ಮಾಗಡಿ: ರಾಗಿ ಸರಿ ಗಂಟಲಲ್ಲಿ ಸಿಲುಕಿ ಉಸಿರು ಬಿಟ್ಟ ಕಂದಮ್ಮ
ಮಾಗಡಿ, ಜನವರಿ 31: ತಾಯಿ ತನ್ನ ಎದೆ ಹಾಲು ಕುಡಿಸದೆ ರಾಗಿ ಸರಿ ಕುಡಿಸಿದ್ದಕ್ಕೆ 2 ತಿಂಗಳು 8 ದಿನದ ಎಳೆ ಮಗು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನಲ್ಲಿ ನಡೆದಿದೆ.
ಮಾಗಡಿಯ ಹೊಸಪಾಳ್ಯ ಗ್ರಾಮದ ಮಂಜುನಾಥ ಮತ್ತು ಧನಲಕ್ಷಿ ದಂಪತಿಯ ಹೆಣ್ಣು ಮಗು ಪೋಷಕರ ಅಜ್ಞಾನದಿಂದಾಗಿ ಸಾವನ್ನಪ್ಪಿದೆ. ತಾಯಿಗೆ ಎದೆ ಹಾಲು ಸರಿಯಾಗಿ ಉತ್ಪತ್ತಿಯಾಗುತ್ತಿಲ್ಲ ಎಂಬ ಕಾರಣ ನೀಡಿ ಅನ್ನ ನಾಳ, ಜೀರ್ಣ ಕ್ರಿಯೆಗೆ ಸಹಾಯಕವಾಗುವ ಅಂಗಗಳು ಸರಿಯಾಗಿ ಬೆಳೆಯದ ಎಳೆ ಮಗುವಿಗೆ ರಾಗಿ ಸರಿ ಕುಡಿಸಿಬಿಟ್ಟಿದ್ದಾರೆ. ಈಗ ತಮ್ಮ ಅಜ್ಞಾನಕ್ಕೆ ತಮ್ಮನ್ನೇ ಶಪಿಸಿಕೊಳ್ಳುತ್ತಿದ್ದಾರೆ.
ಇನ್ನೂ ಅನ್ನನಾಳ ಸರಿಯಾಗಿ ಬೆಳೆಯದ ಎಳೆಯ ಮಗು ರಾಗಿ ಸರಿಯನ್ನು ನುಂಗಲು ಸಾಧ್ಯವಾಗದೆ ಅದು ಗಂಟಲಲ್ಲಿ ಸಿಕ್ಕಿಕೊಂಡು ಉಸಿರಾಟದ ತೊಂದರೆ ಅನುಭವಿಸಿದೆ. ಕೂಡಲೆ ಮಗುವನ್ನು ಮಾಗಡಿಯ ಸರ್ಕಾರಿ ಆಸ್ಪತ್ರೆಗೆ ಕರೆತಂದು ಕೃತಕ ಆಮ್ಲಜನಕ ನೀಡಲಾಯಿತಾದರೂ ಮಗು ಬದುಕುಳಿಯಲಿಲ್ಲ.

ಮಾಗಡಿ ತಾಲ್ಲೂಕು ಆಸ್ಪತ್ರೆಯ ಮಕ್ಕಳ ವೈದ್ಯ ಮಾತನಾಡಿ, ತಾಯಂದಿರು ವೈದ್ಯರ ಮಾತಿಗಿಂಲೂ ಅಕ್ಕ-ಪಕ್ಕದ ಮನೆಯವರ ಮಾತು, ಹಿರಿಯರ ಮಾತುಗಳನ್ನೆ ಹೆಚ್ಚು ನಂಬುತ್ತಿದ್ದಾರೆ. ವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತೆಯರು, ಮಗುವಿಗೆ 6 ತಿಂಗಳಾಗುವವರೆಗೆ ಕಡ್ಡಾಯವಾಗಿ ತಾಯಿಯ ಎದೆಹಾಲನ್ನೇ ಕುಡಿಸುವಂತೆ ಮನವಿ ಮಾಡಿರುತ್ತಾರೆ, ತಾಯಿ ಕಾರ್ಡ್‌ನಲ್ಲೂ ಅದನ್ನು ಸೂಚಿಸಲಾಗಿದೆ ಆದರೂ ಸಹ ತಾಯಂದಿರು ಹೀಗೆ ಅಜ್ಞಾನದಿಂದ ವರ್ತಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications