ಬಿಡದಿಯ ತನ್ನ ನೆಚ್ಚಿನ ಮನೆ ಬಳಿಯೇ ಲೀನವಾದ ಮುತ್ತಪ್ಪ ರೈ
ಬಿಡದಿ, ಮೇ 15: ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಇಂದು ಬೆಳಗ್ಗಿನ ಜಾವ ಕೊನೆಯುಸಿರೆಳೆದರು. ಬಿಡದಿಯ ಅವರ ನಿವಾಸದ ಆವರಣದಲ್ಲಿ ಪುತ್ರ ರಿಕ್ಕಿ ಮುತ್ತಪ್ಪ ರೈ ಅವರಿಂದ ಮುತ್ತಪ್ಪ ರೈ ಅಂತಿಮ ವಿಧಿವಿಧಾನಗಳು ನೆರವೇರಿದವು. ಗಾಳಿಯಲ್ಲಿ ಗುಂಡು ಹಾರಿಸಿ ಅಂತಿಮ ವಿದಾಯ ಹೇಳಲಾಯಿತು.
ಭೂಗತ ಲೋಕದ ದೊರೆ ಎಂದೇ ಎನಿಸಿಕೊಂಡಿದ್ದು, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ನಿನ್ನೆ ತಡರಾತ್ರಿ 2 ಗಂಟೆಯಲ್ಲಿ ಕೊನೆಯುಸಿರೆಳೆದಿದ್ದರು. ದೀರ್ಘ ಕಾಲ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅವರು, ಇತ್ತೀಚೆಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಜಯ ಕರ್ನಾಟಕ ಸಂಘಟನೆಯ ಸ್ಥಾಪಕ ಮುತ್ತಪ್ಪ ರೈ ನಿಧನ

ಸಾವನ್ನು ಗೆದ್ದು ಬರುತ್ತೇನೆ ಎಂದಿದ್ದ ಮುತ್ತಪ್ಪ ರೈ
ಇದೇ ಜನವರಿಯಲ್ಲಷ್ಟೇ 68 ವರ್ಷದ ಮುತ್ತಪ್ಪ ರೈ ಸುದ್ದಿಗೋಷ್ಟಿ ನಡೆಸಿ, ನಾನು ಮಾರಣಾಂತಿಕ ಕ್ಯಾನ್ಸರ್ ನಿಂದ ಬಳಲುತ್ತಿದ್ದೇನೆ. ಈ ಕಾಯಿಲೆ ನನ್ನ ಶತ್ರುವಿಗೂ ಬರುವುದು ಬೇಡ. ಆದರೂ ನನ್ನಲ್ಲಿ ವಿಲ್ ಪವರ್ ಇದೆ. ಈ ಸಾವನ್ನು ನಾನು ಗೆದ್ದು ಬರುತ್ತೇನೆ ಎಂದು ಬಲವಾಗಿಯೇ ಹೇಳಿದ್ದರು. ಆದರೆ ವಿಧಿಯ ಮುಂದೆ ಏನೂ ನಡೆಯಲಿಲ್ಲ. ದೀರ್ಘ ಕಾಲದ ಕ್ಯಾನ್ಸರ್ ನಿಂದ ಬಳಲಿ ಇಂದು ಮುತ್ತಪ್ಪ ರೈ ಸಾವಿನ ಮನೆ ಕದ ತಟ್ಟಿದ್ದಾರೆ.

