ರಾಮನಗರದ ಜೈಲಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಕೈದಿ: ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್
ರಾಮನಗರ, ಜನವರಿ, 18: ಮಾಡಿದ ತಪ್ಪಿನ ಅರಿವಾಗಲಿ, ಮುಂದೆ ಒಳ್ಳೆಯ ಬುದ್ಧಿ ಕಲಿತು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲಿ ಎಂಬ ಉದ್ದೇಶದಿಂದ ಅಪರಾಧಿಗಳಿ ಕಾರಾಗೃಹ ಶಿಕ್ಷೆ ನೀಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾರಾಗೃಹಗಳು ಅಪರಾಧಿಗಳ ಮೋಜಿನ ತಾಣಗಳಾಗುತ್ತಿವೆ ಎನ್ನುವುದಕ್ಕ ಇಲ್ಲಿನ ಒಂದು ದೃಶ್ಯ ಸೂಕ್ತ ಉದಾಹರಣೆಯಾಗಿದೆ. ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬ ಜೈಲಿನಲ್ಲಿಯೇ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ.
ಅಪರಾಧಿ ಜೈಲಿನಲ್ಲಿಯೇ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಫೋಟೋಗಳನ್ನು ಇದೀಗ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕಾರಾಗೃಹ ಮನ ಪರಿವರ್ತನೆಯ ತಾಣವಾಗಿರದೆ ಅಪರಾಧಿಗಳ ಸೇಪ್ ಹೌಸ್ ಆಗಿದೆ ಎಂಬುದು ಈ ದೃಶ್ಯದಲ್ಲಿ ಎದ್ದು ಕಾಣುತ್ತಿದೆ. ಹೀಗೆ ಅಪರಾಧಿಗಳು ಜೈಲಿನಲ್ಲಿದ್ದುಕೊಂಡೇ ಮೋಜು ಮಸ್ತಿಯ ಜೀವನ ನಡೆಸುತ್ತಿದ್ದಾರೆ ಎಂಬುದಕ್ಕೆ ಈ ಅದ್ಧೂರಿ ಹುಟ್ಟುಹಬ್ಬ ಆಚರಣೆಯೇ ಸಾಕ್ಷಿಯಾಗಿದೆ.
ಜನವರಿ 14 ರಂದು ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕಿರಣ್ ಅಲಿಯಾಸ್ ತಮಟೆ ಕಿರಣ್ ಎಂಬಾತ ಜೈಲಿನಲ್ಲೇ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಅಲ್ಲದೇ ಇತರೆ ಕೈದಿಗಳೊಂದಿ ತನ್ನ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಫೋಟೋಗಳನ್ನು ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವುದು ಬಹಿರಂಗವಾಗಿದೆ.

ಫೋಟೋಗಳು ವೈರಲ್
ಸಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ಫೋಟೋಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿವೆ. ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಂಗಳವಾರ (ಜನವರಿ 17) ಸಂಜೆ ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಂತೋಷ್ ಬಾಬು ಅವರ ನೇತೃತ್ವದಲ್ಲಿ, ರಾಮನಗರ ಉಪ ವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್, ಇನ್ಸ್‌ಪೆಕ್ಟರ್‌ಗಳಾದ ಗಿರಿರಾಜ್, ನರಸಿಂಹಮೂರ್ತಿ ಮತ್ತು ಸಿಬ್ಬಂದಿಗಳ ತಂಡವು ದಾಳಿ ನಡೆಸಿ ಕಾರಾಗೃಹದಲ್ಲಿದ್ದ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಕಾರಾಗೃಹದ ಮೇಲೆ ಪೊಲೀಸರ ದಾಳಿ
ಕಾರಾಗೃಹದ ಮೇಲೆ ಪೊಲೀಸರು ದಾಳಿ ನಡೆಸಿದ ಸಮಯದಲ್ಲಿ ಎರಡು ಮೊಬೈಲ್ ಫೋನ್ ದೊರೆತಿರುವುದು ಜೈಲು ಅಧೀಕ್ಷಕರು ಮತ್ತು ಸಿಬ್ಬಂದಿಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಂತಿದೆ. ಅಲ್ಲದೇ ಹಿಂದೆಯೂ ಕಾರಾಗೃಹದ ಮೇಲೆ ಪೋಲಿಸರು ದಾಳಿ ಮಾಡಿದ ಸಮಯದಲ್ಲೂ ಮೊಬೈಲ್ ಫೋನ್, ಬೀಡಿ , ಸಿಗರೇಟ್, ತಂಬಾಕು ಸೇರಿದಂತೆ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದವು.

ಕಾರಾಗೃಹದಲ್ಲಿ ಹುಟ್ಟುಹಬ್ಬ ಆಚರಣೆ
ಇನ್ನು ಅಕ್ರಮವಾಗಿ ಕಾರಾಗೃಹದಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ವಿಚಾರಣಾಧೀನ ಕೈದಿ ಕಿರಣ್ ಅಲಿಯಾಸ್ ತಮಟೆ ಕಿರಣ್ ಎಂಬಾತನ ವಿರುದ್ಧ ಹಾಗೂ ಆತನ ಸಹಚರರ ವಿರುದ್ಧ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಹಾಗೂ ಆರೋಪಿಗಳಿಗೆ ಸಹಕಾರ ನೀಡಿದ ಜೈಲು ಸಿಬ್ಬಂದಿಗಳ ವಿರುದ್ಧ ತನಿಖೆ ನಡೆಸಿ ಕಾರಾಗೃಹ ಇಲಾಖೆಯ ಎಡಿಜಿಪಿಯರಿಗೆ ವರದಿ ಸಲ್ಲಿಸಲಾಗುವುದು ಎಂದು ಪೊಲೀಸ್ ಅಧೀಕ್ಷಕ ಮೋಹನ್ ಕುಮಾರ್ ತಿಳಿಸಿದ್ದಾರೆ.












Click it and Unblock the Notifications