ಜೆಡಿಎಸ್ ಕಾರ್ಯಾಗಾರ; ನಿಖಿಲ್, ಪ್ರಜ್ವಲ್ ಭಾಷಣದ ಮುಖ್ಯಾಂಶಗಳು
ರಾಮನಗರ, ಸೆಪ್ಟೆಂಬರ್ 30: ಬಿಡದಿಯ ತೋಟದಲ್ಲಿ ನಡೆಯುತ್ತಿರುವ ಜೆಡಿಎಸ್ ಪಕ್ಷದ ಜನತಾ ಪರ್ವ 1.0 ಹಾಗೂ ಮಿಷನ್ 123 ಕಾರ್ಯಾಗಾರದ 4ನೇ ದಿನ ಯುವ ಪ್ರತಿನಿಧಿಗಳನ್ನು ಉದ್ದೇಶಿಸಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.
ಕಾರ್ಯಾಗಾರದಲ್ಲಿ ಮಾತನಾಡಿದ ಪ್ರಜ್ವಲ್ ರೇವಣ್ಣ, "ನಮ್ಮ ಪಕ್ಷದಿಂದ ರಾಜಕೀಯ ಬದುಕು ಆರಂಭಿಸಿ ಬಳಿಕ ಅನ್ಯ ಪಕ್ಷಗಳಿಗೆ ಜಿಗಿದು ಕೊನೆಗೆ ಮಾತೃ ಪಕ್ಷದ ವಿರುದ್ಧವೇ ಮಾತನಾಡುವುದು ತೀರಾ ಹಾಸ್ಯಾಸ್ಪದ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರಗೇಟು ನೀಡಿದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಪ್ರಜ್ವಲ್ ರೇವಣ್ಣ, "ಅವರು ಬೆಳೆದು ಬಂದ ಪಕ್ಷದ ಬಗ್ಗೆ ಅವರು ಮಾತಾಡಬಾರದು ಎಂದರಲ್ಲದೆ, ಕಾಂಗ್ರೆಸ್ ಸರ್ಕಾರದಲ್ಲಿ ರೈತರ ಸ್ಥಿತಿ ಹೇಗಿತ್ತು? ಎನ್ನುವುದು ಎಲ್ಲರಿಗೂ ಗೊತ್ತಿದೆ. ಆ ಬಗ್ಗೆ ಅವರು ಮಾತನಾಡಲಿ. ಕುಮಾರಸ್ವಾಮಿ ಅವರ ಸರ್ಕಾರವನ್ನು ಟೀಕೆ ಮಾಡುವ ಸಿದ್ದರಾಮಯ್ಯ ಸರ್ಕಾರದಲ್ಲಿ ರೈತರ ಸ್ಥಿತಿ ಹೇಳತೀರದ್ದು. ಅದು ಎಲ್ಲರಿಗೂ ಗೊತ್ತಿದೆ" ಎಂದರು.
ನಿಖಿಲ್ ಕುಮಾರಸ್ವಾಮಿ ಮಾತನಾಡಿ, "ಇನ್ನೂ ಒಂದೂವರೆ ವರ್ಷದಲ್ಲಿ ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಂಚರಿಸಿ ಜೆಡಿಎಸ್ ಹಾಗೂ ಯುವ ಜನತಾ ದಳವನ್ನು ಬಲಿಷ್ಠವಾಗಿ ಸಂಘಟನೆ ಮಾಡುವುದಾಗಿ" ಘೋಷಣೆ ಮಾಡಿದರು.
"ಚಿತ್ರರಂಗದಲ್ಲಿ ನನ್ನ ವ್ಯಕ್ತಿತ್ವ ವಿಕಾಸ ಆಗಿದೆ. ರಾಜ್ಯದ ಜನ ನನ್ನನ್ನು ಒಬ್ಬ ನಟನಾಗಿ ಸ್ವೀಕರಿಸಿದ್ದಾರೆ. ಇದು ನನಗೆ ಸಿಕ್ಕಿರುವ ಅದೃಷ್ಟ. ಜಾಗ್ವಾರ್ ಸಿನಿಮಾ ನಮ್ಮ ತಂದೆ ಕೊಟ್ಟ ಉಡುಗೊರೆ. ನಟನೆಯ ಜತೆಗೆ ಜನರ ಕೆಲಸವನ್ನು ಕೂಡ ಮಾಡುತ್ತೇನೆ" ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಪ್ರಜ್ವಲ್ ರೇವಣ್ಣ ಹೇಳಿದ್ದೇನು?
