ನೀವು ನನ್ನ ರಕ್ಷಣೆ ಮಾಡಿದರೆ, ನಾನು ರಾಜ್ಯದ ಬಡವರ ರಕ್ಷಣೆ ಮಾಡುತ್ತೇನೆ: HDK ಹೀಗೆ ಹೇಳಿದ್ದು ಯಾರಿಗೆ?
ರಾಮನಗರ, ಏಪ್ರಿಲ್, 03: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ಏರುತ್ತಲೇ ಇದ್ದು, ಚನ್ನಪಟ್ಟಣದಲ್ಲಿ ರಾಜಕೀಯ ನಾಯಕರ ವಾಗ್ವಾದಗಳು ಕೂಡ ನಡೆಯುತ್ತಲೇ ಇವೆ. ಬೊಂಬೆನಾಡು ಚನ್ನಪಟ್ಟಣ ಕ್ಷೇತ್ರದ ಕಾರ್ಯಕರ್ತರು ಕಳೆದ 2018ರ ಚುನಾವಣೆ ರೀತಿಯಲ್ಲೇ ಈ ಬಾರಿಯೂ ನೀವೇ ನಮ್ಮ ಜೊತೆ ನಿಲ್ಲಬೇಕು. ನನ್ನನ್ನ ನೀವು ರಕ್ಷಣೆ ಮಾಡಿದರೆ, ರಾಜ್ಯದ ಬಡವರನ್ನು ನಾನು ರಕ್ಷಣೆ ಮಾಡುತ್ತೇನೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಚುನಾವಣಾ ಜವಾಬ್ದಾರಿಯನ್ನು ಕ್ಷೇತ್ರದ ಕಾರ್ಯಕರ್ತರಿಗೆ ವಹಿಸಿದರು.
ಸೋಮವಾರ (ಏಪ್ರಿಲ್ 03) ಚನ್ನಪಟ್ಟಣ ತಾಲೂಕಿನ ಸುಣಘಟ್ಟ ಗ್ರಾಮದಲ್ಲಿ ಅನ್ಯ ಪಕ್ಷದ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರಸ್ ಪಕ್ಷಗಳನ್ನು ತೊರೆದ ನೂರಾರು ಮುಖಂಡರು ಹಾಗೂ ಕಾರ್ಯಕರ್ತರಿಗೆ ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು.

ಜನರ ಮೇಲೆ ಸಂಪೂರ್ಣ ವಿಶ್ವಾಸವಿದೆ
ಈ ಬಾರಿ ನನಗೆ ಶಕ್ತಿ ನೀಡಿ, ಇದೇ ತಿಂಗಳ 19ರಂದು ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ. ಏಪ್ರಿಲ್ 20 ಹಾಗೂ ಏಪ್ರಿಲ್ 21 ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ಚನ್ನಪಟ್ಟಣದ ಜನತೆ ಮೇಲೆ ನನಗೆ ಸಂಪೂರ್ಣ ವಿಶ್ವಾಸ ಇದೆ ಎಂದರು.
ಮನೆ ಮಗನ ರೀತಿಯಲ್ಲಿ ನನಗೆ ಆಶೀರ್ವಾದ ಮಾಡಿ. ರಾಮನಗರ ಜಿಲ್ಲೆಯ ಮೂರು ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಾರಿ ನಿಮ್ಮ ಮನೆ ಮಗನನ್ನು ಬಿಟ್ಟು ಬೇರೆ ಯಾರೂ ಸಿಎಂ ಆಗಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.
ಚುನಾವಣಾ ಸಮಯ ಆಗಿರುವುದರಿಂದ ಫ್ರೀ ಪೋಲ್ ಸರ್ವೆಗಳು ನಡೆಯುತ್ತಿವೆ. ಹಣ ಕೊಟ್ಟರೆ ಜೆಡಿಎಸ್‌ಗೆ 200 ಸೀಟ್ ಬರುತ್ತದೆ ಅಂತಾನೂ ತೋರಿಸುತ್ತಾರೆ. ಹಾಗಾಗಿ ಈ ಫ್ರೀ ಪೋಲ್ ಸರ್ವೆಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನೀವು ಸಹ ಅಂತಹ ಸರ್ವೆಗಳ ಕಡೆಗೆ ಗಮನ ಕೊಡಬೇಡಿ ಎಂದು ಕಾರ್ಯಕರ್ತರಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದರು.

ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ
ಈಗಾಗಲೇ ರಾಜ್ಯದಲ್ಲಿ ಪಂಚರತ್ನ ರಥಯಾತ್ರೆ ಯಶಸ್ವಿಯಾಗಿದ್ದು, ಇದಕ್ಕೆ ಎಲ್ಲಾ ಭಾಗದಲ್ಲೂ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದೆ. ಕಳೆದ ಬಾರಿ ಅನಿವಾರ್ಯವಾಗಿ ಒತ್ತಡಕ್ಕೆ ಮಣಿದು ರಾಮನಗರ, ಚನ್ನಪಟ್ಟಣ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದೆ. ನೀವು ಅರ್ಜಿ ಹಾಕಿ ನಾವು ನೋಡಿಕೊಳ್ಳುತ್ತೇವೆ ಅಂತಾ ಭರವಸೆ ಕೊಟ್ಟು, ಚುನಾವಣಾ ಪ್ರಚಾರಕ್ಕೆ ಬರದಿದ್ದರೂ ನನ್ನನ್ನು ಗೆಲ್ಲಿಸಿದ್ದು ಕ್ಷೇತ್ರದ ಜನರಾಗಿದ್ದಾರೆ. ಈ ಬಾರಿ ಸ್ಥಳೀಯವಾಗಿ ಕೆಲ ಭಿನ್ನಾಭಿಪ್ರಾಯ ಇರಬಹುದು, ಅದನ್ನು ಕುಳಿತು ಮಾತಾನಾಡಿಕೊಂಡು ಸರಿಪಡಿಸಿಕೊಳ್ಳಬಹುದು ಎಂದರು.
ಈ ಬಾರಿಯೂ ಚನ್ನಪಟ್ಟಣ ಕ್ಷೇತ್ರದಿಂದ ಗೆಲ್ಲುತ್ತೇನೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ. ಆದರೆ ಕೆಲ ಮುಖಂಡರು ನನ್ನ ಬಳಿ ಆತಂಕ ವ್ಯಕ್ತಪಡಿಸಿದರು. ನಿಮ್ಮ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ, ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಎನ್ನುವ ಸಲಹೆ ನೀಡಿದರು. ಆದರೆ ಅವರಿಗೆ ನಾನು ಒಂದೇ ಮಾತನ್ನು ಸ್ಪಷ್ಟವಾಗಿ ಹೇಳಿದ್ದೇನೆ, ಈ ಬಾರಿ ನಾನು ಒಂದೇ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ಮಾಡುವುದು. ಚನ್ನಪಟ್ಟಣಕ್ಕೆ ಮತ್ತೆ ಮುಖ್ಯಮಂತ್ರಿ ಆಗುವ ಅವಕಾಶವಿದೆ ಎಂದು ಭವಿಷ್ಯ ನುಡಿದರು.












Click it and Unblock the Notifications