'ಕೈ' ವಿರುದ್ಧದ ಸಮರಕ್ಕೆ ದಳಪತಿಗಳ ಸಜ್ಜು: ರಾಜಕೀಯ ಅಸಲಿ ಆಟ ಈಗ ಶುರು?
ರಾಮನಗರ, ಅಕ್ಟೋಬರ್ 09 : ರಾಮನಗರ ಜಿಲ್ಲೆಯಲ್ಲಿ ಮತ್ತೆ ಪ್ರಾಬಲ್ಯ ಮೆರೆಯಲು ದಳಪತಿಗಳು ಶಪಥ ಮಾಡಿದ್ದಾರೆ. ಎಲ್ಲಿ ಕಳೆದುಕೊಂಡಿದ್ದರೋ ಅಲ್ಲಿಯೇ ಹುಡುಕಲು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ.
ಕನಕಪುರ ಹೊರತು ಪಡಿಸಿ ಉಳಿದಂತೆ ಎಲ್ಲ ಕ್ಷೇತ್ರಗಳಲ್ಲೂ ಅಧಿಪತ್ಯ ಸಾಧಿಸಿದ್ದ ಜೆಡಿಎಸ್ ಇವತ್ತು ಚನ್ನಪಟ್ಟಣ ಹೊರತುಪಡಿಸಿ ಎಲ್ಲ ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಒಪ್ಪಿಸಿ ಕೈತೊಳೆದುಕೊಳ್ಳುವಂತಾಗಿದೆ. ಹೀಗಾಗಿಯೇ ರಾಮನಗರ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಮತ್ತೆ ಜೆಡಿಎಸ್ ಅನ್ನು ಮುನ್ನಲೆಗೆ ತರಲು ರಾಜಕೀಯ ತಂತ್ರಗಳು ಆರಂಭವಾಗಿವೆ.

ತಮ್ಮೆಲ್ಲ ರಾಜಕೀಯ ತಂತ್ರಗಳನ್ನು ಬಿಡದಿಯ ಕೇತಗಾನಹಳ್ಳಿಯ ತಮ್ಮ ತೋಟದಲ್ಲಿಯೇ ಕುಳಿತು ಹೆಚ್.ಡಿ.ಕುಮಾರಸ್ವಾಮಿ ಅವರು ಹೆಣೆಯುತ್ತಿದ್ದಾರೆ. ಒಂದು ಕಾಲದ ರಾಜಕೀಯ ಶತ್ರು ಡಿ.ಕೆ.ಶಿವಕುಮಾರ್ ಅವರನ್ನು ಮಣಿಸಬೇಕಾದರೆ ತಮ್ಮ ನಾಯಕರು ಮತ್ತು ಕಾರ್ಯಕರ್ತರನ್ನು ತಳಮಟ್ಟದಿಂದ ಸಂಘಟಿಸಲು ಮತ್ತು ಮುಂದೆ ಬಿಜೆಪಿ ಕಾರ್ಯಕರ್ತರೊಂದಿಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಬಾರದಂತೆ ನಿಗಾವಹಿಸುತ್ತಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಪೈಪೋಟಿಗಿಂತ ಜೆಡಿಎಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಜೋರಾಗಿತ್ತು. ಜೆಡಿಎಸ್‌ನ ಹೆಚ್ಚಿನ ಮತವನ್ನು ಬಿಜೆಪಿ ಕಸಿದಿತ್ತು. ಹೀಗಾಗಿ ಕಾಂಗ್ರೆಸ್‌ಗೆ ಗೆಲುವು ಸುಲಭವಾಯಿತು. ಒಂದು ವೇಳೆ ಜೆಡಿಎಸ್‌ನ ಮತಗಳು ಬಿಜೆಪಿಗೆ ಹೋಗದೆ ಇದ್ದಿದ್ದರೆ ಕಾಂಗ್ರೆಸ್‌ಗೆ ಗೆಲುವು ಕಷ್ಟವಾಗುತ್ತಿತ್ತಲ್ಲದೆ, ಜೆಡಿಎಸ್ ಇನ್ನೊಂದಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ‍್ಯವಾಗುತ್ತಿತ್ತು.
