"ಸಿದ್ದರಾಮಯ್ಯರಿಂದ ನಾನೇನು ಬೆಳೆದಿಲ್ಲ; ಇಂಥ ಎಷ್ಟು ಗಿಣಿಗಳನ್ನು ದೇವೇಗೌಡರು ಸಾಕಿಲ್ಲ!"
ರಾಮನಗರ, ಸೆಪ್ಟೆಂಬರ್ 24: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವೆ ಮಾತಿನ ವಾಗ್ವಾದ ಮತ್ತೆ ಮುಂದುವರೆದಿದೆ. "ಸಿದ್ದರಾಮಯ್ಯ ಸಾಕಿದ ಗಿಣಿಗಳೇ ಹದ್ದಾಗಿ ಕುಕ್ಕಿದವು' ಎಂಬ ಹೇಳಿಕೆ ಕುರಿತು ಇಂದು ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ ಅವರ ಕುರಿತು ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಕಳೆದ ಎರಡು ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹಾನಿಗೀಡಾದ ಚನ್ನಪಟ್ಟಣದ ಹಲವು ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, "ನಾನು ಸಿದ್ದರಾಮಯ್ಯ ಸಾಕಿರುವ ಗಿಣಿ ಅಲ್ಲ. ರಾಮನಗರ ಜಿಲ್ಲೆಯ ಜನ ನನ್ನನ್ನ ಬೆಳೆಸಿದ್ದಾರೆ. ಸಿದ್ದರಾಮಯ್ಯರಿಂದ ನಾನೇನು ಬೆಳೆದಿಲ್ಲ. ದೇವೇಗೌಡರು ಸಿದ್ದರಾಮಯ್ಯನವರಂತಹ ಗಿಣಿಗಳನ್ನ ಸಾಕಷ್ಟು ಬೆಳೆಸಿದ್ದಾರೆ. ಆದರೆ ಅವುಗಳೇ ಹೇಗೆ ಕುಕ್ಕಿದ್ದಾವೆಂದು ನನಗೆ ಗೊತ್ತಿದೆ" ಎಂದು ತಿರುಗೇಟು ನೀಡಿದ್ದಾರೆ.

"ನಾನು ಸಿದ್ದರಾಮಯ್ಯರಿಂದ ಸಿಎಂ ಆಗಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ತೀರ್ಮಾನದಿಂದ ಸಿಎಂ ಆಗಿದ್ದೆ. ಅದನ್ನು ಸಿದ್ದರಾಮಯ್ಯನವರು ಸಹಿಸಲಿಲ್ಲ. ಹಾಗಾಗಿ ಈ ಸರ್ಕಾರವನ್ನು ಕೆಡವಲು ಅವರೇ ಮುಂದಾದರು. ನಾವಾದರೂ ರಾಜ್ಯದಲ್ಲಿ ಒಂದು ಪ್ರಾದೇಶಿಕ ಪಕ್ಷವನ್ನ ಕಟ್ಟಿ ಬೆಳೆಸಿದ್ದೇವೆ. ಇವರು ಕಾಂಗ್ರೆಸ್ ಪಕ್ಷಕ್ಕೆ ಹೋಗಿ, ಅಲ್ಲಿನ ಶಕ್ತಿಯನ್ನ ಧಾರೆ ಎರೆಸಿಕೊಂಡು ಬೆಳೆದವರು. ಅವರಿಗೆ ಶಕ್ತಿ ಇದ್ದರೆ ಕಾಂಗ್ರೆಸ್ ನಿಂದ ಹೊರಬಂದು ಪಕ್ಷ ಕಟ್ಟಿ ಬೆಳೆಸಲಿ" ಎಂದು ಸವಾಲು ಹಾಕಿದರು.
ಇದೇ ಸಂದರ್ಭ, ಮಳೆಯಿಂದ ತೊಂದರೆಗೆ ಒಳಗಾದ ಎಪಿಎಂಸಿ ಕ್ವಾಟ್ರಸ್ ನ 72 ಕುಟುಂಬಗಳಿಗೆ ವೈಯಕ್ತಿಕವಾಗಿ ಪ್ರತಿ ಕುಟುಂಬಕ್ಕೆ 5000 ರೂಪಾಯಿ ಪರಿಹಾರ ಘೋಷಿಸಿದರು.












Click it and Unblock the Notifications