Assembly election 2023: 1,000 ಮಹಿಳೆಯರಿಗೆ ಉಚಿತ ನಿವೇಶನ ಹಂಚಿಕೆಯ ಭರವಸೆ ನೀಡಿದ ಮಾಗಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ರಾಮನಗರ, ಮಾರ್ಚ್, 12: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜಕಾರಣಿಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಹಾಗೆಯೇ ಮಾಗಡಿಯಲ್ಲೂ ಕೂಡ ರಾಜಕಾರಣಿಗಳು ಮತದಾರನ್ನು ಸೆಳೆಯಲು ನಾನಾ ಕಸರತ್ತು ಆರಂಭಿಸಿದ್ದಾರೆ. ಜೆಡಿಎಸ್ ಪಂಚರತ್ನ ರಥಯಾತ್ರೆಯ ಮೂಲಕ ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರಚಾರ ಮುಗಿಸಿದೆ. ಇನ್ನು ಕಾಂಗ್ರೆಸ್ ಪಕ್ಷ ಪ್ರಜಾಧ್ವನಿ ಯಾತ್ರೆಯ ಮೂಲಕ ಚುನಾವಣೆ ಪ್ರಚಾರ ಆರಂಭಿಸಿವೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಚಾರದ ನಡುವೆ ಬಿಜೆಪಿ ಪಕ್ಷವೂ ಕೂಡ ಪ್ರಚಾರಕ್ಕೆ ವೇಗ ಕೊಡಲು ಮುಂದಾಗಿದೆ. ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಸಂಭಾವ್ಯ ಅಭ್ಯರ್ಥಿ ಪ್ರಸಾದ್ ಗೌಡ ಭರ್ಜರಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಕ್ಷೇತ್ರದಲ್ಲಿ ಸದ್ದಿಲ್ಲದ ತಮ್ಮ ಪ್ರಚಾರಕ್ಕ ಹವಾ ಸೃಷ್ಟಿಸುವ ನಿಟ್ಟಿನಲ್ಲಿ ಸುಮಾರು ಸಾವಿರ ಮಂದಿ ಮಹಿಳೆಯರಿಗೆ ಉಚಿತ ನಿವೇಶನದ ಆಫರ್ ನೀಡಿದ್ದಾರೆ.

ಮಹಿಳೆಯರಿಗೆ ನಿವೇಶನ ಹಂಚಿಕೆಯ ಭರವಸೆ
ಸಾವಿರ ಮಹಿಳೆಯರಿಗೆ ಫ್ರೀ ಸೈಟ್ ವಿತರಣೆ ಸಂಬಂಧ ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಾಗಡಿ ವಿಧಾನಸಭಾ ಕ್ಚೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಪ್ರಸಾದ್ ಗೌಡ, ನಾನು ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೇನೆ. ಈ ವೇಳೆ ಪ್ರತಿ ಗ್ರಾಮದಲ್ಲೂ ಮಹಿಳೆಯರು ನಿವೇಶನ ನೀಡುವಂತೆ ಮನವಿ ಮಾಡುತ್ತಿದ್ದರು ಎಂದರು.
ಕ್ಷೇತ್ರದ ಮಹಿಳೆಯರ ಕೋರಿಕೆಗೆ ಮನ್ನಣೆ ನೀಡುವ ನಿಟ್ಟಿನಲ್ಲಿ ಸುಮಾರು ಒಂದು ಸಾವಿರ ಮಹಿಳೆಯರಿಗೆ ನಿವೇಶನ ಹಂಚಿಕೆ ಮಾಡಲು ಮುಂದಾಗಿದ್ದೇನೆ. ಇದಕ್ಕಾಗಿ ಈಗಾಗಲೇ ಬಿಡದಿ ಹೋಬಳಿಯ ಕೆಂದಪ್ಪನಹಳ್ಳಿ ಗ್ರಾಮದಲ್ಲಿ 6 ಹೆಕ್ಟೇರ್ ಜಮೀನು ಮೀಸಲಿಟ್ಟಿದ್ದೇನೆ. ಇದನ್ನು ಮೂರು ಸಾವಿರ ಮಹಿಳೆಯರಿಗೆ ಉಜಿತವಾಗಿ ಹಂಚಿಕೆ ಮಾಡಲು ನಿರ್ಧಾರ ಮಾಡಿದ್ದೇನೆ ಎಂದು ತಿಳಿಸಿದರು.
ಯೋಜನೆಗೆ ಅರ್ಜಿ ಸಲ್ಲಿಸುವಂತೆ ಮನವಿ
ಬಿಡದಿ ಹೋಬಳಿಯಲ್ಲಿ ಮೀಸಲಿಟ್ಟ ಜಮೀನಲ್ಲಿ 15×20 ಅಳತೆಯ ನಿವೇಶನ ಹಂಚಿಕೆ ಮಾಡಲು ಮುಂದಾಗಿದ್ದಾರೆ. ಕ್ಷೇತ್ರದ ವ್ಯಾಪ್ತಿಯ ಅಂಗವಿಕಲರು, ವಿಧವೆಯರು, ಅನಾಥ ಮಹಿಳೆಯರು ಹಾಗೂ ಜಮೀನು ಇಲ್ಲದ ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್ ಹೊಂದಿರುವ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.

ಇನ್ನು ಅಸಹಾಯಕ ಮಹಿಳೆಯರಿಗೆ ನಿವೇಶನ ಹಂಚಿಕೆ ಮಾಡುವ ಬಗ್ಗೆ ಈಗಾಗಲೇ ನಮ್ಮ ತಂದೆ-ತಾಯಿಯವರೊಂದಿಗೆ ಚರ್ಚೆ ಮಾಡಿ ಅನುಮತಿ ಪಡೆದಿದ್ದೇನೆ. ಮುಂದೆ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾದರೆ ಅಥವಾ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮನೆ ಕಟ್ಟಿಕೊಡುವ ಭರವಸೆ ನೀಡಿದ್ದಾರೆ.












Click it and Unblock the Notifications