ಕೊನೆಯ ದಿನಗಳು ಬಿಡದಿಯಲ್ಲಿ...
ಜನವರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದ ಮುತ್ತಪ್ಪ ರೈ, 'ಕೆಲವು ತಿಂಗಳುಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವಾಗ ಬೆನ್ನು ನೋವು ಕಾಣಿಸಿಕೊಂಡಿತು, ನಂತರ ಪರೀಕ್ಷೆ ಮಾಡಿಸಿದಾಗ ಯಕೃತ್ (ಲಿವರ್) ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಲಿವರ್ ಕ್ಯಾನ್ಸರ್ ಗುಣವಾಯಿತು. ಆದರೆ ಮೆದುಳಿನಲ್ಲಿ ಕ್ಯಾನ್ಸರ್ ಗಡ್ಡೆ ಪತ್ತೆ ಆಯಿತು. ಕೆಲವು ತಿಂಗಳಷ್ಟೆ ಬದುಕುವುದಾಗಿ ವೈದ್ಯರು ಹೇಳಿಬಿಟ್ಟಿದ್ದಾರೆ. ಹಾಗಾಗಿ ಕೊನೆಯ ದಿನಗಳನ್ನು ಕಳೆಯಲು ಬಿಡದಿಗೆ ಬಂದಿದ್ದೇನೆ ಎಂದು ಕೊನೆಯ ದಿನಗಳನ್ನು ಎಣಿಸುತ್ತಿರುವುದಾಗಿ ಹೇಳಿದ್ದರು. "ಐದು ಗುಂಡು ಬಿದ್ದಿದ್ದರೂ ಬದುಕಿ ಬಂದಿದ್ದೇನೆ, ಸಾವಿಗೆ ಎಂದೂ ಹೆದರಿದವನು ನಾನಲ್ಲ. ಅದೇ ಇಚ್ಛಾಶಕ್ತಿಯಿಂದ ಕ್ಯಾನ್ಸರ್ ಅನ್ನು ಎದುರಿಸಿ ಬದುಕುತ್ತಿದ್ದೇನೆ, ಜೀವ ಇರುವವರೆಗೂ ಸಮಾಜ ಸೇವೆ ಮುಂದುವರೆಸುತ್ತೀನಿ" ಎಂದು ಹೇಳಿದ್ದರು.

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸೇರಿದ್ದರು
ಕ್ಯಾನ್ಸರ್ ನಿಂದಾಗಿ, ಹಲವು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮುತ್ತಪ್ಪ ರೈ, ದೆಹಲಿ, ಚೆನ್ನೈ, ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಅವರ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಂಡು ಬಂದಿಲ್ಲ. ನಿನ್ನೆಯಷ್ಟೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದುಬಂದಿತ್ತು. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ರೈ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಪುತ್ತೂರಿನಲ್ಲಿರುವ ಅವರ ಸಂಬಂಧಿಕರು ಬೆಂಗಳೂರಿಗೆ ಬರುತ್ತಿರುವುದಾಗಿ ತಿಳಿದುಬಂದಿತ್ತು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ಮೂಲಕ ಅವರ ಉಸಿರಾಟ ಸಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು.

ಬಂಟ ಸಂಪ್ರದಾಯದಂತೆ ನಡೆದ ಅಂತ್ಯಸಂಸ್ಕಾರ
ಬಿಡದಿಯ ಅವರ ನಿವಾಸದ ಆವರಣದಲ್ಲೇ ಬಂಟ ಸಂಪ್ರದಾಯದಂತೆ ಮುತ್ತಪ್ಪ ರೈ ಅವರ ಅಂತಿಮ ವಿಧಿವಿಧಾನ ಕಾರ್ಯಗಳು ನೆರವೇರಿತು. ಪುತ್ರ ರಿಕ್ಕಿ ತಂದೆಗೆ ಅಗ್ನಿ ಸ್ಪರ್ಶ ಮಾಡಿದರು. 12.05ಕ್ಕೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಿಂದ ಮೃತದೇಹ ರವಾನೆಯಾಗಿ 5 ನಿಮಿಷಗಳ ಕಾಲ ಬಿಡದಿ ಬಳಿ ಸಾರ್ವಜನಿಕರಿಗೆ ಅಂತಿಮ ದರ್ಶನ ಮಾಡಲು ಅವಕಾಶ ನೀಡಲಾಗಿತ್ತು. ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.
ಕೊರೊನಾದಿಂದಾಗಿ ಸರ್ಕಾರದ ನಿಯಮದ ಪ್ರಕಾರ ಕೇವಲ ಕುಟುಂಬಸ್ಥರಿಗೆ ಮಾತ್ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಅಂತಿಮ ವಿಧಿ ವಿಧಾನದ ಸಮಯದಲ್ಲಿ ಜೇನು ದಾಳಿಯಾದ ಘಟನೆಯೂ ನಡೆಯಿತು. ಆದರೆ ಅದೃಷ್ಟವಷಾತ್ ಯಾರಿಗೂ ಅಪಾಯ ಸಂಭವಿಸಿಲಿಲ್ಲ.