ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ವಿಚಾರ: ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ
ರಾಮನಗರ ಜನವರಿ 26: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಹೇಳಿಕೆ ನೀಡಿದ್ದಾರೆ.
ರಾಮನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, 'ಜಗದೀಶ್ ಶೆಟ್ಟರ್ ಅವರು ತಮ್ಮ ಪಕ್ಷದಲ್ಲಿ ಅವಮಾನ ಆಯ್ತು ಎಂದು ಕಾಂಗ್ರೆಸ್ ಸೇರಿದ್ರು. ನಮ್ಮ ಪಕ್ಷದಿಂದ ಟಿಕೆಟ್ ಸಹ ಕೊಟ್ಟು, ಎಂಎಲ್ಸಿ ಮಾಡಿದ್ರು. ಅವರ ಗೌರವಕ್ಕೆ ಧಕ್ಕೆ ತಂದಿದ್ದು ಬಿಜೆಪಿ ಪಕ್ಷ. ಮತ್ತೆ ಯಾಕೆ ಅದೇ ಪಕ್ಷಕ್ಕೆ ಹೋದ್ರು ಅಂತ ಗೊತ್ತಿಲ್ಲ' ಎಂದು ಹೇಳಿದರು.

ಇನ್ನೂ ಲಕ್ಷ್ಮಣ್ ಸವದಿ, ಜನಾರ್ಧನ ರೆಡ್ಡಿ ಸಹ ಬಿಜೆಪಿ ಸೇರ್ಪಡೆಗೊಳ್ಳುತ್ತಾರಾ ಎಂದು ಕೇಳಿದ ಪ್ರಶ್ನೆಗೆ ಅವರು, 'ಜನಾರ್ಧನರೆಡ್ಡಿ ಅವರದ್ದು ಸ್ವತಂತ್ರ ಪಕ್ಷ, ಲಕ್ಷ್ಮಣ್ ಸವದಿ ನಮ್ಮ ಪಕ್ಷದಲ್ಲಿದ್ದಾರೆ. ಯಾರೂ ಸಹ ಬಿಜೆಪಿಗೆ ಹೋಗಲ್ಲ' ಎಂದು ಸ್ಪಷ್ಟನೆ ನೀಡಿದರು.
ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಕೊರತೆ:
ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಬಿಟ್ಟು ಮತ್ತೆ ಬಿಜೆಪಿ ಸೇರಿದಕ್ಕೆ ಹಲವಾರು ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಕೊರತೆಯಿದೆ, ಬಿಜೆಪಿಗೆ ಇನ್ನಷ್ಟು ನಾಯಕರು ಬರ್ತಾರೆ ಎಂಬ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, 'ಚುನಾವಣೆ ಮುಂಚೆ ಅಷ್ಟೊಂದು ಜನ ಪಕ್ಷ ಬಿಟ್ಟಾಗ ಅವರಲ್ಲಿ ನಾಯಕತ್ವ ಇತ್ತಾ..? ಐದು ರಾಜ್ಯಗಳಲ್ಲಿ ಚುನಾವಣೆ ಆದಾಗ 4 ಕೋಟಿ 80 ಲಕ್ಷ ಜನ ಬಿಜೆಪಿಗೆ ಮತ ಕೊಟ್ಟಿದ್ರು. ಕಾಂಗ್ರೆಸ್ ಗೆ 4 ಕೋಟಿ 90 ಲಕ್ಷ ಮತ ನೀಡಿದ್ರು. ಬಿಜೆಪಿಯವರಿಗಿಂತಲೂ ಹೆಚ್ಚು ಮತ ನಮಗೆ ನೀಡಿದ್ದಾರೆ. ದೇಶದಲ್ಲಿ ಜನ ನಮ್ಮ ಪಕ್ಷದ ಪರವಾಗಿದ್ದಾರೆ. ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಯಿಂದ ಯಾವ ಡ್ಯಾಮೇಜ್ ಆಗೋದಿಲ್ಲ' ಎಂದು ಕುಟುಕಿದರು.
ರಾಜ್ಯ ಸರ್ಕಾರ ಪತನ:
ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನ ಹೇಳಿಕೆ ವಿಚಾರವಾಗಿಯೂ ಮಾತನಾಡಿದ ರಾಮಲಿಂಗಾರೆಡ್ಡಿ ಅವರು ಬಿಜೆಪಿ ನಾಯಕರ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ. 'ಬಿಜೆಪಿಯವರು ಹಗಲು ಕನಸು ಕಾಣ್ತಿದ್ದಾರೆ. 2018 ರಲ್ಲಿ ನಮ್ಮ ಸರ್ಕಾರ ಬಂದಿತ್ತು ಆಗ ಲೋಕಸಭೆ ಚುನಾವಣೆಯಲ್ಲಿ 1 ಸ್ಥಾನ ಗೆದ್ದಿತ್ತು. ಆಗ ನಮ್ಮ ರಾಜ್ಯ ಸರ್ಕಾರ ಬಿದ್ದೋಗಿತ್ತಾ..?' ಎಂದು ಪ್ರಶ್ನೆ ಮಾಡಿದರು.
ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ವಿಳಂಬ:
ಇನ್ನೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ವಿಳಂಬ ವಿಚಾರವಾಗಿ ಮಾತನಾಡಿದ ಅವರು, 'ಪಟ್ಟಿ ಈಗಾಗಲೇ ರೆಡಿಯಾಗಿದೆ, ಕೆಲವು ಕಾರ್ಯಕರ್ತರನ್ನ ಸೇರಿಸಬೇಕು ಎಂದು ತಡವಾಗಿದೆ. ಪರಮೇಶ್ವರ್ ಅಸಮಾಧಾನ ನಮಗೆ ಗೊತ್ತಿಲ್ಲ. ಮಾಧ್ಯಮಗಳಿಗೆ ಏನ್ ಹೇಳಿಕೆ ಕೊಟ್ಟಿದ್ದಾರೆ ತಿಳಿದಿಲ್ಲ. ಅವರೂ ಹಿರಿಯ ಸಚಿವರು ಅವರ ಅಭಿಪ್ರಾಯ ತಗೊಳ್ತೇವೆ. ನಾನು ಕಾಂಗ್ರೆಸ್ ಸೇರಿ 50 ವರ್ಷ ಆಯ್ತು. ಕಾಂಗ್ರೆಸ್ ನಲ್ಲಿ ಇರುವರೆಲ್ಲಾ ನಮ್ಮವರೇ' ಎಂದರು.
ಕಾಡಾನೆ ದಾಳಿ ಹೆಚ್ಚಾದ ವಿಚಾರ
ಕಾಡಾನೆ ದಾಳಿ ಹೆಚ್ಚಾದ ವಿಚಾರವಾಗಿ ಮಾತಣಾಡಿದ ಅವರು, ತಂತಿಬೇಲೆ ಅಳವಡಿಸಲು ಈಗಾಗಲೇ 45 ಕೋಟಿ ಕೊಟ್ಟಿದ್ದೇವೆ. ಬೇಲಿ ಕಾಮಗಾರಿ ಪೂರ್ಣ ಆದ್ರೆ ಸಮಸ್ಯೆ ಪರಿಹಾರ ಸಿಗುತ್ತೆ ಎಂದರು.
ರಾಮನಗರದಲ್ಲಿ ರಾಮಮಂದಿರ
ರಾಮನಗರದಲ್ಲಿ ರಾಮಮಂದಿರ ಅಭಿವೃದ್ಧಿ ವಿಚಾರವಾಗಿ ಮಾತನಾಡಿ, ಇಲ್ಲಿನ ಸ್ಥಳೀಯ ಶಾಸಕರು ಬಿಜೆಪಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಅಯೋಧ್ಯೆ ರಾಮ ಅವರು ಮಾಡಿದ್ರೆ, ರಾಮನಗರ ರಾಮ ಇಲ್ಲಿನ ಶಾಸಕರು ಮಾಡಲು ಕಂಕಣ ಬದ್ಧರಾಗಿದ್ದಾರೆ. ಶ್ರೀರಾಮ ಪೂಜೆ ಸಾವಿರಾರು ವರ್ಷಗಳಿಂದ ಮಾಡ್ತಿದ್ದೇವೆ. ಬಿಜೆಪಿಯವರು ರಾಮನ ಒಬ್ಬನ್ನೇ ಪ್ರತಿಷ್ಟಾಪನೆ ಮಾಡಿದ್ರೋ ಗೊತ್ತಿಲ್ಲ. ರಾಜಕೀಯ ಲಾಭಕ್ಕಾಗಿ 45 ವರ್ಷಗಳಿಂದ ಮಾಡುತ್ತಲೇ ಇದ್ದಾರೆ. ನಾವು ಧರ್ಮ, ದೇವರನ್ನ ರಾಜಕೀಯಕ್ಕೆ ತರೋದಿಲ್ಲ. ಬಿಜೆಪಿಯವರು ರಾಜಕೀಯಕ್ಕಾಗಿ ಏನ್ ಬೇಕಾದ್ರೂ ಮಾಡ್ತಾರೆ ಎಂದು ಕಿಡಿ ಕಾರಿದರು.
ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೆ ಸ್ಫರ್ಧೆ ವಿಚಾರ
ಇನ್ನೂ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೆ ಸ್ಫರ್ಧೆ ವಿಚಾರವಾಗಿ ಮಾತನಾಡಿದ ಅವರು, '25 ವರ್ಷಗಳ ಹಿಂದೆಯೇ ಸ್ಪರ್ಧೆ ಮಾಡುವಂತೆ ಹೇಳಿದ್ರು ಬೇಡ ಎಂದಿದ್ದೆ. ಯುವಕರಿದ್ದಾರೆ ಅವರಲ್ಲೇ ಯಾರಾದ್ರೂ ಕಳಿಸ್ತೀವಿ. ನಮ್ಮ ಮಗಳು ಹೆಸರು ಹೈಕಮಾಂಡ್ ಹೋಗಿದೆ. ವಿಧಾನಸಭೆ ಚುನಾವಣೆ ಮರು ಮತ ಏಣಿಕೆಯಲ್ಲಿ ತಪ್ಪಾಗಿದೆ, ಸಾಭೀತಾದ್ರೆ ಗೆಲ್ತಾರೆ' ಎಂದು ರಾಮನಗರದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.












Click it and Unblock the Notifications