ನಿಖಿಲ್ ಮದ್ವೆಗೆ ಜನತೆಯನ್ನು ಆಮಂತ್ರಿಸಿದ ಎಚ್ಡಿಕೆ ದಂಪತಿ
ರಾಮನಗರ, ಫೆಬ್ರವರಿ 17: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ದಂಪತಿಯ ಪುತ್ರ ನಿಖಿಲ್ ಕುಮಾರಸ್ವಾಮಿ ಮದುವೆ ಏಪ್ರಿಲ್ ತಿಂಗಳಿನಲ್ಲಿ ರಾಮನಗರ-ಚನ್ನಪಟ್ಟಣ ಮಧ್ಯೆ ನಡೆಯಲಿದ್ದು, ಜಾಗದ ಸ್ವಚ್ಛತಾ ಕಾರ್ಯವನ್ನು ಹೆಚ್ಡಿಕೆ ದಂಪತಿಗಳು ಪರಿಶೀಲನೆ ನಡೆಸಿದರು.
ನಿಖಿಲ್ ಕುಮಾರಸ್ವಾಮಿ ಮದುವೆ ನಿಗದಿಪಡಿಸಿರುವ ಸ್ಥಳ ಸುಮಾರು 54 ಎಕರೆ ಪ್ರದೇಶವಿದೆ. ಇದರಲ್ಲಿ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ (CMA) ಸೇರಿದ 22 ಎಕರೆ, ಉದ್ಯಮಿಗೆ ಸೇರಿದ 23 ಎಕರೆ ಹಾಗೂ ಉಳಿಕೆ ಭೂಮಿ ಇತರರ ಒಡೆತನದಲ್ಲಿದೆ.
ಮದುವೆ ನಡೆಯುವ ಸ್ಥಳವು ರಾಮನಗರದಿಂದ 5 ಕಿ.ಮೀ ಹಾಗೂ ಚನ್ನಪಟ್ಟಣದಿಂದ 8 ಕಿ.ಮೀ ಅಂತರದಲ್ಲಿದ್ದು. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇರುವುದರಿಂದ ವಿವಾಹ ಕಾರ್ಯಕ್ಕೆ ಸೂಕ್ತವಾದ ಸ್ಥಳವೆಂಬ ನಿರ್ಧಾರ ಮಾಡಿರುವುದಾಗಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಪುತ್ರನ ವಿವಾಹಕ್ಕೆ ಕ್ಷೇತ್ರದ ಜನರಿಗೆ ಆಮಂತ್ರಣ ನೀಡಿದ ಹೆಚ್ಡಿಕೆ ದಂಪತಿಗಳು:
ರಾಮನಗರ ತಾಲ್ಲೂಕಿನ ಕೈಲಾಂಚ ಗ್ರಾಮದಲ್ಲಿ ಶ್ರೀಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಮಹಾದ್ವಾರ ಉದ್ಘಾಟಿಸಿದ ಹೆಚ್ಡಿಕೆ ದಂಪತಿಗಳು, ವೇದಿಕೆ ಕಾರ್ಯಕ್ರಮದಲ್ಲಿ ಕ್ಷೇತ್ರದ ಜನತೆಗೆ ತಮ್ಮ ಪುತ್ರ ನಿಖಿಲ್ ಮದುವೆಗೆ ಆಹ್ವಾನ ನೀಡಿದರು.
ಬಹಳ ದಿನಗಳಿಂದ ನನಗೆ ಹಾಗೂ ಕುಮಾರಸ್ವಾಮಿಯವರಿಗೆ ನಮ್ಮ ಜನರ ನಡುವೆ ನಮ್ಮ ಮಗನ ಮದುವೆ ಮಾಡಬೇಕು ಎನ್ನುವ ಆಸೆಯಿತ್ತು, ಇದೀಗ ಅದು ಈಡೇರುತ್ತಿರುವುದು ಖುಷಿಯಿದೆ. ಎಪ್ರಿಲ್ ತಿಂಗಳಲ್ಲಿ ನಡೆಯುವ ನಿಮ್ಮ ಮನೆಯ ಮಗನ ಮದುವೆಗೆ ಬಂದು ಅಶೀರ್ವಾದಿಸಿ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಜನರಲ್ಲಿ ಮನವಿ ಮಾಡಿದರು.

ಇನ್ನು ಇದೇ ವೇದಿಕೆಯಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಎಲ್ಲಾ ನಾಯಕರು ತಮ್ಮ ಮನೆಯ ಕಾರ್ಯಕ್ರಮಗಳನ್ನು ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ನಾಯಕರನ್ನು ಕರೆದು ಸಂಭ್ರಮಿಸುತ್ತಾರೆ.

ನನ್ನ ಮಗನ ಮದುವೆಗೆ ದೊಡ್ಡ ದೊಡ್ಡ ನಾಯಕರು ಬರದಿದ್ದರೂ ಪರವಾಗಿಲ್ಲ, ನನ್ನನ್ನು ಬೆಳೆಸಿರುವ ಜನ ನೀವು, ನಿಮ್ಮ ನಡುವೆಯೇ ಮದುವೆ ಮಾಡಬೇಕೇಂದು ಹೆದ್ದಾರಿ ಪಕ್ಕದಲ್ಲೇ ನಿಗದಿ ಮಾಡಿದ್ದೇವೆ, ಜಿಲ್ಲೆಯ ಪ್ರತಿ ಮನೆಗೂ ಮದುವೆ ಆಹ್ವಾನ ಪತ್ರಿಕೆ ತಲುಪಿಸುವ ವ್ಯವಸ್ಥೆ ಮಾಡುತ್ತೇನೆ. ಅಂದು ನೀವು ಬಂದು ನವ ದಂಪತಿಗಳಿಗೆ ಆಶೀರ್ವಾದ ಮಾಡಿ ನನ್ನೊಡನೆ ಊಟ ಮಾಡಿದರೆ ಅದೇ ನನಗೆ ನೆಮ್ಮದಿ, ಎಂದು ಭಾವನಾತ್ಮಕವಾಗಿ ಜನರಿಗೆ ಆಹ್ವಾನ ನೀಡಿದರು.












Click it and Unblock the Notifications