ರಾಮನಗರದಲ್ಲಿ ವರ್ಷಧಾರೆ, ಕೆರೆಯಂತಾದ ರಸ್ತೆಗಳು, ವಾಹನ ಸವಾರರ ಪರದಾಟ
ರಾಮನಗರ, ಮೇ, 29: ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣ ಆರ್ಭಟ ಶುರು ಮಾಡಿದ್ದಾನೆ. ಅದೇ ರೀತಿ ರೇಷ್ಮೆನಗರಿ ಅಂತಲೇ ಪ್ರಸಿದ್ಧಿ ಪಡೆದಿರುವ ರಾಮನಗರದಲ್ಲಿ ಸೋಮವಾರ (ಮೇ 29) ಮಳೆರಾಯ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಹೀಗೆ ಸತತವಾಗಿ ಒಂದು ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಯಿಂದ ರಸ್ತೆಗಳೆಲ್ಲ ಕೆರೆಯಂತಾಗಿ ಮಾರ್ಪಟ್ಟಿದ್ದು, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಕೆಲವೆಡೆ ರಸ್ತೆ ಮೇಲೆಯೇ ಬೃಹತ್ ಮರಗಳು ಮುರಿದು ಬಿದ್ದಿದ್ದು, ಸದ್ಯ ಯಾವುದೇ ಅನಾಹುತಗಳ ಸಂಭವಿಸಿಲ್ಲ ಎನ್ನಲಾಗಿದೆ.
ಸೋಮವಾರ ಮಧ್ಯಾಹ್ನ ಸುಮಾರು ಒಂದು ಗಂಟೆಗಳ ಕಾಲ ಅಬ್ಬರದ ಮಳೆ ಸುರಿದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಆಗಿತ್ತು. ಇನ್ನು ಚನ್ನಪಟ್ಟಣದ ಸಾತನೂರು ಸರ್ಕಲ್ ಬಳಿಯ ಹೆದ್ದಾರಿ ಜಲಾವೃತವಾಗಿ ವಾಹನ ಸವಾರರು ನಿಂತಲ್ಲಿಯೇ ನಿಂತು ಪರದಾಡಿದ ಘಟನೆಯೂ ನಡೆಯಿತು.

ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಜನಜೀವನ ಅಸ್ತವ್ಯಸ್ತ ಆಗಿದ್ದು, ಬೀದಿಬದಿ ವ್ಯಾಪಾರಿಗಳು ಕೂಡ ಪರದಾಡಿದ್ದಾರೆ. ಇನ್ನು ಚನ್ನಪಟ್ಟಣದ ಮಧ್ಯ ಭಾಗದಲ್ಲಿ ಹಾದು ಹೋಗುವ ಹಳೆ ಮೈಸೂರು-ಬೆಂಗಳೂರು ಹೆದ್ದಾರಿಯು ಜಲಾವೃತವಾದ ಘಟನೆಯೂ ಸಂಭವಿಸಿದೆ.
ಮತ್ತೊಂದೆಡೆ ಮುಂಗಾರು ಮಳೆ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಅದಕ್ಕೂ ಮುಂಚೆಯೇ ಇದೀಗ ಮುಂಗಾರು ಪೂರ್ವದಲ್ಲಿ ಸುರಿದ ಮಳೆ ಸಾಕಷ್ಟು ಅನಾಹುತಗಳನ್ನೇ ಸೃಷ್ಟಿಸಿದೆ. ಆದ್ದರಿಂದ ಕಳೆದ ಬಾರಿಯಂತೆ ಈ ಬಾರಿ ಅನಾಹುತಗಳು ಸಂಭವಿಸಬಾರದೆಂದು ಆಯಾ ಜಿಲ್ಲಾವಾರು ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ರಾಜ್ಯದಲ್ಲಿ ಹೆಚ್ಚಲಿದೆ ಮಳೆ ಆರ್ಭಟ
ಅಲ್ಲದೆ ಈ ತಿಂಗಳ ಅಂತ್ಯಕ್ಕೆ ರಾಜ್ಯದಲ್ಲಿ ಮಳೆಯ ಆರ್ಭಟ ಹೆಚ್ಚಾಗಲಿದ್ದು, ಅದರಲ್ಲೂ ದಕ್ಷಿಣ ಒಳನಾಡಿನ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜೂನ್ ಮೊದಲ ವಾರದಲ್ಲಿ ರಾಜ್ಯದಲ್ಲಿ ಮುಂಗಾರು ಪ್ರವೇಶ ಆಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ತಿಳಿಸಿದೆ. ಅದಕ್ಕೂ ಮುನ್ನ ರಾಜ್ಯದಲ್ಲಿ ಮಂಗಳವಾರದಿಂದ (ಮೇ 30) ಮಳೆಯ ಆರ್ಭಟ ಹೆಚ್ಚಾಗಲಿದೆ.
ಇನ್ನು ಮೇ 31 ಮತ್ತು ಜೂನ್ 1ರಂದು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಅರ್ಭಟ ಹೆಚ್ಚುವ ಸಾಧ್ಯೆತೆಯಿದೆ ಎಂದು ತಿಳಿಸಿದೆ. ಆದ್ದರಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೊಡಗು, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ತುಮಕೂರು, ರಾಮನಗರ ಜಿಲ್ಲೆಗಳಿಗೆ ಮೇ 31 ಮತ್ತು ಜೂನ್ 1ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಇನ್ನು ಉತ್ತರ ಒಳನಾಡು, ಕರಾವಳಿ ಜಿಲ್ಲೆಗಳಲ್ಲೂ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಸಿಲಿಕಾನ್ ಸಿಟಿಯಲ್ಲಿ ಕಳೆದ ನಾಲ್ಕು ದಿನಗಳ ಕಾಲ ಮಳೆರಾಯ ಬಿಡುವು ನೀಡಿದ್ದು, ಮತ್ತೇ ನಗರದಲ್ಲಿ ನಾಳೆಯಿಂದ ಆರ್ಭಟ ಶುರು ಮಾಡಲಿದ್ದಾನೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ನೀಡಿದೆ. ಆದ್ದರಿಂದ ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications