ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆ: ಮಾಜಿ ಸಿಎಂ ಎಚ್‌ಡಿಕೆ ವ್ಯಂಗ್ಯ
ರಾಮನಗರ, ಆಗಸ್ಟ್ 16: "ಎರಡು ಪಕ್ಷದ ವರ್ಚಸ್ಸು ನಶಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಕೊರೊನಾ ಸೋಂಕಿನ ನಡುವೆಯೂ ರಾಜ್ಯ ಪ್ರವಾಸ ಮಾಡುತ್ತಿವೆ," ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿ ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆ ವಿಚಾರವಾಗಿ ರಾಮನಗರದಲ್ಲಿ ಮಾತನಾಡಿದ ಅವರು, "ಕೇಂದ್ರದ ಸಚಿವರು ಕೊರೊನಾ ಭೀತಿಯ ನಡುವೆಯೂ 280 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಪ್ರವಾಸ ಮಾಡುವುದರಿಂದ ಏನ್ ಉಪಯೋಗ ಬರುವುದಿಲ್ಲ. ಜನರ ಕಷ್ಟಗಳನ್ನು ನೋಡಿ ಸರಕಾರದಿಂದ ಆರ್ಥಿಕ ನೆರವು ಕೊಡಿಸಬೇಕು," ಎಂದು ಅಭಿಪ್ರಾಯಪಟ್ಟರು.
"ಕೊರೊನಾ 3ನೇ ಅಲೆಯನ್ನು ಯಾರೂ ಕೂಡ ಲಘುವಾಗಿ ಪರಿಗಣಿಸಬೇಡಿ, ಈಗಾಗಲೇ ಎರಡು ಕೊರೊನಾ ಅಲೆಗಳಿಂದ ಪೆಟ್ಟು ತಿಂದಿದ್ದೇವೆ," ಎಂದು ಹೇಳಿದರು.

ಜಾತಿ ಜನಗಣತಿ ವರದಿಯನ್ನು ಕುಮಾರಸ್ವಾಮಿ ಸ್ವೀಕಾರ ಮಾಡಲಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಎಚ್‌ಡಿಕೆ, "ನನ್ನ ಹತ್ತಿರ ಯಾರೂ ವರದಿಯನ್ನು ಕೊಟ್ಟಿಲ್ಲ. ನಮ್ಮ ಸಮ್ಮಿಶ್ರ ಸರಕಾರದಲ್ಲಿ ಸಿದ್ದರಾಮಯ್ಯನವರೇ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಜನಗಣತಿ ವರದಿ ಬಗ್ಗೆ ನನ್ನ ಜೊತೆಗೆ ಚರ್ಚೆ ಮಾಡಿದಾರಾ? ಇಲ್ಲ. ನನ್ನ ಬಳಿ ವರದಿ ಇದೆ ತಗೆದುಕೊಳ್ಳಿ ಅಂತಾ ಬಂದಿದ್ದಾರಾ? ಇದೀಗ ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ," ಎಂದು ವಾಗ್ದಾಳಿ ನಡೆಸಿದರು,.
"ಈಗ ಅಹಿಂದ ಹೆಸರಿನಲ್ಲಿ ಏನೋ ಮಾಡಲು ಹೊರಟ್ಟಿದ್ದರಲ್ಲಾ, 5 ವರ್ಷಗಳಲ್ಲಿ ಏನ್ ಮಾಡಿದ್ದಾರೆ ಅಂತಾ ನನಗೆ ಗೊತ್ತಿದೆ. ಮುಂದೆ ಚರ್ಚೆ ಮಾಡೋಣ," ಎಂದು ವಿಪಕ್ಷ ನಾಯಕ ತಿರುಗೇಟು ನೀಡಿದರು.
ಇನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹಾಗೂ ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ, "ಯಾರ ಬಗ್ಗೆ ಇದೀಗ ಮಾತನಾಡುತ್ತಿದ್ದಾರೆ, ಅವರ ಕಾಲದಲ್ಲಿ ನಾವ್ಯಾರು ಹುಟ್ಟಿಯೇ ಇರಲಿಲ್ಲ. ಯಾರ ಹೆಸರುಗಳ ಬಗ್ಗೆ ಯಾರು ಚರ್ಚೆ ಮಾಡುತ್ತಿದ್ದಾರೋ ಅವರುಗಳು ಹುಟ್ಟಿಯೇ ಇರಲಿಲ್ಲ. ಅಂತವರ ಬಗ್ಗೆ ಇದೀಗ ಚರ್ಚೆ ಮಾಡುವುದು ಅವರ ಸಣ್ಣತನ," ಎಂದು ಕಿಡಿಕಾರಿದರು.

