ಹಾರೋಹಳ್ಳಿ ನೂತನ ತಾಲೂಕು ಕೇಂದ್ರ ಉದ್ಘಾಟನೆ; ಜನಸಂಖ್ಯೆಯ ವಿವರ ಇಲ್ಲಿದೆ
ಇಂದು ಹಾರೋಹಳ್ಳಿ ನೂತನ ತಾಲೂಕು ಕೇಂದ್ರ ಉದ್ಘಾಟನೆಯಾಗಿದೆ. ಹಾಗಾದರೆ ಇಲ್ಲಿರುವ ಜನಸಂಖ್ಯೆಯ ವಿವರವನ್ನು ತಿಳಿಯಿರಿ.
ರಾಮನಗರ, ಫೆಬ್ರವರಿ, 21: ಜಿಲ್ಲೆಯ ಐದನೇ ತಾಲೂಕು ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದಿರುವ ಹಾರೋಹಳ್ಳಿ ತಾಲೂಕು ಕಚೇರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೂತನ ತಾಲೂಕು ಒಟ್ಟು 11 ಗ್ರಾಮ ಪಂಚಾಯತಿಗಳನ್ನು ಒಳಗೊಂಡಿದ್ದು, 82 ಗ್ರಾಮಗಳಿವೆ. ಹೊಸ ತಾಲೂಕಿನ ಜನಸಂಖ್ಯೆ 90 ಸಾವಿರ ಇದೆ. ತಾಲೂಕು ಕಚೇರಿಗೆ ಬೇಕಾದ ಹುದ್ದೆಗಳನ್ನು ಬಿಜೆಪಿ ಸರ್ಕಾರ ಸೃಷ್ಟಿಸಿದೆ. ಎಲ್ಲ ಕಚೇರಿಗಳಿಗೂ ಜಾಗ ಒದಗಿಸಿದೆ. ಅಗತ್ಯ ಬಿದ್ದರೆ ಕಚೇರಿಗಳ ಕಟ್ಟಡ ನಿರ್ಮಿಸಲು 30 ಗುಂಟೆ ಜಮೀನನ್ನು ಮೀಸಲಿಡಲಾಗಿದೆ. ಹಿಂದಿನ ಸರ್ಕಾರ ಹಾರೋಹಳ್ಳಿಯನ್ನು ತಾಲೂಕು ಎಂದು ಘೋಷಿಸಿತ್ತು ಅಷ್ಟೇ. ಆದರೆ ಅದಕ್ಕೆ ಅಗತ್ಯವಾದ ಪ್ರಕ್ರಿಯೆಗಳನ್ನು ನಡೆಸಿದ ಶ್ರೇಯಸ್ಸು ಬಿಜೆಪಿ ಸರ್ಕಾರಕ್ಕೆ ಸಲ್ಲಬೇಕು ಎಂದರು.
ಬಿಜೆಪಿ ಸರ್ಕಾರವು ರಾಮನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಕಲ್ಪ ಮಾಡಿದೆ. ಸಂಸದ ಡಿ.ಕೆ. ಸುರೇಶ್ ಇದನ್ನು ಮೆಚ್ಚಬೇಕಾಗಿತ್ತು. ಆದರೆ ಅವರು ಮೊಸೂರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಅಷ್ಟೆ. ನೂತನ ತಾಲೂಕು ಕಚೇರಿಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ಇದನ್ನು ಚುನಾವಣೆ ಮೇಲೆ ಕಣ್ಣಿಟ್ಟುಕೊಂಡು ಕಾಟಾಚಾರಕ್ಕೇನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಸಚಿವರು
ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಜಿಟಿಟಿಸಿ, ಶ್ರೀರಂಗ ಮತ್ತು ಸತ್ತೇಗಾಲ ನೀರಾವರಿ ಯೋಜನೆ, ಜಲಜೀವನ್ ಮಿಷನ್, ಇಂಡೋ ಜರ್ಮನ್ ಟೆಕ್ನಾಲಜಿ ಸೆಂಟರ್, ಸ್ನಾತಕೋತ್ತರ ಕೇಂದ್ರ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಉನ್ನತೀಕರಣ, ಹೈಟೆಕ್ ರೇಷ್ಮೆ ಮಾರುಕಟ್ಟೆ, ಮಾವು ಸಂಸ್ಕರಣಾ ಘಟಕ ಇವೆಲ್ಲವನ್ನೂ ತಂದಿದ್ದು ನಮ್ಮ ಸರ್ಕಾರ. ಬೇರೆ ಯಾರೇ ಆಗಿದ್ದರೂ ಮೂವತ್ತು ವರ್ಷವಾದರೂ ಇವೆಲ್ಲ ಬರುತ್ತಿರಲಿಲ್ಲ ಎಂದರು.

