ಭಾರಿ ಮಳೆಗೆ ರೇಷ್ಮೆ ನಗರಿ ತತ್ತರ: ಸರ್ಕಾರಿ ಕಚೇರಿಗಳು ಜಲಾವೃತ
ರಾಮನಗರ, ಅಕ್ಟೋಬರ್ 20: ಕಳೆದ ಆಗಸ್ಟ್ ತಿಂಗಳಿನಲ್ಲಿ ಸುರಿದ ರಣಮಳೆಗೆ ತತ್ತರಿಸಿದ್ದ ರೇಷ್ಮೆ ನಗರಿ ರಾಮನಗರ ಜಿಲ್ಲೆಯ ಜನರು ಕಳೆದ ನಾಲ್ಕೂ ದಿನಗಳಿಂದ ಅಬ್ಬರಿಸುತ್ತಿರುವ ವರುಣನ ಆರ್ಭಟಕ್ಕೆ ಹೈರಾಣಾಗಿದ್ದಾರೆ. ಅದರಲ್ಲೂ ಕಳೆದ ರಾತ್ರಿ ಸುರಿದ ಬಾರಿ ಮಳೆಗೆ ಜಿಲ್ಲೆಯ ಅನೇಕ ಕಡೆ ಹಲವು ಅವಾಂತರಗಳು ಸಂಭವಿಸಿವೆ.
ಜಿಲ್ಲೆಯನ್ನು ಬಿಟ್ಟೂಬಿಡದೆ ಕಾಡುತ್ತಿರುವ ಮಳೆಯಿಂದಾಗಿ ಮೊದಲೇ ಭೀತಿಯಲ್ಲಿದ್ದ ಜನರಿಗೆ ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆ ಮತ್ತಷ್ಟು ಆತಂಕ ಹೆಚ್ಚಿಸಿದೆ. ಜಿಲ್ಲೆಯಲ್ಲಿ ಇನ್ನೂ ಮುಂದಿನ 4 ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಧಾರಾಕಾರ ಮಳೆ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿರುವುದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿಸಿದೆ. ಕಳೆದ ರಾತ್ರಿ ಸುರಿದ ಬಾರಿ ಮಳೆಗೆ ಕನಕಪುರ ಮತ್ತು ರಾಮನಗರ ತಾಲೂಕಿನಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ.

ದಿನ ಬಳಕೆಯ ವಸ್ತುಗಳು ನೀರುಪಾಲು
ಕಳೆದ ರಾತ್ರಿ ಸುರಿದ ಬಾರಿ ಮಳೆಗೆ ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಕಬ್ಬಾಳು ಗ್ರಾಮದಲ್ಲಿ ಸುರಿದ ಬಾರಿ ಮಳೆಗೆ ಬೆಸ್ಕಾಂ ಕಚೇರಿಗೆ ಮಳೆ ನೀರು ನುಗ್ಗಿದೆ. ಕಬ್ಬಾಳು ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಮಳೆ ನೀರು ನುಗ್ಗಿದ ಪರಿಣಾಮ ಜನರು ಹಾಗೂ ಸಿಬ್ಬಂದಿ ಸಾಕಷ್ಟು ತೊಂದರೆ ಅನುಭವಿಸಿದರು. ಸಾತನೂರು ಹೋಬಳಿಯ ಮನೆಗಳು ಮತ್ತು ಅಂಗಡಿಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ದಿನಸಿ ಸಾಮಾನು ಸೇರಿದಂತೆ ಅಗತ್ಯ ದಿನ ಬಳಕೆಯ ವಸ್ತುಗಳು ನೀರುಪಾಲಾಗಿದೆ. ಇನ್ನು ಕಬ್ಬಾಳು ಗ್ರಾಮದ ವ್ಯವಸಾಯ ಸಹಕಾರ ಸಂಘದ ಕಚೇರಿ ಕಾಂಪೌಂಡ್ ಕುಸಿದಿದ್ದು ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಅರ್ಕಾವತಿನದಿಯಲ್ಲಿ ತೇಲಿ ಬಂದ ಕಾರು
ಸುಮಾರು 40 ವರ್ಷಗಳ ನಂತರ ಸುರಿದ ಭಾರಿ ಮಳೆಗೆ ಸಾತನೂರು ಹೋಬಳಿ ಕಚ್ಚುವನಹಳ್ಳಿ ಬಳಿಯ ಸೇತುವೆ ಮಳೆಯ ರಭಸಕ್ಕೆ ಕೊಚ್ಚಿ ಹೋಗಿದೆ. ಕಚ್ಚುವನಹಳ್ಳಿ ಹಾಗೂ ತೋಟಹಳ್ಳಿ ಸಂಪರ್ಕ ಸೇತುವೆ ಕೊಚ್ಚಿ ಹೋಗಿರುವ ಹಿನ್ನಲೆಯಲ್ಲಿ ಸುಮಾರು ಹತ್ತಾರು ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಮಳೆ ಅಬ್ಬರಕ್ಕೆ ಅರ್ಕಾವತಿ ನದಿ ಮೈದುಂಬಿ ಹರಿಯುತ್ತಿದ್ದು, ನದಿಯಲ್ಲಿ ಕಾರೊಂದು ತೇಲಿ ಬಂದಿರುವುದು ಜನರನ್ನು ಆಚ್ಚರಿಗೊಳಿಸಿದೆ . ನದಿಯಲ್ಲಿ ಕಾರು ತೇಲಿ ಬಂದಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕನಕಪುರ ಗ್ರಾಮಾಂತರ ಪೊಲೀಸರು ಕ್ರೇನ್ ಮೂಲಕ ಕಾರನ್ನು ನದಿಯಿಂದ ಮೇಲೆತ್ತಿದ್ದಾರೆ.