ಜೆಡಿಎಸ್- ಬಿಜೆಪಿ ಸಂಘರ್ಷ ಕಾಂಗ್ರೆಸ್‌ಗೆ ಲಾಭ
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಕೂಡ ಜೆಡಿಎಸ್‌ನ್ನೇ ಟಾರ್ಗೆಟ್ ಮಾಡಿದ್ದವು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದರಿಂದಲೇ ಬಹಳಷ್ಟು ಕಡೆಗಳಲ್ಲಿ ಜೆಡಿಎಸ್‌ಗೆ ಸೋಲಾಯಿತು ಕಾಂಗ್ರೆಸ್‌ಗೆ ಲಾಭವಾಯಿತು. ಒಂದು ವೇಳೆ 2018 ಚುನಾವಣೆಯಂತೆ ಬಿಜೆಪಿ ನಾಯಕರು ಜೆಡಿಎಸ್ ಬಗ್ಗೆ ಮೆಧುಧೋರಣೆ ತೋರಿದ್ದರೆ ಅದರ ಪರಿಣಾಮ ಇನ್ನೇನಾಗುತ್ತಿತ್ತೋ ಗೊತ್ತಿಲ್ಲ. ಆದರೆ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಸಂಘರ್ಷವೇ ಕಾಂಗ್ರೆಸ್ ಗೆಲುವಿಗೆ ಕಾರಣವಾಯಿತು ಎನ್ನುವುದಂತು ಸತ್ಯ.

ಈಗ ಜೆಡಿಎಸ್ ರಾಜ್ಯದಲ್ಲಿ ಉಳಿದುಕೊಳ್ಳಬೇಕಾದರೆ ಅದಕ್ಕೆ ಬಿಜೆಪಿ ಸಾಂಗತ್ಯ ಅನಿವಾರ್ಯವಾಗಿದೆ. ಹಾಗಾಗಿ ಮೈತ್ರಿ ಮಾಡಿಕೊಂಡು ಒಂದಷ್ಟು ಸ್ಥಾನಗಳನ್ನು ಎನ್ ಡಿಎ ಮೈತ್ರಿಕೂಟಕ್ಕೆ ಗೆದ್ದು ಕೊಟ್ಟರೆ ಅದರಿಂದ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಒಳ್ಳೆಯದಾಗಬಹುದು. ಜತೆಗೆ ತಮ್ಮ ರಾಜಕೀಯ ಶತ್ರು ಕೆಪಿಸಿಸಿ ಅಧ‍್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಟ್ಟಿ ಹಾಕಲು ಸಾಧ್ಯವಾಗಬಹುದು ಎಂಬ ಲೆಕ್ಕಾಚಾರ ದಳಪತಿಗಳದ್ದಾಗಿದೆ.
ಬಿಜೆಪಿ ಜೊತೆಗಿನ ಮೈತ್ರಿ ದಳಪತಿಗಳಿಗೆ ಅನಿವಾರ್ಯ
ಒಂದು ವೇಳೆ ಬಿಜೆಪಿಯೊಂದಿಗೆ ಮೈತ್ರಿ ಮಾಡದೆ ತೆಪ್ಪಗಿದ್ದು, ಮುಂದಿನ ವಿಧಾನಸಭಾ ಚುನಾವಣೆ ತನಕ ಕಾದು ನೋಡುವ ತಂತ್ರಕ್ಕೇನಾದರೂ ದಳಪತಿಗಳು ಮುಂದಾದರೆ ಅಷ್ಟರಲ್ಲೇ ಕಾಂಗ್ರೆಸ್ ನಾಯಕರು ಜೆಡಿಎಸ್‌ನ ಒಂದಷ್ಟು ನಾಯಕರನ್ನು ಸೆಳೆದುಕೊಂಡು ಪಕ್ಷವನ್ನು ಇನ್ನಿಲ್ಲದಂತೆ ಮಾಡಿ ಬಿಡಬಹುದೇನೋ ಎಂಬ ಆತಂಕವೂ ನಾಯಕರನ್ನು ಕಾಡುತ್ತಿದೆ. ಇದೆಲ್ಲ ಸಂಕಷ್ಟದಿಂದ ಪಾರಾಗಬೇಕಾದರೆ ಬಿಜೆಪಿ ಜತೆಗೆ ಮೈತ್ರಿ ಇವತ್ತಿನ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ. ಹೀಗಾಗಿಯೇ ತುಂಬಾ ಎಚ್ಚರಿಕೆಯಿಂದ ಮತ್ತು ಎರಡು ಪಕ್ಷಗಳ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಮೈತ್ರಿ ಮಾಡಿಕೊಳ್ಳುವುದೇ ಹೆಚ್ಡಿಕೆ ಅವರ ಉದ್ದೇಶವಾಗಿದೆ.
ಯಾವಾಗ ಜೆಡಿಎಸ್ ಮತ್ತು ಬಿಜೆಪಿ ನಡುವೆ ಮೈತ್ರಿಯಾಗುತ್ತಿದೆ ಎನ್ನುವಾಗಲೇ ಕಾಂಗ್ರೆಸ್ ಬೆಚ್ಚಿ ಬಿದ್ದಿದೆ. ಹೀಗಾಗಿಯೇ ಕುಮಾರಸ್ವಾಮಿ ಅವರ ಮೇಲೆ ಹಿಗ್ಗಾಮುಗ್ಗ ಟೀಕೆಗಳನ್ನು ಮಾಡುತ್ತಿದ್ದಾರೆ. ಆದರೆ ಅದೆಲ್ಲದಕ್ಕೂ ಪ್ರತ್ಯುತ್ತರ ನೀಡುತ್ತಲೇ ಕುಮಾರಸ್ವಾಮಿ ಅವರು ರಾಜಕೀಯ ಪಟ್ಟುಗಳನ್ನು ಹಾಕುತ್ತಿದ್ದಾರೆ. ಈಗಾಗಲೇ ತಮ್ಮ ತೋಟದ ಮನೆಯಲ್ಲಿ ಪಕ್ಷದ ಮುಖಂಡರ ಸಭೆ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹ ಮಾಡಿದ್ದಾರೆ. ಈ ವೇಳೆ ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಪಕ್ಷದ ವರಿಷ್ಠರು ಕೈಗೊಂಡಿರುವ ನಿರ್ಧಾರಕ್ಕೆ ನಮ್ಮ ಸಂಪೂರ್ಣ ಸಹಮತವಿದೆ ಎಂದು ಮುಖಂಡರು ಹೇಳಿರುವುದು ಮುಂದಿನ ನಡೆಗೆ ಧೈರ್ಯ ಬಂದಂತಾಗಿದೆ.