"ಸಾರ್ವಜನಿಕ ಜೀವನದಲ್ಲಿ ಯಾರ ಬಗ್ಗೆ ಆದರೂ ಮಾತನಾಡುವಾಗ ಗೌರವಯುತವಾಗಿ ಮಾತನಾಡಬೇಕು. ಈ ರೀತಿಯ ಕೀಳುಮಟ್ಟದ ಭಾಷೆಗಳನ್ನು ಬಳಸಬೇಡಿ," ಎಂದು ರಾಮನಗರದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿಳಿ ಮಾತು ಹೇಳಿದರು.
ಕೇಂದ್ರ ಸಚಿವರಿಂದ ಜನಾಶೀರ್ವಾದ ಯಾತ್ರೆ
ರಾಜ್ಯದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ರಾಜ್ಯದಿಂದ ಆಯ್ಕೆಯಾದ ಕೇಂದ್ರ ಸರ್ಕಾರದ ನೂತನ ಸಚಿವರ ಜನಾಶೀರ್ವಾದ ಯಾತ್ರೆ ನಡೆಯಲಿದೆ. ನೂತನ ಸಚಿವರಾದ ರಾಜೀವ್ ಚಂದ್ರಶೇಖರ್, ಭಗವಂತ ಖೂಬಾ, ಎ. ನಾರಾಯಣಸ್ವಾಮಿ ಮತ್ತು ಶೋಭಾ ಕರಂದ್ಲಾಜೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ.
ಸರ್ಕಾರದ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೂಚಿಸಿದ್ದಾರೆ. ಈ ಹಿನ್ನೆಲೆ ಇಂದಿನಿಂದ ನಾಲ್ಕು ದಿನ ಯಾತ್ರೆ ಕೈಗೊಂಡು ಸಭೆ, ಸಂವಾದ ನಡೆಸಲಾಗುತ್ತದೆ.
ಹಳೇ ಮೈಸೂರು ಭಾಗದಲ್ಲಿ ಸಚಿವ ನಾರಾಯಣಸ್ವಾಮಿ, ಬೆಂಗಳೂರು ಭಾಗದಲ್ಲಿ ಸಚಿವ ರಾಜೀವ್ ಚಂದ್ರಶೇಖರ್, ಕರಾವಳಿ ಭಾಗದಲ್ಲಿ ಸಚಿವೆ ಶೋಭಾ ಕರಂದ್ಲಾಜೆ, ಕಲಬುರಗಿ ವಿಭಾಗದಲ್ಲಿ ಸಚಿವ ಭಗವಂತ ಖೂಬಾ ಯಾತ್ರೆ ಕೈಗೊಳ್ಳಲಿದ್ದಾರೆ.

ಭತ್ತ ನಾಟಿ ಮಾಡಿದ ಶೋಭಾ ಕರಂದ್ಲಾಜೆ
ಮಂಡ್ಯ ತಾಲೂಕಿನ ಹೊನಗನಹಳ್ಳಿಯಲ್ಲಿ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಗದ್ದೆಗಿಳಿದು ಭತ್ತ ನಾಟಿ ಮಾಡಿದರು. ರೈತ ಮಹಿಳೆಯರ ಜೊತೆ ನಾಟಿ ಮಾಡಿದಾಗ ಬಿಜೆಪಿ ಕಾರ್ಯಕರ್ತರು ಜೈಕಾರ ಕೂಗಿದರು.
Recommended Video
ಇದೇ ವೇಳೆ ಸಚಿವ ಕೆ.ಸಿ. ನಾರಾಯಣಗೌಡ ನಾಟಿ ಯಂತ್ರ ಚಲಾಯಿಸಿದರು. ನಾಟಿ ಯಂತ್ರ ಚಲಾಯಿಸುವ ವೇಳೆ ಯಂತ್ರದ ಮೇಲೆ ನಿಂತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಾಥ್ ನೀಡಿದರು.












Click it and Unblock the Notifications