ಪರಮೇಶ್ವರ್ ಆಪ್ತ ರಮೇಶ್ ಮನೆಯಲ್ಲಿ ಮಡುಗಟ್ಟಿದ ದುಃಖ; ನಾಳೆ ಅಂತ್ಯಕ್ರಿಯೆ
ರಾಮನಗರ, ಅಕ್ಟೋಬರ್ 12: ಕಾಂಗ್ರೆಸ್ ಮುಖಂಡ ಜಿ ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಇಡೀ ಗ್ರಾಮಕ್ಕೆ ಆಘಾತ ತಂದಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯ ಬಳಿಕ ಆಘಾತಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ರಮೇಶ್ ಹುಟ್ಟೂರು ರಾಮನಗರ ತಾಲ್ಲೂಕಿನ ಮೇಳೆಹಳ್ಳಿ ಗ್ರಾಮದಲ್ಲಿ ದುಃಖ ಮಡುಗಟ್ಟಿದೆ.

ರಮೇಶ್ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಅವರ ತಂದೆ ಸಂಪಂಗಯ್ಯ ಅಸ್ವಸ್ಥರಾಗಿದ್ದರು. ಈ ಸಾವಿನ ಆಘಾತದಿಂದಾಗಿ ಇಡೀ ಕುಟುಂಬ ಶೋಕದಲ್ಲಿ ಮುಳುಗಿದೆ. ಮೃತ ರಮೇಶ್ ಗೆ ಪತ್ನಿ, ಇಬ್ಬರು ಮಕ್ಕಳು, ತಂದೆ ತಾಯಿ ಸೇರಿದಂತೆ ಇಬ್ಬರು ಸಹೋದರಿಯರು, ಒಬ್ಬ ಸಹೋದರ ಇದ್ದರು.
ಸುಮಾರು 15 ವರ್ಷಗಳಿಂದ ರಮೇಶ್ ಬೆಂಗಳೂರಿನಲ್ಲಿ ನೆಲೆಸಿದ್ದರು. ಮೇಳೆಹಳ್ಳಿ ಗ್ರಾಮದಲ್ಲಿ ರಮೇಶ್ ಅವರ ತಂದೆ ಸಂಪಂಗಯ್ಯ ಹಾಗೂ ತಾಯಿ ಸಾವಿತ್ರಮ್ಮ ವಾಸವಾಗಿದ್ದರು. ತಂದೆ ತಾಯಿಯನ್ನು ನೋಡಲು ವಾರಕ್ಕೊಮ್ಮೆ ರಮೇಶ್ ಗ್ರಾಮಕ್ಕೆ ಬರುತ್ತಿದ್ದರು.
ಆತ್ಮಹತ್ಯೆಗೆ ಶರಣಾದ ರಮೇಶ್ ಮೃತದೇಹವನ್ನು ಸಂಜೆ ವೇಳೆಗೆ ಹುಟ್ಟೂರು ಮೇಳೆಹಳ್ಳಿ ಗ್ರಾಮಕ್ಕೆ ತರಲಾಗುವುದು. ನಾಳೆ (ಭಾನುವಾರ) ಅಂತ್ಯಕ್ರಿಯೆ ನಡೆಯಲಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಶರಣಾದ ರಮೇಶ್ ಬಾಲ್ಯ ಸ್ನೇಹಿತ ಶ್ರೀಧರ ಮಾತನಾಡಿ, "ರಮೇಶ್ ಬೆಂಗಳೂರಿನಲ್ಲಿದ್ದ. ವಾರಕ್ಕೊಮ್ಮೆ ಗ್ರಾಮಕ್ಕೆ ಬಂದು ಹೋಗುತ್ತಿದ್ದ. ತುಂಬಾ ಒಳ್ಳೆಯ ಹುಡುಗ, ಮರ್ಯಾದೆಗೆ ಅಂಜುವವನು. ಬಡತನದಿಂದಲೇ ಬೆಳೆದ ರಮೇಶ್ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಹೀಗೆ ಮಾಡಿಕೊಳ್ಳಬಾರದಿತ್ತು, ಎಲ್ಲವನ್ನೂ ಎದುರಿಸಬೇಕಿತ್ತು" ಎಂದು ಬೇಸರದಿಂದ ನುಡಿದರು.












Click it and Unblock the Notifications