೆ ಎಂಬುದನ್ನು ಮರೆತಿದ್ದಾರೆ. ಅವರು ಇದೇ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದರೂ ಸ್ವಾರ್ಥಕ್ಕಾಗಿ ಮೆಡಿಕಲ್ ಕಾಲೇಜ್ ಅನ್ನು ಸ್ಥಳಾಂತರ ಮಾಡಿದ್ದಾರೆ. ಮೆಡಿಕಲ್ ಕಾಲೇಜು ಹಾಗೂ ಆರೋಗ್ಯ ವಿವಿ ಜಿಲ್ಲಾ ಕೇಂದ್ರದಲ್ಲೇ ಉಳಿಯಬೇಕು. ಈ ನಿಟ್ಟಿನಲ್ಲಿ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ. ಮೆಡಿಕಲ್ ಕಾಲೇಜು ರಾಮನಗರದಲ್ಲೇ ಉಳಿಯುವವರೆಗೂ ಹೋರಾಟ ಮಾಡುತ್ತೇವೆ. ಸಾಂಕೇತಿಕವಾಗಿ ಇದೇ ಸೆಪ್ಟೆಂಬರ್ 8ರಂದು ರಾಮನಗರ ಬಂದ್‌ಗೆ ಕರೆ ನೀಡಿದರು.
ಪೂರ್ವಭಾವಿ ಸಭೆಯ ನೇತೃತ್ವವಹಿಸಿ ಮಾತನಾಡಿದ ಮಾಜಿ ಶಾಸಕ ಎ.ಮಂಜುನಾಥ, ಮೆಡಿಕಲ್ ಕಾಲೇಜನ್ನು ರಾಜೀವ್ ಗಾಂಧಿ ವಿವಿ ಕ್ಯಾಂಪಸ್‌ಗೆ ಮಂಜೂರಾಗದೆ ಅದನ್ನು ಕನಕಪುರಕ್ಕೆ ಸ್ಥಳಾಂತರ ಮಾಡುವ ಹುನ್ನಾರ ನಡೆದಿದೆ. ಹಾಗಾಗಿ ಪಕ್ಷಾತೀತವಾಗಿ ಹೋರಾಟಕ್ಕೆ ಮುಂದಾಗಿದ್ದೇವೆ, ಮೆಡಿಕಲ್ ಕಾಲೇಜು ನಮ್ಮ ಹಕ್ಕು, ನಮ್ಮ ಹಕ್ಕಿಗಾಗಿ ಹೋರಾಟದ ಹಾದಿ ತುಳಿದ್ದಿದ್ದೇವೆ.
ಹಾಗಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜೀವ್ ಗಾಂಧಿ ವಿವಿಗೆ ಮಂಜೂರಾಗಿರುವ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರ ಮಾಡುವ ಬದಲು ಕನಕಪುರಕ್ಕೆ ಹೊಸ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿಕೊಳ್ಳಲಿ. ರಾಜೀವ್ ಗಾಂಧಿ ವಿವಿ ಹಣದಲ್ಲಿ ಮೆಡಿಕಲ್ ನಿರ್ಮಾಣ ಮಾಡಿಕೊಳ್ಳುವುದು ಎಷ್ಚು ಸರಿ. ಮೆಡಿಕಲ್ ಕಾಲೇಜಿಗಾಗಿ ಜನರು ಒಂದಾಗಿದ್ದಾರೆ. ತಮ್ಮ ನಿರ್ಧಾರದಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಹಿಂದೆ ಸರಿಯದಿದ್ದರೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications