ರಾಮನಗರದ ಚುನಾವಣಾ ಕಣ; ಅಭ್ಯರ್ಥಿಗಳ ವಿವರಗಳು
ಪ್ರತಿಬಾರಿಯ ಚುನಾವಣೆಯಲ್ಲಿಯೂ ರಾಜ್ಯದ ಗಮನ ಸೆಳೆಯುವ ಜಿಲ್ಲೆಗಳಲ್ಲಿ ರಾಮನಗರ ಸಹ ಒಂದು. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕಾರ್ಯಕ್ಷೇತ್ರ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ತವರು ಜಿಲ್ಲೆ ಇದು. 2023ರ ವಿಧಾನಸಭೆ ಚುನಾವಣೆಯಲ್ಲಿಯೂ ಹಲವು ಕಾರಣಗಳಿಗೆ ರಾಮನಗರದ ಚುನಾವಣಾ ಕಣ ಜನರ ಅಚ್ಚರಿಗೆ ಕಾರಣವಾಗಿದೆ. ಜಿಲ್ಲೆಯ ಚುನಾವಣಾ ಫಲಿತಾಂಶ ಏನಾಗಲಿದೆ? ಎಂದು ಜನರು ಈಗಾಗಲೇ ಬಿಸಿ-ಬಿಸಿ ಚರ್ಚೆಯನ್ನು ಮಾಡುತ್ತಿದ್ದಾರೆ.
ಕರ್ನಾಟಕದ ವಿಧಾನಸಭೆ ಚುನಾವಣೆ ಮೇ 10ರಂದು ಚುನಾವಣೆ ನಡೆಯಲಿದೆ. ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ರಾಮನಗರ ಜಿಲ್ಲೆಯಲ್ಲಿ ರಾಮನಗರ, ಕನಕಪುರ, ಮಾಗಡಿ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿವೆ. ರಾಮನಗರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ ಇರುತ್ತದೆ. ಚನ್ನಪಟ್ಟಣದಲ್ಲಿ ಬಿಜೆಪಿ ನಾಯಕ ಸಿ. ಪಿ. ಯೋಗೇಶ್ವರ್ ಪ್ರಭಾವ ಹೊಂದಿದ್ದಾರೆ. ಉಳಿದ ಕಡೆ ಬಿಜೆಪಿ ಬಾವುಟ ಹಾರಿಸಲು ಪಕ್ಷಕ್ಕೆ ಸಾಧ್ಯವಾಗಿಲ್ಲ.

ಈ ಬಾರಿಯ ಚುನಾವಣೆಯಲ್ಲಿ ರಾಮನಗರದಲ್ಲಿ ಹಲವು ಲೆಕ್ಕಾಚಾರಗಳು ನಡೆಯುತ್ತಿವೆ, ಅದಕ್ಕೆ ಕಾರಣ ಡಿ. ಕೆ. ಶಿವಕುಮಾರ್. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಅಲ್ಲದೇ ಬಿಜೆಪಿ ಕನಕಪುರ ಕ್ಷೇತ್ರದಲ್ಲಿ ಡಿ. ಕೆ. ಶಿವಕುಮಾರ್ ಎದುರಾಳಿಯಾಗಿ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಆರ್. ಅಶೋಕ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಇದರಿಂದಾಗಿ ಕನಕಪುರದ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕಳೆದ ಚುನಾವಣೆಯಲ್ಲಿ ರಾಮನಗರ, ಚನ್ನಪಟ್ಟಣ ಎರಡೂ ಕಡೆ ನಿಂತು ಗೆಲುವು ಸಾಧಿಸಿದ್ದರು. ಬಳಿಕ ಚನ್ನಪಟ್ಟಣ ಉಳಿಸಿಕೊಂಡು ರಾಮನಗರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಮನಗರ ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದು ಬಂದರು. ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದ ಕಾರಣ ಕಾಂಗ್ರೆಸ್ ಸಹ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಅನಿತಾ ಕುಮಾರಸ್ವಾಮಿಗೆ ಬೆಂಬಲ ನೀಡಿತ್ತು.