ಸುಮ್ಮನೆ ಟೀಕೆ ಮಾಡುವುದು ಸರಿಯಲ್ಲ
ನನ್ನ ವಿರುದ್ಧ ಮಾತನಾಡುವವರ ಕೈಯಲ್ಲಿ ನಾಡಪ್ರಭು ಕೆಂಪೇಗೌಡರ ಸಮಾಧಿ ಸ್ಥಳವನ್ನು ಏಕೆ ಅಭಿವೃದ್ಧಿಪಡಿಸಲು ಆಗಲಿಲ್ಲ? ನಮ್ಮ ಸರ್ಕಾರ ಇಡೀ ಕೆಂಪಾಪುರದ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಈ ಕೆಲಸವನ್ನು ಕೈಗೆತ್ತಿಕೊಂಡಿದೆ. ಟೀಕಿಸುವವರು ಮೊದಲು ಇದನ್ನೆಲ್ಲ ಯೋಚಿಸಬೇಕು ಎಂದು ಹೇಳಿದರು.

ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಪ್ಲಾನ್
ರಾಮನಗರದಲ್ಲಿ 270 ಹೆಕ್ಟೇರ್ ಜಾಗದಲ್ಲಿ ಆರೋಗ್ಯ ವಿವಿ ಮತ್ತು ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರ್ಕಾರ 300 ಕೋಟಿ ರೂಪಾಯಿ ಮಂಜೂರು ಮಾಡಿದೆ. ಇದಕ್ಕೆ ಮುಖ್ಯಮಂತ್ರಿಗಳು ಸದ್ಯದಲ್ಲೇ ಶಂಕುಸ್ಥಾಪನೆ ಮಾಡಲಿದ್ದಾರೆ. ಹಾಗೆಯೇ ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಕೂಡ ಸ್ಥಾಪನೆಯಾಗಲಿದೆ. ಜೊತೆಗೆ ಹೊಸ ವೈದ್ಯಕೀಯ ಕಾಲೇಜು ಬರಲಿದೆ. ಇದಕ್ಕೆ ಬೇಕಾಗಿರುವ ಹಣದಲ್ಲಿ ಶೇಕಡ 50ರಷ್ಟನ್ನು (300 ಕೋಟಿ ರೂ.) ಈಗಾಗಲೇ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಜಿಟಿಟಿಸಿ ನಿರ್ಮಾಣಕ್ಕೆ ತಗುಲಿದ ವೆಚ್ಚ
ಬಿಡದಿಯಲ್ಲಿ ಹೊಸ ಐಟಿಐ ಮತ್ತು ಪಾಲಿಟೆಕ್ನಿಕ್ ಕಾಲೇಜನ್ನು ಆರಂಭಿಸಲಾಗುವುದು. ಬೆಂಗಳೂರು ವಿವಿಯ ಸ್ನಾತಕೋತ್ತರ ಕೇಂದ್ರದ ನಿರ್ಮಾಣಕ್ಕೆ ಜಿಗೇನಹಳ್ಳಿಯಲ್ಲಿ ಜಾಗ ಗುರುತಿಸುವ ಜೊತೆಗೆ 50 ಕೋಟಿ ರೂ. ಒದಗಿಸಲಾಗಿದೆ. ತಿಪ್ಪಸಂದ್ರದಲ್ಲಿ ಕೇವಲ ಒಂದು ವರ್ಷದಲ್ಲಿ 49 ಕೋಟಿ ರೂ. ವೆಚ್ಚದಲ್ಲಿ ಜಿಟಿಟಿಸಿ ನಿರ್ಮಿಸಿದ್ದು, ಇದು ಲೋಕಾರ್ಪಣೆಗೆ ಸಜ್ಜಾಗಿದೆ. ಇನ್ನು ಟಾಟಾ ಟೆಕ್ನಾಲಜೀಸ್ ಜೊತೆ ಒಡಂಬಡಿಕೆ ಮಾಡಿಕೊಂಡು ಪ್ರತಿ ಐಟಿಐ ಕಾಲೇಜನ್ನು 30 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗಿದೆ. ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ ಅನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ತಿಳಿಸಿದರು.

ವರ್ಷಕ್ಕೆ 3 ಲಕ್ಷ ವಾಹನಗಳ ತಯಾರಿಕೆ
ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೂ ಒತ್ತು ಕೊಡಲಾಗಿದೆ. ರಾಜ್ಯದಲ್ಲಿ ಅತ್ಯಂತ ಹೆಚ್ಚು ಕೈಗಾರಿಕೆಗಳ ಪಟ್ಟಿಯಲ್ಲಿ ಜಿಲ್ಲೆಯು 2ನೇ ಸ್ಥಾನದಲ್ಲಿದೆ. ಬಿಡದಿಯ ಟೊಯೋಟಾ ಕಾರ್ಖಾನೆಯಲ್ಲಿ ವರ್ಷಕ್ಕೆ 3 ಲಕ್ಷ ವಾಹನಗಳನ್ನು ತಯಾರಿಸಲಾಗುತ್ತಿದೆ. ಅಲ್ಲಿ ಸುಜುಕಿ ಕಾರುಗಳ ತಯಾರಿಕೆಯೂ ಶುರುವಾಗಿದೆ. ಇದರಿಂದ ಉದ್ಯೋಗ ಅವಕಾಶಗಳ ಸಂಖ್ಯೆ ಮೂರು ಪಟ್ಟು ಜಾಸ್ತಿಯಾಗಿದೆ. ಪ್ರಪಂಚದ ಎಲ್ಲಾ ದೇಶಗಳಿಗೂ ಕಾರುಗಳ ಬಿಡಿಭಾಗಗಳು ಇಲ್ಲಿಂದ ಪೂರೈಕೆ ಆಗುತ್ತಿದೆ. ಬಿಡದಿ ಮತ್ತು ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳ ವಿಸ್ತರಣೆಗೆ ಅನುವು ಮಾಡಿಕೊಡಲಾಗಿದೆ. ಇಲ್ಲಿ ಕೈಗಾರಿಕಾ ಟೌನ್ಶಿಪ್ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಕುದೂರಿನ ಬಳಿ ಹೊಸದಾಗಿ ಕೈಗಾರಿಕಾ ಪ್ರದೇಶ ನಿರ್ಮಾಣವಾಗಲಿದೆ ಎಂದು ಮಾಹಿತಿ ನೀಡಿದರು.

450 ಕೋಟಿ ರೂಪಾಯಿ ಒದಗಿಸಲಾಗಿದೆ
ಹಾರೋಹಳ್ಳಿ ತಾಲೂಕು ರಚನೆಗೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ತಾತ್ವಿಕ ಅನುಮೋದನೆ ನೀಡಿದ್ದರು. ನಮ್ಮ ಸರ್ಕಾರ 2022ರ ಜನವರಿಯಲ್ಲಿ ಈ ಸಂಬಂಧ ಅಂತಿಮ ಅಧಿಸೂಚನೆ ಹೊರಡಿಸಿತು. ಹೊಸದಾಗಿ ಘೋಷಣೆಯಾದ 12 ತಾಲೂಕುಗಳ ಪೈಕಿ ಎರಡರಲ್ಲಿ ಮಾತ್ರ ಅಂತಿಮ ಅಧಿಸೂಚನೆ ಆಗಿದೆ. ಅವೆರಡರಲ್ಲಿ ಒಂದು ಹಾರೋಹಳ್ಳಿಯಾಗಿದೆ ಎಂದು ವಿವರಿಸಿದರು. ಹಾಗೆಯೇ ಜಿಲ್ಲೆಯ ಎಲ್ಲಾ ತಾಲೂಕುಗಳ 2.25 ಲಕ್ಷ ಮನೆಗಳಿಗೆ ಶುದ್ದ ಕುಡಿಯುವ ನೀರು ಒದಗಿಸುವುದಕ್ಕಾಗಿ ಜಲಜೀವನ್ ಮಿಷನ್ ಯೋಜನೆಯಡಿ 1,800 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ದೊಡ್ಡ ಮರಳವಾಡಿ ಯೋಜನೆ, ಮಂಚನಬೆಲೆ ಜಲಾಶಯ ಯೋಜನೆ, ಸತ್ತೇಗಾಲ ಯೋಜನೆ, ವೈಜಿ ಗುಡ್ಡ ಯೋಜನೆ, ಬಹುಗ್ರಾಮ ಕುಡಿಯುವ ನೀರು ಯೋಜನೆ ಇದರಲ್ಲಿ ಸೇರಿವೆ. ಅಲ್ಲದೆ, ರಾಮನಗರದಲ್ಲಿ ಕುಡಿಯುವ ನೀರು ಸೌಕರ್ಯಕ್ಕಾಗಿ 450 ಕೋಟಿ ರೂಪಾಯಿ ಒದಗಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ, ಜಿಲ್ಲಾಧಿಕಾರಿ ಅವಿನಾಶ್ ಮೆನನ್, ಜಿಲ್ಲಾ ಪಂಚಾಯತ್ ಸಿಇಒ ದಿಗ್ವಿಜಯ್ ಘೋಟ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ರೇಷ್ಮೆ ಉದ್ಯಮಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೌತಮ ಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications