ಕುಮಾರಸ್ವಾಮಿ ಮಗ್ಗಲು ಚೂರಿ ಇದ್ದಂತೆ: ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಆರೋಪ
ರಾಮನಗರ, ಡಿಸೆಂಬರ್ 24: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಲೋ ಪಾಯಿಸನ್ ಇದ್ದ ಹಾಗೆ, ಅವರ ಜೊತೆಯಲ್ಲಿದ್ದವರಿಗೆ ಮಗ್ಗಲು ಚೂರಿ. ಅವರು ಚುಚ್ಚುವುದೇ ಗೊತ್ತಾಗಲ್ಲ ಎಂದು ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಗಂಭೀರವಾಗಿ ವಾಗ್ದಾಳಿ ನಡೆಸಿದ್ದಾರೆ.
ರಾಮನಗರದ ಬಿಡದಿ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಚ್.ಡಿ. ಕುಮಾರಸ್ವಾಮಿ ಈಗಾಗಲೇ ಹಲವು ನಾಯಕರನ್ನು ನಂಬಿಸಿ, ವಂಚಿಸಿದ್ದಾರೆ. ಅವರ ವಂಚನೆಗೆ ಬಲಿಯಾದವರಲ್ಲಿ ನಾನು ಒಬ್ಬ ಎಂದು ತಮ್ಮ ಹಳೆ ಸ್ನೇಹಿತನ ವಿರುದ್ದ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಹರಿಹಾಯ್ದರು.
ಜೆಡಿಎಸ್ ಪಕ್ಷಕ್ಕೆ ರಾಜ್ಯದಲ್ಲಿ ನೆಲೆಯೇ ಇಲ್ಲ. ನನ್ನ ತಮ್ಮನಿಗೆ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಟಿಕೆಟ್ ಕೊಟ್ಟು, ಮುಖಂಡರಿಗೆ ಮತ ಹಾಕಿಸಬೇಡಿ ಎಂದು ಕುಮಾರಸ್ವಾಮಿ ಹೇಳಿದ್ದರು. ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಕನಕಪುರದ ನಿಷ್ಠಾವಂತ ಜೆಡಿಎಸ್ ಮುಖಂಡ ಡಿ.ಎಂ. ವಿಶ್ವನಾಥ್‌ಗೆ ಮತ ಹಾಕಬೇಡಿ ಎಂದು ಸಂದೇಶ ನೀಡಿದ್ದಾರೆ ಎಂದು ಆರೋಪಿಸಿದರು.

ಈಗಾಗಲೇ ಹಲವು ಶಾಸಕರು ಜೆಡಿಎಸ್ ಪಕ್ಷ ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಸಕರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿದ್ದಾರೆ. ಶಾಸಕರಾದ ಪುಟ್ಟರಾಜು, ಶಿವಲಿಂಗೇಗೌಡ ಸೇರಿದಂತೆ ಹಲವು ಜೆಡಿಎಸ್ ಶಾಸಕರು ಪಕ್ಷ ಬಿಡುತ್ತಾರೆ ಎಂದು ಎಚ್.ಸಿ. ಬಾಲಕೃಷ್ಣ ಭವಿಷ್ಯ ನುಡಿದರು.
ತನ್ನ ಪಕ್ಷದ ಮುಖಂಡರ ಏಳಿಗೆಯನ್ನೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಹಿಸುವುದಿಲ್ಲ. ಪಕ್ಕದಲ್ಲಿ ಇರುವವರಿಗೆ ಮೊದಲು ಕುಮಾರಸ್ವಾಮಿ ಚುಚ್ಚುತ್ತಾರೆ. ನಾನೂ ಕೂಡ ಅವರಿಂದ ಚುಚ್ಚಿಸಿಕೊಂಡಿದ್ದೇನೆ ಎಂದು ತಮ್ಮ ಹಳೆಯ ದಿನಗಳನ್ನು ಎಚ್.ಸಿ. ಬಾಲಕೃಷ್ಣ ನೆನಪಿಸಿಕೊಂಡರು.

ನನ್ನಂತೆಯೇ ಎಚ್.ಡಿ. ಕುಮಾರಸ್ವಾಮಿ ಹಲವು ನಾಯಕರಿಗೆ ಪಕ್ಕದಲ್ಲಿಟ್ಟುಕೊಂಡೇ ಬೆನ್ನಿಗೆ ಚೂರಿ ಹಾಕಿದ್ದಾರೆ. ಇದಕ್ಕೆ ಪರಿಷತ್ ಚುನಾವಣೆಯಲ್ಲಿ ಮತದಾರರು ತಕ್ಕ ಬುದ್ದಿ ಕಲಿಸಿದ್ದಾರೆ. ಇನ್ನು ಅವರೊಂದಿಗಿರುವ ಮಂದಿಯೂ ಪಕ್ಷ ಬಿಟ್ಟು ಹೊರ ಬರಲಿದ್ದು, ಅವರು ಮತ್ಯಾವ ಸರ್ಕಾರ ರಚಿಸುವ ಕನಸು ಕಾಣುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಎಚ್.ಸಿ. ಬಾಲಕೃಷ್ಣ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಮಾತಿನಲ್ಲೇ ಕುಟುಕಿದರು.












Click it and Unblock the Notifications