ಆದರೆ ಈ ಬಾರಿಯ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯುತ್ತಿಲ್ಲ. ರಾಮನಗರದಲ್ಲಿ ಎಚ್. ಡಿ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ದಂಪತಿಗಳ ಪುತ್ರ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಎಚ್. ಡಿ. ಕುಮಾರಸ್ವಾಮಿ ಚನ್ನಪಟ್ಟಣದಿಂದಲೇ ಕಣಕ್ಕಿಳಿಯಲಿದ್ದಾರೆ.
ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಈ ಬಾರಿಯ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿ ಬಂದಿತ್ತು. ಆದರೆ ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೇ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಈ ಬಾರಿಯ ಚುನಾವಣೆಗೆ ನಿಖಿಲ್ ಅಭ್ಯರ್ಥಿಯಾಗುತ್ತಾರೆ ಎಂದು ಘೋಷಣೆ ಮಾಡಿದರು.
2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿದ್ದರು. ರಾಜ್ಯದಲ್ಲಿ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆದರೆ ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ನಿಖಿಲ್ ಸೋಲು ಕಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಅವರು ವಿಧಾನಸಭೆ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಅಷ್ಟು ಪ್ರಭಾವ ಹೊಂದಿಲ್ಲ. 2018ರಲ್ಲಿ ಚನ್ನಪಟ್ಟಣದಲ್ಲಿ ಬಿಜೆಪಿಯ ಸಿ. ಪಿ. ಯೋಗೇಶ್ವರ 66,465 ಮತಗಳನ್ನು ಪಡೆದು ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಸೋಲು ಕಂಡಿದ್ದರು. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ ಜಿಲ್ಲೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ಭರವಸೆಯಲ್ಲಿದ್ದಾರೆ. ಕನಕಪುರದಲ್ಲಿ ಡಿ. ಕೆ. ಶಿವಕುಮಾರ್ ಎದುರು ಆರ್. ಅಶೋಕ ಕಣಕ್ಕಿಳಿಸಿರುವುದು ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ.
| ಕ್ಷೇತ್ರ | ಬಿಜೆಪಿ ಅಭ್ಯರ್ಥಿ | ಕಾಂಗ್ರೆಸ್ ಅಭ್ಯರ್ಥಿ | ಜೆಡಿಎಸ್ ಅಭ್ಯರ್ಥಿ | ಇತರರು |
| ರಾಮನಗರ | ಗೌತಮ್ ಗೌಡ | ಇಕ್ಬಾಲ್ ಹುಸೇನ್ ಎಚ್. ಎ. | ನಿಖಿಲ್ ಕುಮಾರಸ್ವಾಮಿ | ನಂಜಪ್ಪ ಕಾಳೇಗೌಡ (ಎಎಪಿ) |
| ಮಾಗಡಿ | ಪ್ರಸಾದ್ ಗೌಡ | ಹೆಚ್. ಸಿ. ಬಾಲಕೃಷ್ಣ | ಎ. ಮಂಜುನಾಥ್ | ರವಿ ಕಿರಣ್ ಎಂ. ಎಸ್. (ಎಎಪಿ) |
| ಕನಕಪುರ | ಆರ್. ಅಶೋಕ | ಡಿ. ಕೆ. ಶಿವಕುಮಾರ್ | ಘೋಷಣೆಯಾಗಿಲ್ಲ | ಪುಟ್ಟರಾಉ ಗೌಡ (ಎಎಪಿ) |
| ಚನ್ನಪಟ್ಟಣ | ಸಿ. ಪಿ. ಯೋಗೇಶ್ವರ್ | ಘೋಷಣೆಯಾಗಿಲ್ಲ | ಎಚ್. ಡಿ. ಕುಮಾರಸ್ವಾಮಿ | ಶರತ್ ಚಂದ್ರ (ಎಎಪಿ) |












Click it and Unblock the Notifications