ರಾಮನಗರ; ಜನ ಮೆಚ್ಚುವ ಕೆಲಸ ಮಾಡಿದ ಬೆಂಗಳೂರು ನಿವಾಸಿ
ರಾಮನಗರ, ಮೇ 27; ಮಹಾಮಾರಿ ಕೋವಿಡ್ ಆರ್ಭಟ ತಡೆಯುವ ನಿಟ್ಟಿನಲ್ಲಿ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದೆ. ಈ ಸಮಯವನ್ನು ವ್ಯರ್ಥವಾಗಿ ಕಳೆಯದೇ ಬೆಂಗಳೂರಿನ ನಿವಾಸಿಯೊಬ್ಬರು ಸೈಕಲ್ ಮೂಲಕ ಹಳ್ಳಿ-ಹಳ್ಳಿ ಸುತ್ತಿ ಕೋವಿಡ್ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಬೆಂಗಳೂರು ನಿವಾಸಿಯಾದ ಮಲ್ಲೇಶ್ ಲಾಕ್‌ಡೌನ್ ಜಾರಿಯಾದ ಹಿನ್ನಲೆಯಲ್ಲಿ ಚನ್ನಪಟ್ಟಣಕ್ಕೆ ಬಂದು ತಾಲೂಕಿನ ಸಿದ್ದೇಗೌಡನದೊಡ್ಡಿ ಗ್ರಾಮದಲ್ಲಿ ಹಸು ಸಾಕಣೆ ಮಾಡಿಕೊಂಡು ಬದುಕು ನಡೆಸುತ್ತಿದ್ದಾರೆ. ಅಲ್ಲದೇ ಬಿಡುವಿನ ವೇಳೆಯಲ್ಲಿ ಕೋವಿಡ್ ಜಾಗೃತಿಗೆ ಮೂಡಿಸುತ್ತಿದ್ದಾರೆ.
ಮಲ್ಲೇಶ್ ತಮ್ಮ ಸೈಕಲ್‌ಗೆ ಪುಟ್ಟ ಧ್ವನಿವರ್ಧಕ ಅಳವಡಿಸಿಕೊಂಡು ಹಳ್ಳಿ-ಹಳ್ಳಿಗೆ ಭೇಟಿ ನೀಡಿ ಜನರಿರುವ ಸ್ಥಳಗಳಲ್ಲಿ ಧ್ವನಿವರ್ಧಕದ ಮೂಲಕ ಕೊರೊನಾ ಸೋಂಕಿನಿಂದ ಯಾವ ರೀತಿ ರಕ್ಷಣೆ ಪಡೆಯಬೇಕು, ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಪಾಲನೆ ಮುಂತಾದವುಗಳ ಸಂದೇಶ ಸಾರುತ್ತಿದ್ದಾರೆ.

ತಾಲೂಕಿನ ವಿರುಪಾಕ್ಷಿಪುರ, ಕೋಡಂಬಳ್ಳಿ, ಹೊಂಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಹಳ್ಳಿ-ಹಳ್ಳಿಗೂ ಸೈಕಲ್ ಮೇಲೆ ತೆರಳಿ ಗ್ರಾಮಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಜನ ಜಾಗೃತಿ ಜಾಥಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಗ್ರಾಮಗಳ ಜನರು ಮಲ್ಲೇಶ್ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದ್ದಾರೆ.
ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದುಕೊಂಡು ಗುರುವಾರ ಸಹ ಅವರು ವಿರುಪಾಕ್ಷಿಪುರ ಗ್ರಾಮ ಪಂಚಾಯತಿಯಲ್ಲಿ ಜಾಗೃತಿ ಮೂಡಿಸಿದ್ದಾರೆ. ಮಂಗಾಡಹಳ್ಳಿ, ಬಲ್ಲಾಪಟ್ಟಣ, ಚೌಡೇಶ್ವರಿ ನಗರ, ಕೋಡಂಬಳ್ಳಿ ಗ್ರಾಮಗಳಲ್ಲಿ ಸೈಕಲ್ ಮೂಲಕ ಸಂಚಾರ ನಡೆಸಿದ್ದಾರೆ.












Click it and Unblock the Notifications