* ನಮ್ಮೆಲ್ಲರ ಹಿರಿಯರಾದ ಎಚ್. ಡಿ. ದೇವೇಗೌಡರು ಪಕ್ಷವನ್ನು ಯಾವ ರೀತಿ ಕಟ್ಟಿದರು ಅನ್ನೋದನ್ನು ನಾವೆಲ್ಲರೂ ಅರಿಯಬೇಕು. ಪಕ್ಷ ಕಟ್ಟಲು ಎಷ್ಟು ಶ್ರಮ ಪಟ್ಟರು ಎಂಬುದು ನನಗೆ ಗೊತ್ತಿದೆ. ನಮ್ಮದು ಒಂದು ಜಾತಿಗೆ ಸೇರಿದ ಪಾರ್ಟಿಯಲ್ಲ ಎಂದು ಪ್ರಜ್ವಲ್ ರೇವಣ್ಣ ಹೇಳಿದರು.
* ಸ್ಥಳೀಯವಾಗಿ ನಮ್ಮ ಪಕ್ಷ ಬಲಿಷ್ಟವಾಗಿದೆ. ಇನ್ನಷ್ಟು ಬಲಗೊಳಿಸಲು ಕೆಲಸ ಮಾಡಬೇಕಿದೆ. ಬೇರೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ಹೋಗಬೇಕು. ಆದರೆ ನಮ್ಮ ಪಕ್ಷದಲ್ಲಿ ವರಿಷ್ಠರನ್ನು ಭೇಟಿ ಮಾಡಬೇಕು ಅಂದರೆ ಬೆಂಗಳೂರಿಗೆ ಬಂದರೆ ಸಾಕು.
*ಎರಡು ಸಲ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಅಪಾರ ಸೇವೆ ಮಾಡಿದ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರಕಾರದಲ್ಲಿ ಮುಳ್ಳಿನ ಕುರ್ಚಿ ಮೇಲೆ ಕೂತಿದ್ದರು. ಆದರೆ ದುರ್ಬಲರ ಪರ, ಬಡವರ ಪರ ಕೆಲಸ ಮಾಡುತ್ತಿದ್ದ ಅವರ ಬದ್ಧತೆಯನ್ನು ಕಾಂಗ್ರೆಸ್ ಪಕ್ಷಕ್ಕೆ ಸಹಿಸಲಾಗಲಿಲ್ಲ.
* ಎಲ್ಲರೂ ಹೇಳುವುದನ್ನು ನಾನು ಕೇಳಿದ್ದೇನೆ. ಜೆಡಿಎಸ್ ಪಕ್ಷವೂ ನಾಯಕರನ್ನು ಸೃಷ್ಟಿ ಮಾಡುವ ಫ್ಯಾಕ್ಟರಿ. ಇಲ್ಲೇ ರಾಜಕೀಯ ಬದುಕು ಕಂಡುಕೊಂಡ ಆಮೇಲೆ ಬೇರೆ ಕಡೆ ಹೋಗುತ್ತಾರೆ. ಯಾರೇ ಬಿಟ್ಟೋದರೂ ಮತ್ತೆ ಹೊಸ ನಾಯಕರನ್ನುಸೃಷ್ಟಿ ಮಾಡುವಂತಹ ಶಕ್ತಿ ದೇವೇಗೌಡರಿಗೆ ಹಾಗೂ ಕುಮಾರಸ್ವಾಮಿ ಅವರಿಗೆ ಗೊತ್ತಿದೆ. ಹೀಗಾಗಿ ನಮ್ಮ ನಿಷ್ಠೆ ಪಕ್ಷದ ಮೇಲೆ ಇರಬೇಕು.

ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ
* ರೈತರ ಸಾಲ ಮನ್ನಾ ಮಾಡಲಿಲ್ಲ ಅಂತನಮ್ಮವರೂ ಸೇರಿದಂತೆ ವಿರೋಧ ಪಕ್ಷದವರು ಟೀಕೆ ಮಾಡಿದ್ದರು. ಅಂತ ಕ್ಲಿಷ್ಟ ಸಮಯದಲ್ಲಿ ಕುಮಾರಣ್ಣ ಈ ನಿರ್ಧಾರ ತೆಗೆದುಕೊಂಡರು. 46 ಸಾವಿರ ಕೋಟಿ ಸಾಲ ಮನ್ನಾ ಅಂತ ಬಜೆಟ್‌ನಲ್ಲಿ ಘೋಷಣೆ ಮಾಡಿದರು. 25 ಸಾವಿರದಿಂದ 2 ಲಕ್ಷದ ವರೆಗೆ ಸಾಲ ಮನ್ನಾ ಮಾಡಲಾಯಿತು.
* ಆದರೆ ಕೆಲವರು ಹಸಿರು ಶಾಲು ಭುಜದ ಮೇಲೆ ಹಾಕಿಕೊಂಡು ಪ್ರಮಾಣ ವಚನ ಸ್ವೀಕಾರ ಮಾಡ್ತಾರೆ. ಆದರೆ ರೈತರ ವಿಷಯ ಬಂದಾಗ ಹಿಂದಕ್ಕೆ ಹೋಗುತ್ತಾರೆ. ಕುಮಾರಸ್ವಾಮಿ ಅವರು ಅತ್ಯುತ್ತಮ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಪಂಚರತ್ನ ಉತ್ತಮ ಯೋಜನೆ. ಬಡವರಿಗಾಗಿ, ರಾಜ್ಯದ ಜನತೆಗಾಗಿ ಈ ಯೋಜನೆ ಮಾಡಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು.

ನಿಖಿಲ್ ಕುಮಾರಸ್ವಾಮಿ ಭಾಷಣ
* 2023ರಲ್ಲಿ ಪಕ್ಷ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಆಗುತ್ತಾರೆ. ಅದಕ್ಕಾಗಿ ಯುವ ಜನತಾದಳ ರಾಜ್ಯಾದ್ಯಂತ ಕೆಲಸ ಮಾಡಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
* ಜಗತ್ತು ವೇಗವಾಗಿ ಸಾಗುತ್ತಿದೆ.ಸೋಷಿಯಲ್ ಮೀಡಿಯಾ ಬೆರಳ ತುದಿಯಲ್ಲಿ ಇದೆ.ನಾವು ಎಲ್ಲಿ ಎಡವಿದ್ದೇವೆ ಅನ್ನೋದನ್ನು ನೋಡಿಕೊಂಡು ಪಕ್ಷದ ಕೆಲಸ ಮಾಡೋಣ ಎಂದ ನಿಖಿಲ್ ಕುಮಾರಸ್ವಾಮಿ ತಾವು ರಾಜ್ಯ ಯುವ ಜನತಾದಳ ಅಧ್ಯಕ್ಷರಾದ ಸಂದರ್ಭವನ್ನು ಸ್ಮರಿಸಿಕೊಂಡರು.