ಕಾಂಗ್ರೆಸ್ ವಂಚನೆ ತೆರೆದಿಟ್ಟ ದಳಪತಿಗಳು
ಈಗಿನ ರಾಜಕೀಯ ಬೆಳವಣಿಗೆ ಹಾಗೂ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹದ ವೇಳೆ ವರಿಷ್ಠರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುವುದಾಗಿ ಮುಖಂಡರು ಘೋಷಿಸಿದ್ದಾರೆ ಎನ್ನಲಾಗಿದೆ. ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎ.ಮಂಜುನಾಥ್, ಹಿರಿಯ ಮುಖಂಡ ಸುಬ್ಬಾಶಾಸ್ತ್ರಿ ಅವರುಗಳ ಸಮ್ಮುಖದಲ್ಲಿ ನಡೆದ ಚರ್ಚೆಯಲ್ಲಿ ಮಾಗಡಿ, ಚನ್ನಪಟ್ಟಣ, ಕನಕಪುರ ಹಾಗೂ ರಾಮನಗರ ವಿಧಾನಸಭೆ ಕ್ಷೇತ್ರಗಳ ನೂರಾರು ಮುಖಂಡರು ಭಾಗಿಯಾಗಿ ಒಗ್ಗಟ್ಟಿನ ಪ್ರದರ್ಶನ ಮಾಡಿರುವುದು ಜೆಡಿಎಸ್ ನಾಯಕರ ಮುಂದಿನ ನಡೆಗೆ ಸಹಕಾರಿಯಾಗಿದೆ.
ಸಭೆಯಲ್ಲಿ ಜೆಡಿಎಸ್ ಇಂತಹ ಹೀನಾಯ ಸ್ಥಿತಿಗೆ ಬರಲು ಕಾಂಗ್ರೆಸ್ ಕಾರಣ ಎಂಬುದನ್ನು ಆ ಪಕ್ಷದ ನಾಯಕರು ಮಾಡಿದ ವಂಚನೆ, ದ್ರೋಹಗಳನ್ನು ಸಭೆಯಲ್ಲಿ ತೆರದಿಡುವುದರೊಂದಿಗೆ ಬಿಜೆಪಿ ಜತೆಗೆ ಮೈತ್ರಿ ಏಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆಯೂ ಮುಖಂಡರಲ್ಲಿ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ದಳಪತಿಗಳು ಮಾಡಿದ್ದಾರೆ. ಕಾಂಗ್ರೆಸ್ ಮೊದಲಿನಿಂದಲೂ ಜೆಡಿಎಸ್ ಪಕ್ಷದ ಬೆನ್ನಿಗೆ ಚೂರಿ ಹಾಕುತ್ತಲೇ ಬಂದಿದೆ. ಒಂದು ಕಡೆ ಜಾತ್ಯತೀತ ತತ್ವಗಳ ಬಗ್ಗೆ ಮಾತನಾಡುವ ಆ ಪಕ್ಷದ ನಾಯಕರು ಇನ್ನೊಂದೆಡೆ ಆ ತತ್ವಗಳನ್ನು ಮೂಲೆಗೆ ಎಸೆದಿದ್ದಾರೆ.
ಮುಖಂಡರ ಮುಂದೆ ಅಳಲು ತೋಡಿಕೊಂಡ ಕುಮಾರಸ್ವಾಮಿ
ಜೆಡಿಎಸ್ ಬಿಜೆಪಿ-ಮೈತ್ರಿ ಬಗ್ಗೆ ಕಾಂಗ್ರೆಸ್ಸಿಗರು ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಜೆಡಿಎಸ್ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡುತ್ತಿದೆ ಎಂದು ಹೊಸ ಸುಳ್ಳು ಹಬ್ಬಿಸುತ್ತಿದ್ದಾರೆ. ಈ ಸಮುದಾಯ ಸಂಕಷ್ಟಕ್ಕೆ ಸಿಲುಕಿದಾಗ ಕುಮಾರಸ್ವಾಮಿ ಒಬ್ಬರೇ ದನಿ ಎತ್ತಿದರು. ಅಲ್ಪಸಂಖ್ಯಾತರನ್ನು ಓಲೈಸುವ ಕಾಂಗ್ರೆಸ್ ನವರಿಗೆ ಕುಮಾರಸ್ವಾಮಿ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂಬುದನ್ನು ಜೆಡಿಎಸ್ ನಾಯಕರು ಸಭೆಯಲ್ಲಿ ಹೇಳಿದ್ದಾರೆ. ಇದೇ ವೇಳೆ ಜೆಡಿಎಸ್ ಮುಖಂಡರಿಗೆ ಆಮಿಷ ಒಡ್ಡುವ ಮೂಲಕ ಹೀನ ಕೆಲಸ ನಡೆಯುತ್ತಿದೆ ಇದರ ಬಗ್ಗೆ ಎಚ್ಚರವಾಗಿರುವಂತೆ ಹೆಚ್ಡಿಕೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ ಪಬ್ಲಿಕ್‌ನಲ್ಲಿ ನನ್ನ ಕೈಯನ್ನು ಮೇಲೆತ್ತಿ ಜೋಡೆತ್ತು ಎಂದು ಹೇಳಿದ ನಯವಂಚಕರ ಮಾತುಗಳನ್ನು ನಂಬಿ ಮೋಸ ಹೋದೆ. ಅನಂತರ ನನ್ನನ್ನು ನಡು ರಸ್ತೆಯಲ್ಲಿ ಕೈ ಬಿಟ್ಟು ಎತ್ತು-ಗಾಡಿಯೊಂದಿಗೆ ಪಲಾಯನ ಮಾಡಿದರು ಎಂದು ಪಕ್ಷದ ಮುಖಂಡರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಜತೆಗೆ ಕಾಂಗ್ರೆಸ್ಸಿಗರನ್ನು ನಂಬಿ ನಾನು ಕುತ್ತಿಗೆ ಕೊಯ್ದುಕೊಂಡಿದ್ದೇನೆ, ನಿಮ್ಮ ಕುತ್ತಿಗೆಯನ್ನು ಕೊಯ್ದಿದ್ದೇನೆ. ಅವರಿಂದ ನನಗೆ ಮತ್ತು ನಿಮಗೆ ಅನ್ಯಾಯ ಆಗಿದೆ ವಿನಃ ಕನಕಪುರ ಜನರಿಗೆ ನನ್ನಿಂದ ಎಳ್ಳಷ್ಟೂ ಅನ್ಯಾಯವಾಗಿಲ್ಲ. ಇದನ್ನು ಸರಿ ಮಾಡುವ ಹೊಣೆ ನನ್ನದು ಎಂದು ಪಕ್ಷದ ಮುಖಂಡರಿಗೆ ಧೈರ್ಯ ತುಂಬಿದ್ದಾರೆ.
ರಾಜ್ಯದಲ್ಲಿ ಹೊಸ ರಾಜಕೀಯ ಆಟ ಶುರು!
ಈಗಿನ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ದಳಪತಿಗಳು ಬಿಜೆಪಿಯೊಂದಿಗೆ ಸೇರಿ ಹೊಸ ಆಟ ಆರಂಭಿಸಿದ್ದಾರೆ ಎನ್ನುವುದು ಮನದಟ್ಟಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕೆಲಸ ಮಾಡಿ ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾದರೆ ಆ ನಂತರ ರಾಜ್ಯದಲ್ಲಿ ಹೊಸ ರಾಜಕೀಯ ಆಟ ನಡೆಯುವುದಂತು ಖಚಿತ. ದಳಪತಿಗಳ ಬತ್ತಳಿಕೆಯಲ್ಲಿ ಏನೇನು ಅಸ್ತ್ರವಿದೆಯೋ? ಅದನ್ನು ಬಿಜೆಪಿ ಹೇಗೆ ಬಳಸಿಕೊಂಡು ಕಾಂಗ್ರೆಸ್ ಮೇಲೆ ಪ್ರಯೋಗಿಸುತ್ತದೆಯೋ? ಸದ್ಯಕ್ಕೆ ಯಾವುದೂ ಗೊತ್ತಾಗುತ್ತಿಲ್ಲ. ಆದರೆ ಅದು ಗೊತ್ತಾಗಬೇಕಾದರೆ ಲೋಕಸಭಾ ಚುನಾವಣೆ ವರೆಗೆ ಕಾಯಲೇ ಬೇಕಾಗಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications