ಪ್ರಾದೇಶಿಕ ಪಕ್ಷಕ್ಕೆ ಹೈಕಮಾಂಡ್ ಹಂಗಿಲ್ಲ; ಎಚ್‌ಡಿಕೆ
ರಾಮನಗರ, ಸೆಪ್ಟೆಂಬರ್ 28: "ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದರೆ ಹೈಕಮಾಂಡ್ ಸಂಸ್ಕೃತಿ ಇರುವುದಿಲ್ಲ. ಕನ್ನಡಿಗರ ಕೈಯ್ಯಲ್ಲಿಯೇ ಅಧಿಕಾರ ಇರುತ್ತದೆ. ಪ್ರತಿಯೊಂದಕ್ಕೂ ದೆಹಲಿ ಕಡೆ ನೋಡಬೇಕಾಗಿಲ್ಲ. ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬಂದರೆ ಐತಿಹಾಸಿಕ ನಿರ್ಧಾರಗಳನ್ನು ಹೈಕಮಾಂಡ್ ಹಂಗಿಲ್ಲದೆ ತೆಗೆದುಕೊಳ್ಳಬಹುದು" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.
ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಹಮ್ಮಿಕೊಂಡಿರುವ ಜೆಡಿಎಸ್ ಪಕ್ಷದ ಕಾರ್ಯಗಾರದ ಎರಡನೇ ದಿನದ ಸಭೆಯಲ್ಲಿ ಎಚ್. ಡಿ. ಕುಮಾರಸ್ವಾಮಿ ಹಾಲಿ ಮತ್ತು ಮಾಜಿ ಶಾಸಕರ ಜೊತೆ ಹಲವಾರು ವಿಚಾರಗಳನ್ನು ಹಂಚಿಕೊಂಡರು. ಪ್ರಾದೇಶಿಕ ಪಕ್ಷದ ಅಗತ್ಯತೆಯನ್ನು ವಿವರಿಸಿದರು.
"ದೇಶದಲ್ಲಿ ಪ್ರಾದೇಶಿಕ ರಾಜಕಾರಣಕ್ಕೆ ಹೆಚ್ಚು ಬಲವಿದೆ. ಅದರ ಮೂಲ ಬೇರುಗಳು ನಮ್ಮ ರಾಜ್ಯದಲ್ಲೇ ಇವೆ. ಜೆಡಿಎಸ್ ಈ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ಪೋಷಿಸಲಿದೆ" ಎಂದು ಎಲ್ಲಾ ಮುಖಂಡರಿಗೆ ಉದಾಹರಣೆಗಳ ಸಹಿತ ಕುಮಾರಸ್ವಾಮಿ ವಿವರಣೆ ನೀಡಿದರು.
ಮುಂದಿನ ವಿಧಾನಸಭೆ ಚುನಾವಣೆ ಎದುರಿಸುವ ಬಗ್ಗೆ ಪಕ್ಷದ ಹಾಲಿ ಶಾಸಕರೂ, ಕಳೆದ ಚುನಾವಣೆಯಲ್ಲಿ ಪರಾಜಿತರಾಗಿದ್ದ ಅಭ್ಯರ್ಥಿಗಳು ಹಾಗೂ ಮುಂದಿನ ಚುನಾವಣೆಯ ಅಭ್ಯರ್ಥಿಗಳ ಜೊತೆ ಮಹತ್ವದ ಸಭೆ ನಡೆಸಿದ ಕುಮಾರಸ್ವಾಮಿ ಪಕ್ಷದ ಮುಖಂಡರಿಗೆ ಚುನಾವಣೆ ಗೆಲುವಿನ ಪಾಠ ಮಾಡಿದರು.

ಮಾಜಿ ಮುಖ್ಯಮಂತ್ರಿ ಎಚ್‌ಡಿಕೆ ಪಾಠ
ಜನರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡೋಣ. ಕಾಲಮಿತಿಯಲ್ಲಿ ಅವುಗಳ ಪರಿಹಾರಕ್ಕೆ ಭರವಸೆ ಕೊಡೋಣ. ನೀರಾವರಿ ಯೋಜನೆಗಳು ಮತ್ತು ರೈತ ಪರ ಯೋಜನೆಗಳು ನಮ್ಮ ಪಕ್ಷದ ಮೊದಲ ಆದ್ಯತೆ ಎಂದು ಕುಮಾರಸ್ವಾಮಿ ವಿವರಣೆ ನೀಡಿದರು. ಈ ನಿಟ್ಟಿನಲ್ಲಿ ಅಭ್ಯರ್ಥಿಗಳು ಜನರ ಬಳಿಗೆ ಹೋಗಬೇಕು. ಪಕ್ಷದ ಕಾರ್ಯಕ್ರಮಗಳನ್ನು ಮನವರಿಕೆ ಮಾಡಿಕೊಡಬೇಕು ಎಂದರು.
ರಾಜ್ಯದ 5 ನೀರಾವರಿ ಯೋಜನೆಗಳಿಗೆ ಜೀವ ತುಂಬುವುದು ನಮ್ಮ ಮಹತ್ವದ ನಿಲುವು. ಮೇಕೆದಾಟು, ಯುಕೆಪಿ, ಮಹದಾಯಿ, ಎತ್ತಿನಹೊಳೆ ಯೋಜನೆಗಳ ಕ್ಷಿಪ್ರ ಕಾರ್ಯಗತದ ಭರವಸೆಯೊಂದಿಗೆ ಮುಂದಕ್ಕೆ ಹೋಗೋಣ. ಎತ್ತಿನಹೊಳೆ ಹೆಸರು ಹೇಳಿಕೊಂಡು ಮೊದಲು 8000 ಕೋಟಿ ರೂ. ಡಿಪಿಆರ್ ಮಾಡಲಾಯಿತು. ಆಮೇಲೆ 13000 ಕೋಟಿಗೆ ಮರು ಡಿಪಿಆರ್ ಮಾಡಲಾಯಿತು. ಈಗ ಪುನಃ 24000 ಕೋಟಿ ರೂ.ಗಳಿಗೆ ಡಿಪಿಆರ್ ಮಾಡಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

123 ಸ್ಥಾನದಲ್ಲಿ ಗೆಲುವಿನ ಗುರಿ
2023ಕ್ಕೆ ಸ್ವಂತ ಬಲದಲ್ಲಿ 123 ಸೀಟು ಪಡೆಯುವುದು ಪಕ್ಷದ ದೊಡ್ಡ ಗುರಿ. ಈ ನಿಟ್ಟಿನಲ್ಲಿ ಪಂಚರತ್ನ ಯೋಜನೆ ಜಾರಿ ಮಾಡುವುದುದ ನಮ್ಮ ಗುರಿ. ಆರೋಗ್ಯ, ಶಿಕ್ಷಣ, ಕೃಷಿ, ವಸತಿ, ಉದ್ಯೋಗ ಐದು ಕ್ಷೇತ್ರಗಳಲ್ಲಿ ವಿಶೇಷ ಯೋಜನೆ ಮೂಲಕ ರಾಜ್ಯದ ಅಮೂಲಾಗ್ರ ಅಭಿವೃದ್ಧಿಗೆ ಕಾಣಿಕೆ ನೀಡುವುದು ಪಕ್ಷದ ಉದ್ದೇಶವಾಗಿದೆ ಎಂದು ಕುಮಾರಸ್ವಾಮಿ ವಿವರಣೆ ಕೊಟ್ಟರು. ತಳ ಮಟ್ಟದಿಂದ ಅಭಿವೃದ್ಧಿ ಮಾಡುವುದು ನಮ್ಮ ಪರಿಕಲ್ಪನೆ ಆಗಿದ್ದು, ಅದಕ್ಕೆ ಬೇಕಾದ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ಕೊಟ್ಟರು.
Recommended Video

ಜೆಡಿಎಸ್ ಸದಸ್ಯರ ನಿಧಿ
ಜೆಡಿಎಸ್ ಸದಸ್ಯರ ನಿಧಿ ಸ್ಥಾಪನೆಮಾಡುವ ಮೂಲಕ ಪ್ರಾಮಾಣಿಕ ಕಾರ್ಯಕರ್ತರ ರಕ್ಷಣೆಗೆ ನಿಲ್ಲುವುದು ನಮ್ಮ ನಿಲುವು. ಪಕ್ಷದ ಸದಸ್ಯತ್ವ ನೋಂದಣಿಯಿಂದ ಬಂದ ಹಣದಿಂದ ಕಾರ್ಯಕರ್ತರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಆರೋಗ್ಯ ಸಮಸ್ಯೆಗೆ ಹಣ ನೀಡುವುದು. ಕಾರ್ಯಕರ್ತರು ಮೃತರಾದಾಗ ಈ ನಿಧಿಯಿಂದ ಪರಿಹಾರ ನೀಡುವುದು ಇದರಲ್ಲಿ ಅಡಕವಾಗಿರುವ ಅಂಶಗಳು ಎಂದು ಎಚ್. ಡಿ. ಕುಮಾರಸ್ವಾಮಿ ತಮ್ಮ ಕನಸನ್ನು ಪದಾಧಿಕಾರಿಗಳ ಮುಂದೆ ತೆರೆದಿಟ್ಟರು.
ಅಕ್ಟೋಬರ್ 30ರಂದು ನಡೆಯಲಿರುವ ಹಾನಗಲ್ ಮತ್ತು ಸಿಂಧಗಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಜೆಡಿಎಸ್ ಸಿದ್ಧವಾಗಿದೆ ಎಂದು ಕುಮಾರಸ್ವಾಮಿ ಹೇಳಿದರು. ಎರಡೂ ಕ್ಷೇತ್ರದಲ್ಲಿ ಶಾಸಕರ ಅಕಾಲಿಕ ಮರಣದಿಂದಾಗಿ ಉಪ ಚುನಾವಣೆ ಎದುರಾಗಿದೆ. ಜೆಡಿಎಸ್ ಚುನಾವಣೆಗೆ ಸಿದ್ಧವಾಗಿದೆ ಎಂದು ಹೇಳಿದರು.
ಸೋಮವಾರದಿಂದ ವಿನೂತನ ಕಾರ್ಯಗಾರ ಮಾಡುತ್ತಿದ್ದೇವೆ. ಈ ಸಮಯದಲ್ಲಿಯೇ ಚುನಾವಣೆ ದಿನಾಂಕ ಘೋಷಣೆ ಮಾಡಿದ್ದಾರೆ. ಇದು ನಮ್ಮ ಪಕ್ಷಕ್ಕೆ ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ದತಾ ಪರೀಕ್ಷೆಯಂತೆ ಬಂದಿದೆ ಎಂದು ಕುಮಾರಸ್ವಾಮಿ ತಿಳಿಸಿದರು.












Click it and Unblock the Notifications