* ಆವತ್ತು ಬೆಳಗ್ಗೆ ನನಗೆ ಒಂದು ಮೊಬೈಲ್ ಕರೆ ಬರುತ್ತೆ ನೀವು 11 ಗಂಟೆಗೆ ಪಕ್ಷದ ಕಚೇರಿಗೆ ಬರಬೇಕು ಅಂತ. ನಾನು ಅಲ್ಲಿಗೆ ಹೋದೆ. ಏನೆಂದು ಗೊತ್ತಾಗಲಿಲ್ಲ. ಅಲ್ಲಿ ಹೋದ ಮೇಲೆ ನನಗೆ ಅಚ್ಚರಿ ಆಯಿತು. ದೊಡ್ಡವರು ನನಗೆ ಯುವ ಜನತಾದಳದ ಜವಾಬ್ದಾರಿ ನೀಡಿದರು. ನನಗೆ ಪಕ್ಷ ಕಟ್ಟುವ ಬಗ್ಗೆಯೂ ಗೊತ್ತಿರಲಿಲ್ಲ. ನನಗೆ ನನ್ನ ದೇವರು (ದೇವೇಗೌಡರು) ಮಾರ್ಗದರ್ಶನ ಮಾಡಿದರು. ನಾನು ಎಂದೂ ಅವರನ್ನು ಹೆಸರಿಟ್ಟುಕರೆಯಲ್ಲ. ದೇವರು ಎಂದೇ ನಂಬಿದ್ದೇನೆ ಎಂದು ನಿಖಿಲ್ ನೆನಪು ಮಾಡಿಕೊಂಡರು.

18 ತಿಂಗಳು ಮಾತ್ರ ಚುನಾವಣೆಗೆ ಬಾಕಿ ಇದೆ
* ನಮ್ಮ ತಂದೆಯ ಬಗ್ಗೆ ಮಗನಾಗಿ ನಾನಿಲ್ಲಿ ಮಾತನಾಡುತ್ತಿಲ್ಲ. ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ. ಅವರ ಸರಳತೆ, ತಾಯಿ ಹೃದಯ ಎಲ್ಲರಿಗೂ ಅಚ್ಚುಮೆಚ್ಚು ಮತ್ತು ಅನುಕರಣೀಯ. ದೊಡ್ಡಗೌಡರನ್ನು ಮತ್ತೆ ಮತ್ತೆ ದೇವರು ಎಂದೇ ಕರೆದ ನಿಖಿಲ್ ಕಷ್ಟಪಟ್ಟು ಈ ಪಕ್ಷ ಕಟ್ಟಿದ್ದಾರೆ. ನಮ್ಮ ತಂದೆಯವರು 15 ವರ್ಷದಿಂದ ಒಬ್ಬರೇ ಈ ಪಕ್ಷ ಉಳಿಸಿಕೊಂಡು ಬಂದಿದ್ದಾರೆ ಎಂದರು.
* ಎಚ್ಡಿಕೆ ಅವರು ರೈತರ ಸಾಲ ಮನ್ನಾ ಮಾಡಿದರು. ಕೊಟ್ಟ ಮಾತನ್ನು ಉಳಿಸಿಕೊಂಡರು. ಆತ್ಮಸಾಕ್ಷಿಗೆ ದ್ರೋಹ ಮಾಡಿಕೊಳ್ಳಲ್ಲ. ನಾವೆಲ್ಲರೂ ಅವರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡೋಣ. ಈ ಕ್ಷಣವೇ ನಾವೆಲ್ಲಾ ಸಂಕಲ್ಪ ತೊಟ್ಟು ಪ್ರತಿ ತಾಲೂಕಿನಲ್ಲಿ ಸದಸ್ಯತ್ವ ಅಭಿಯಾನ ಶುರು ಮಾಡೋಣ ಎಂದರು.
* ನಾವೆಲ್ಲಾ ಸಜ್ಜಾಗಬೇಕು, 18 ತಿಂಗಳು ಮಾತ್ರ ಚುನಾವಣೆಗೆ ಬಾಕಿ ಇದೆ. ನಾವೆಲ್ಲಾ ಸೇರಿ ಪಕ್ಷ ಕಟ್ಟಬೇಕು. 30 ಪರ್ಸೆಂಟ್ ಮಹಿಳೆಯರಿಗೆ ಮೀಸಲಾತಿ ಅಂತ ತಂದೆಯವರು ಹೇಳಿದ್ದಾರೆ. ಯುವಕರಿಗೆ ಟಿಕೆಟ್ ಹಂಚಿಕೆಯಲ್ಲಿ 25 ಪರ್ಸೆಂಟ್ ಅವಕಾಶ ನೀಡಬೇಕು ಎಂದು ಕೋರುತ್ತೇನೆ ಎಂದರು.












Click it and Unblock the Notifications