ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದ ಎಚ್.ಡಿ ಕುಮಾರಸ್ವಾಮಿ
ರಾಮನಗರ ಅಕ್ಟೋಬರ್ 22: ಮುಂದಿನ ವಿಧಾನಸಭಾ ಚುನಾವಣೆಗೆ ಚನ್ನಪಟ್ಟಣದಿಂದಲೇ ಸ್ಪರ್ಧೆ ಮಾಡುತ್ತೇನೆ. ಚನ್ನಪಟ್ಟಣ ಕ್ಷೇತ್ರವನ್ನ ಬಿಟ್ಟು ಹೋಗುವ ಪ್ರಮೇಯವೇ ಇಲ್ಲ. ಮುಖಂಡರು ಹಾಗೂ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಬಿಡದಿಯ ಈಗಲ್ ಟನ್ ರೆಸಾರ್ಟ್‌ನಲ್ಲಿ ಚನ್ನಪಟ್ಟಣ ತಾಲೂಕಿನ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರ ಜೊತೆಗೆ ಜೊತೆಗೆ ಸಭೆ ನಡೆಸಿದ ಕುಮಾರಸ್ವಾಮಿ, ಸ್ವಕ್ಷೇತ್ರದಲ್ಲಿ ಪಕ್ಷವನ್ನ ಸದೃಢವಾಗಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸಿದರು.
ಈ ವೇಳೆ ಕಾರ್ಯಕರ್ತರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಚನ್ನಪಟ್ಟಣ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಕಾರ್ಯಕರ್ತರು ಈ ರೀತಿ ವದಂತಿಗಳಿಗೆ ಕಿವಿ ಕೊಡಬೇಡಿ ಹಾಗೂ ಆತಂಕ ಪಡಬೇಡಿ ಎಂದರು.

ಪ್ರಚಾರಕ್ಕೆ ಬರದೇ ಇದ್ದರೂ ಗೆಲ್ಲಿಸುವ ಕ್ಷೇತ್ರ ಚನ್ನಪಟ್ಟಣ
ಇಡೀ ದೇಶದಲ್ಲಿ, ನಾಮಪತ್ರ ಸಲ್ಲಿಸಿ ಅಭ್ಯರ್ಥಿ ಪ್ರಚಾರಕ್ಕೆ ಬರದೇ ಇದ್ದರೂ, ಕಾರ್ಯಕರ್ತರೆ ಅಭ್ಯರ್ಥಿಯನ್ನು ಗೆಲ್ಲಿಸುವ ಕ್ಷೇತ್ರ ಇದ್ದರೆ ಅದು ಚನ್ನಪಟ್ಟಣ ಕ್ಷೇತ್ರ. ಚನ್ನಪಟ್ಟಣದಲ್ಲಿ ನಾನು ನಾಮಪತ್ರ ಸಲ್ಲಿಸಿ ಹೋಗಿದ್ದೆ ಅಷ್ಟೇ. ಚುನಾವಣೆ ವೇಳೆ ಪ್ರತಿಯೊಬ್ಬ ಕಾರ್ಯಕರ್ತನೂ ನಾನೇ ಅಭ್ಯರ್ಥಿ ಅಂತಾ ತಿಳಿದು ಚುನಾವಣೆ ಮಾಡಿದ್ದೀರಿ ಹಾಗಾಗಿ ಆ ಕ್ಷೇತ್ರ ಮರೆಯುವುದುಂಟೆ. ನಾನು ಯಾವುದೇ ಕಾರಣಕ್ಕೂ ಕ್ಷೇತ್ರ ಬಿಡಲ್ಲ. ಇದೆಲ್ಲವೂ ತಾಲೂಕಿನ ವಿರೋಧ ಪಕ್ಷದ ನಾಯಕರು ಹಬ್ಬಿಸಿರುವ ಗಾಳಿ ಸುದ್ದಿ ಇದಕ್ಕೆ ಕಾರ್ಯಕರ್ತರು ಕಿವಿಕೊಡಬೇಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಸಿ.ಪಿ.ಯೋಗೇಶ್ವರ್ ಕುಟುಕಿದ ಎಚ್‌ಡಿಕೆ
ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಈಗಾಗಲೇ ಹಣದ ಹೊಳೆ ಹರಿಯುತ್ತಿದೆ. ಹಣವನ್ನ ಕೊಟ್ಟು ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಸೆಳೆಯುವ ಕೆಲಸ ನಡೆಯುತ್ತಿದೆ. ಇದಕ್ಕೆಲ್ಲ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಸೊಪ್ಪು ಹಾಕಬೇಡಿ ಎನ್ನುವ ಮೂಲಕ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್‌ಗೆ ಪರೋಕ್ಷವಾಗಿ ಕುಟುಕಿದರು.
ನೀವು ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಸಂಘಟಿತರಾಗಿ ಚುನಾವಣೆ ದಿನದವರೆಗೆ ಒಗ್ಗಟ್ಟಿನಿಂದ ಕೆಲಸ ಮಾಡಿ ಕುಮಾರಸ್ವಾಮಿ ಕಾರ್ಯಕರ್ತರಿಗೆ ಕರೆಕೊಟ್ಟರು.

