ಹರೀಸಂದ್ರ: ಎಲ್ಲಾ ಎಂಎಲ್‌ಸಿಗಳಿಗೂ 50 ಕೋಟಿ ಅನುದಾನ ನೀಡಿ, ಅನಿತಾ ಕುಮಾರಸ್ವಾಮಿ
ರಾಮನಗರ, ಅಕ್ಟೋಬರ್, 10: ''ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಾಗಾರಿಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಿಷ್ಟಾಚಾರ ಉಲ್ಲಂಘಿಸಿ ಕಾರ್ಯಕ್ರಮ ಮಾಡಲು ಮುಂದಾಗಿದ್ದ ಬಿಜೆಪಿ ಮುಖಂಡ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್‌ಗೆ ನಮ್ಮ ಕಾರ್ಯಕರ್ತರು ತಕ್ಕ ಉತ್ತರ ನೀಡಿದ್ದಾರೆ'' ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತಿಳಿಸಿದರು. ಹಾಗೆಯೇ ಕ್ಷೇತ್ರದ ಅಭಿವೃದ್ಧಿಗೆ ಸಿ.ಪಿ.ಯೋಗೇಶ್ವರ್‌ಗೆ 50 ಕೋಟಿ ಅನುದಾನ ಹೇಗೆ ನೀಡಿದ್ದೀರೋ, ಹಾಗೆಯೇ ಬೇರೆ ಕ್ಷೇತ್ರಗಳ ಅಭಿವೃದ್ಧಿ ಮಾಡಲು ಎಲ್ಲಾ ಎಂಎಲ್‌ಸಿಗಳಿಗೂ 50 ಕೋಟಿ ಅನುದಾನ ನೀಡಿ ಎಂದು ಆಗ್ರಹಿಸಿದರು.
ತಾಲೂಕಿನ ಹರೀಸಂದ್ರ ಗ್ರಾಮದ ಬಳಿ ಬಿಜೆಪಿ ಮುಖಂಡ ಹಾಗೂ ಕೆ.ಆರ್.ಐ.ಡಿ.ಎಲ್ ನಿಗಮದ ಅಧ್ಯಕ್ಷ ಎಂ.ರುದ್ರೇಶ್ ಒಡೆತನದ ರವಿಸಿಂಗ್ ರಿಟ್ರೀಟ್ ರೆಸಾರ್ಟ್ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾತನಾಡಿದ ಶಾಸಕಿ ಅನಿತಾ ಕುಮಾರಸ್ವಾಮಿ, ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್, ಕ್ಷೇತ್ರದ ಶಾಸಕರ ಅನುಪಸ್ಥಿತಿಯಲ್ಲಿ ಕಾಮಾಗಾರಿಗೆ ಚಾಲನೆ ನೀಡಿದನ್ನು ಖಂಡಿಸಿದರು. ಸರ್ಕಾರದ ಯಾವುದೇ ಅಭಿವೃದ್ಧಿ ಕಾರ್ಯ ಇರಲಿ ಸ್ಥಳೀಯ ಶಾಸಕರ ಗಮನಕ್ಕೆ ತರುವುದು ಶಿಷ್ಟಾಚಾರ. ಇದು 20 ವರ್ಷಗಳ ಕಾಲ ಶಾಸಕರಾಗಿದ್ದವರಿಗೆ ಗೊತ್ತಿಲ್ಲದ ವಿಚಾರ ಅಲ್ಲ. ಆದರೆ ಬೇಕಂತಲೇ ಸ್ಥಳೀಯ ಶಾಸಕರಾದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಡೆಗಣಿಸಿ ಕಾರ್ಯಕ್ರಮವನ್ನು ಮಾಡಲು ಹೊರಟಿದ್ದರು. ಇದಕ್ಕೆ ಚನ್ನಪಟ್ಟಣದ ಜನತೆ ಹಾಗೂ ಜೆಡಿಎಸ್ ಕಾರ್ಯಕರ್ತರರು ಈಗಾಗಲೇ ತಕ್ಕ ಉತ್ತರ ನೀಡಿದ್ದಾರೆ ಎಂದರು.

ಸಿಪಿವೈ ಒಬ್ಬರಿಗೆ ಅನುದಾನ ನೀಡಿದ್ರೆ ಹೇಗೆ?
ಮುಖ್ಯಮಂತ್ರಿಗಳು 50 ಕೋಟಿಗೂ ಹೆಚ್ಚಿನ ಅನುದಾನವನ್ನು ಸಿ.ಪಿ.ಯೋಗೇಶ್ವರ್ ಒಬ್ಬರಿಗೆ ನೀಡಿದ್ದಾರೆ. ರಾಜ್ಯದಲ್ಲಿ ಮತ್ತ್ಯಾರು ಎಂಎಲ್‌ಸಿಗಳು ಇಲ್ವಾ? ಅನುದಾನ ನೀಡಲು ಮತ್ತ್ಯಾವ ಕ್ಷೇತ್ರಗಳು ಇಲ್ವಾ? ಈ ಬಗ್ಗೆ ಬೊಮ್ಮಾಯಿ ನೇತೃತ್ವದ ಸರ್ಕಾರ ಉತ್ತರಿಸಬೇಕು. ಎಲ್ಲಾ ಪಕ್ಷದ ಎಂಎಲ್‌ಸಿಗಳಿಗೂ ಈ ರೀತಿಯ ಅನುದಾನ ನೀಡಿ ಇತರೆ ಕ್ಷೇತ್ರಗಳ ಅಬಿವೃದ್ಧಿ ಕಡೆಗೂ ಸಿಎಂ ಬೊಮ್ಮಾಯಿ ಅವರು ಗಮನ ಹರಸಿಲಿ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಆಗ್ರಹಿಸಿದರು.

ಎಚ್‌ಡಿಕೆಯಿಂದ ಕ್ಷೇತ್ರದ ಅಭಿವೃದ್ಧಿ
ಚನ್ನಪಟ್ಟಣ ಕ್ಷೇತ್ರದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಸಿಪಿವೈ ಮಾಡದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಾಡಿದ್ದರು. ಹೇಗಾದರೂ ತಮ್ಮ ರಾಜಕೀಯ ಅಸ್ತಿತ್ವವನ್ನು ಕ್ಷೇತ್ರದಲ್ಲಿ ಉಳಿಸಿಕೊಳ್ಳಬೇಕು ಎಂದು ಸಿ.ಪಿ.ಯೋಗೇಶ್ವರ್ ಕೀಳು ಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹರಿಹಾಯ್ದರು.

ಜೆಡಿಎಸ್, ಸಿಪಿವೈ ನಡುವೆ ಸಮರ
ಆಗಸ್ಟ್ 1ರಂದು ಚನ್ನಪಟ್ಟಣದಲ್ಲಿ ಶಾಸಕ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್ ನಡುವೆ ಪ್ರಾರಂಭವಾದ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆಯ ಗುದ್ದಾಟ ಇನ್ನೂ ತಣ್ಣಗಾಗಿಲ್ಲ. ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದಾರೆ. ಇದು ಮುಂದೆ ಯಾವ ಹಂತಕ್ಕೆ ಹೋಗುತ್ತದೆಯೋ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ ಎಂದರು.

ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ
ಈಗಾಗಲೇ ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ ನೀತಿ ಸಂಹಿತೆ ಉಲ್ಲಂಘನೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದು ಆಗ್ರಹಿಸಿದ್ದಾರೆ. ಅಲ್ಲದೇ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುತ್ತೇವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ ಎಂದು ಹೇಳಿದರು.











Click it and Unblock the Notifications