ರಾಮನಗರ: 75 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಅನುಮೋದನೆ
ರಾಮನಗರ, ಫೆಬ್ರವರಿ 3: ರಾಮನಗರ ಜಿಲ್ಲೆಯಲ್ಲಿ ಅತ್ಯಾಧುನಿಕ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
ರಾಮನಗರ- ಚನ್ನಪಟ್ಟಣ ಅವಳಿ ನಗರದ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಿಸಲು ನಿರ್ಧರಿಸಲಾಗಿದ್ದು, ಜನವರಿ 27ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಇದೀಗ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಲಾಗಿದೆ.
10 ದಿನದೊಳಗೆ ಟೆಂಡರ್; ಸಚಿವ ಡಾ. ನಾರಾಯಣಗೌಡ
ರಾಮನಗರ ಮಾರುಕಟ್ಟೆಗೆ ಪ್ರತಿದಿನ 40-50 ಟನ್ ರೇಷ್ಮೆಗೂಡು ಬರುತ್ತಿದ್ದು, ಹೈಟೆಕ್ ಮಾರುಕಟ್ಟೆ ನಿರ್ಮಾಣವಾದ ಬಳಿಕ 100-150 ಟನ್‌ನಷ್ಟು ರೇಷ್ಮೆಗೂಡು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಹಾಗಾಗಿ, ಮುಂದಿನ 10 ದಿನದೊಳಗೆ ಟೆಂಡರ್ ಕರೆದು, ಆದಷ್ಟು ಬೇಗ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ಕೆ.ಸಿ. ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಚನ್ನಪಟ್ಟಣದ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆಯ 20 ಎಕರೆ ಜಾಗದಲ್ಲಿ 75 ಕೋಟಿ ರೂಪಾಯಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಿಸಲು ನಿರ್ಧರಿಸಲಾಗಿದೆ. ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ನಬಾರ್ಡ್‌ನಿಂದ ಆರ್ಥಿಕ ನೆರವು ದೊರೆತಿದ್ದು, 75 ಕೋಟಿ ರೂಪಾಯಿ ಬಿಡುಗಡೆ ಆಗಿದೆ.
ಹೈಟೆಕ್ ರೇಷ್ಮೆ ಮಾರುಕಟ್ಟೆಯ ಸೌಲಭ್ಯಗಳು
1. ಆಧುನಿಕ ಪ್ರವೇಶ ದ್ವಾರ
2. ಗಣಕೀಕೃತ ರೇಷ್ಮೆಗೂಡು ಹರಾಜು ಸಭಾಂಗಣ
3. ಕೋರ್ ಕಟ್ಟಡ
4. ಶೌಚಾಲಯ ಬ್ಲಾಕ್
5. ಅಗ್ನಿಶಾಮಕ ನಿಯಂತ್ರಣ ಕೊಠಡಿ
6. ವಿದ್ಯುತ್ ಕೊಠಡಿ
7. ಪೊಲೀಸ್ ಚೌಕಿ
8. ನೀರು ಶೇಖರಣಾ ತೊಟ್ಟಿ
9. ಒಳಚರಂಡಿ ಸಂಸ್ಕರಣಾ ಘಟಕ
10. ಕಾಂಪೌಂಡ್
11. ಸೋಲಾರ್ ವ್ಯವಸ್ಥೆ
12. ಸಿಸಿಟಿವಿ
13. ವಿದ್ಯುದೀಕರಣ ವ್ಯವಸ್ಥೆ
14. ಹವಾ ನಿಯಂತ್ರಣ ವ್ಯವಸ್ಥೆ
15. ಆಂತರಿಕ ರಸ್ತೆಗಳು
16. ಜನರೇಟರ್ ವ್ಯವಸ್ಥೆಗಳನ್ನು ರೇಷ್ಮೆ ಮಾರುಕಟ್ಟೆ ಒಳಗೊಂಡಿರುತ್ತದೆ.

ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಥಳಾವಕಾಶದ ಜೊತೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವುದರಿಂದ ಮಾರುಕಟ್ಟೆ ಧಾರಣೆ ಹೆಚ್ಚಾಗುವ ಸಂಭವವಿರುತ್ತದೆ. ಜೊತೆಗೆ ಏಷ್ಯಾದಲ್ಲೇ ಇದೊಂದು ಮಹತ್ವದ ಮಾರುಕಟ್ಟೆಯಾಗಿ ಪರಿವರ್ತನೆ ಹೊಂದಲಿದೆ.
ದಾಖಲೆಯ ಬೆಲೆಗೆ ಮಾರಾಟವಾಗಿದ್ದ ರೇಷ್ಮೆ ಗೂಡು
ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ರೇಷ್ಮೆ ಗೂಡಿನ ದರ ನಾಲ್ಕು ಡಿಜಿಟ್‌ಗೆ ತಲುಪಿರುವುದಕ್ಕೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ಕೆ.ಸಿ. ನಾರಾಯಣಗೌಡ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ದಿನದಿಂದ ದಿನಕ್ಕೆ ರೇಷ್ಮೆಗೂಡಿನ ದರ ಏರಿಕೆಯಾಗುತ್ತಲ್ಲಿದ್ದು, ಒಂದು ಕೆಜಿ ರೇಷ್ಮೆಗೂಡಿನ ಬೆಲೆ ಒಂದು ಸಾವಿರ ರೂಪಾಯಿ ಗಡಿದಾಟಿದೆ. ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಇಂದು ದಾಖಲೆ ಮಟ್ಟದಲ್ಲಿ ರೇಷ್ಮೆ ಗೂಡು ಹರಾಜಾಗಿದ್ದು, ಒಂದು ಕೆಜಿ ರೇಷ್ಮೆಗೂಡು ಬರೋಬ್ಬರಿ 1,043 ರೂಪಾಯಿಗೆ ಮಾರಾಟವಾಗಿದೆ.

ರೇಷ್ಮೆ ಮಾರುಕಟ್ಟೆಗಳಲ್ಲಿ ರೇಷ್ಮೆ ಗೂಡಿಗೆ ಹೆಚ್ಚಿನ ದರ ಸಿಗದಂತೆ ನಿಯಂತ್ರಿಸುತ್ತಿದ್ದ ದಲ್ಲಾಳಿಗಳಿಗೆ ಕಡಿವಾಣ, ಮಾರುಕಟ್ಟೆಗಳಲ್ಲಿ ಸಿಸಿಟಿವಿ ಅಳವಡಿಕೆ, ರೇಷ್ಮೆ ಬೆಳೆಗಾರರಿಗೆ ಆಗುತ್ತಿದ್ದ ಕಿರುಕುಳಕ್ಕೆ ಬ್ರೇಕ್, ರೇಷ್ಮೆಗೂಡು ಕದಿಯುತ್ತಿದ್ದವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕ್ರಮ, ಇ- ಪೆಮೆಂಟ್ ವ್ಯವಸ್ಥೆ ಜಾರಿ ಸೇರಿದಂತೆ ಸಚಿವ ಡಾ. ನಾರಾಯಣಗೌಡ ಅವರು ತೆಗೆದುಕೊಂಡ ಹಲವು ದಿಟ್ಟ ಕ್ರಮಗಳ ಪರಿಣಾಮವಾಗಿ ಇಂದು ದಾಖಲೆ ದರಕ್ಕೆ ರೇಷ್ಮೆ ಗೂಡು ಮಾರಾಟವಾಗುವ ಮೂಲಕ ರೈತರಿಗೆ ನೈಜ ಬೆಲೆ ಸಿಗಲು ಕಾರಣವಾಗಿದೆ ಎಂದು ಸಚಿವ ಡಾ.ಕೆ.ಸಿ. ನಾರಾಯಣಗೌಡ ತಿಳಿಸಿದ್ದಾರೆ.
ರೇಷ್ಮೆ ಗೂಡಿನ ದರ ಸರಾಸರಿ ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. 2020-21ನೇ ಸಾಲಿನಲ್ಲಿ ಪ್ರತಿ ಕೆಜಿ ರೇಷ್ಮೆ ಗೂಡಿಗೆ ಸರಾಸರಿ 300 ರೂಪಾಯಿ ಇತ್ತು. 2021 ಸಾಲಿನ ನವೆಂಬರ್- ಡಿಸೆಂಬರ್ ತಿಂಗಳಿನಲ್ಲಿ 700-800 ರೂ.ನಷ್ಟಿತ್ತು. ಆದರೆ ಇಂದು 1043 ರೂ.ಗೆ ಮಾರಾಟವಾಗುವ ಮೂಲಕ ದಾಖಲೆ ಸೃಷ್ಟಿಸಿದೆ.












Click it and Unblock the Notifications