ನಿಖಿಲ್‌ಗೆ ಪಕ್ಷ ಸಂಘಟನೆಯ ಜವಾಬ್ದಾರಿ
ನಿಖಿಲ್ ಕುಮಾರಸ್ವಾಮಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯದ ಹಲವಾರು ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸ್ಪರ್ಧೆ ಮಾಡುವಂತೆ ಮುಖಂಡರು ಹಾಗೂ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಅದರೆ, ನಾನು ಎಲ್ಲಾ ಕ್ಷೇತ್ರಗಳಲ್ಲೂ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುವ ಮೂಲಕ ಜೆಡಿಎಸ್ ಗೆಲ್ಲಿಸಿಕೊಂಡು ಬರಬೇಕು ಎಂದು ನಿಖಿಲ್‌ಗೆ ತಿಳಿಸಿದ್ದೇನೆ. ಅಂತಿಮವಾಗಿ ನಿಖಿಲ್ ಕುಮಾರಸ್ವಾಮಿ ಎಲ್ಲಿ ಸ್ಪರ್ಧೆ ಮಾಡಬೇಕು ಎಂಬುದನ್ನು ಪಕ್ಷ ತೀರ್ಮಾನ ಮಾಡಲಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ನಾನು ಪಂಚ ರತ್ನ ಯೋಜನೆಗೆ ಚಾಲನೆ ನೀಡುತ್ತಿದ್ದೇನೆ. ಮುಂದಿನ ಚುನಾವಣೆಯಲ್ಲಿ ನನ್ನ ಗುರಿ 123. ಹಾಗಾಗಿ ಇಡೀ ರಾಜ್ಯವನ್ನು ಸುತ್ತಬೇಕಿದೆ. ನಾನು ಕ್ಷೇತ್ರಕ್ಕೆ ಪ್ರತಿದಿನ ಬರಲು ಸಾಧ್ಯವಿಲ್ಲ. ಹಾಗಾಗಿ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಾರೆ. ಮುಂದಿನ ತಿಂಗಳಿನಿಂದ ಸ್ಥಳೀಯ ಮುಖಂಡರ ಜೊತೆಗೂಡಿ ಕ್ಷೇತ್ರದ ಪ್ರತಿ ಹಳ್ಳಿಗಳಿಗೆ ಭೇಟಿ ಕೊಟ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ ಪಕ್ಷ ಸಂಘಟನೆ ಮಾಡುತ್ತಾರೆ ಎಂದರು.

ಜೆಡಿಎಸ್‌ಗೆ ಅಕ್ಕಪಕ್ಕ ಪ್ರಾದೇಶಿಕ ಪಕ್ಷಗಳ ಬೆಂಬಲ
ರಾಜ್ಯದಲ್ಲಿ ರೈತರ ಪರವಾಗಿ ಜನ ಸಾಮಾನ್ಯರ ಪರವಾಗಿ ಇರುವ ಪ್ರಾದೇಶಿಕ ಪಕ್ಷ ಎಂದರೆ ಅದು ಜೆಡಿಎಸ್. ಈ ಬಾರಿ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದೆ. ಈ ಯೋಜನೆಗಳನ್ನು ರಾಜ್ಯದ ಪ್ರತಿ ಮನೆಗೆ ತಲುಪಿಸುವ ಕೆಲಸವನ್ನು ಪ್ರತಿಯೊಬ್ಬ ಮುಖಂಡರು ಹಾಗೂ ಕಾರ್ಯಕರ್ತರು ಮಾಡಬೇಕಿದೆ. ನಮ್ಮ ಪಕ್ಷದ ಬೆಂಬಲಕ್ಕೆ ಇದೀಗ ನಮ್ಮ ಅಕ್ಕಪಕ್ಕದ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಬೆಂಬಲ ನೀಡುತ್ತಿವೆ. ಈಗಾಗಲೇ ಕೆಲ ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವ ಪ್ರಾದೇಶಿಕ ಪಕ್ಷಗಳ ಮುಖ್ಯಮಂತ್ರಿಗಳು ನಮ್ಮ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಆಯಾ ಪಕ್ಷದ ಮುಖ್ಯಮಂತ್ರಿಗಳು ನಮ್ಮ ರಾಜ್ಯದಲ್ಲೂ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರಲು ಪಣತೊಟ್ಟಿದ್ದಾರೆ. ಅವರು ಕೂಡ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.












Click it and Unblock the Notifications