ಮಳೆಯಿಂದ ರಾಮನಗರದ ಬಾಲಕರ ಪ್ರೌಢಶಾಲೆಗೆ ಹಾನಿ
ರಾಮನಗರ ತಾಲೂಕಿನ ಹೊಂಬಯ್ಯನದೊಡ್ಡಿ ಗ್ರಾಮದಲ್ಲಿ ಭಾರಿ ಮಳೆಗೆ ಮನೆಗೋಡೆ ಕುಸಿದು ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹೊಂಬಯ್ಯನದೊಡ್ಡಿ ಭಾಗ್ಯಮ್ಮ ಎಂಬುವರಿಗೆ ಸೇರಿದ ಮನೆ ಗೋಡೆ ಬಿದ್ದಿದ್ದು, ಮನೆಯಲ್ಲಿದ್ದ ಭಾಗ್ಯಮ್ಮ ಕುಟುಂಬಸ್ಥರು ಕೂದಲೆಳೆಯ ಅಂತರದಲ್ಲಿ ಬಚಾವ್ ಆಗಿದ್ದಾರೆ. ಇನ್ನು ಮಳೆ ಅವಾಂತರಕ್ಕೆ ರಾಮನಗರದ ಬಾಲಕರ ಪ್ರೌಢಶಾಲೆ ಶಿಥಿಲಾವಸ್ಥೆಗೊಂಡಿದೆ. ಯಾವುದೇ ಅಪಾಯ ಸಂಭವಿಸುವ ಮೊದಲು ಕ್ರಮಕೈಗೊಳ್ಳಿ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ತೆಂಗು, ಬಾಳೆ ಬೆಳೆ ನಾಶ: ರೈತ ಕಂಗಾಲು
ಭಾರೀ ಮಳೆಗೆ ರಾಮನಗರದ ಬಾಲಕರ ಪ್ರೌಢಶಾಲೆಯ ಕೊಠಡಿಯ ಛಾವಣಿ ಸೋರುತ್ತಿದೆ. ಹೀಗಾಗಿ ಬದಲಿ ಕೊಠಡಿ ನೀಡುವಂತೆ ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳು ಪ್ರತಿಭಟನೆಗೆ ನಡೆಸಿದರು. ಪ್ರತಿಭಟನೆಯ ವೇಳೆ ಶಾಲಾ ಶಿಕ್ಷಕರು ಹಾಗೂ ಕಾಲೇಜು ಪ್ರಾಧ್ಯಾಪಕರ ನಡುವೆ ಮಾತಿನ ಜಟಾಪಟಿ ನಡೆದಿದೆ.
ಕಳೆದ ಬಾರಿಯ ರಣಮಳೆಗೆ ರಾಮನಗರ ತತ್ತರಿಸಿ ಹೋಗಿತ್ತು. ಬಿಡುವು ನೀಡಿದ್ದ ವರುಣ ಇದೀಗ ಮತ್ತೆ ತನ್ನ ಆರ್ಭಟ ಮುಂದುವರಿಸಿದ್ದಾನೆ. ಪರಿಣಾಮ ತೆಂಗು, ಬಾಳೆ, ತುಳಸಿ ಸೇರಿ ಹಲವು ಬೆಳೆಗಳು ಮಳೆಯ ಹೊಡೆತಕ್ಕೆ ನಾಶವಾಗಿವೆ. ಕಳೆದ ಒಂದೂವರೆ ತಿಂಗಳಿನ ಹಿಂದೆ ಉಂಟಾಗಿದ್ದ ಪ್ರವಾಹ ಸುಧಾರಿಸಿಕೊಳ್ಳುವ ಮುನ್ನವೇ ರೈತರು ಮಳೆಯ ಅವಾಂತರದಿಂದ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.












Click it and Unblock the Notifications