ರಾಮನಗರ; ಮನೆಗಳಿಗೆ ನದಿ ನೀರು ನೀಡಲು 825 ಕೋಟಿ ಯೋಜನೆ
ರಾಮನಗರ, ಫೆಬ್ರವರಿ 09; ಜಿಲ್ಲೆಯ ರಾಮನಗರ ತಾಲ್ಲೂಕಿನ 344 ಮತ್ತು ಮಾಗಡಿ ತಾಲ್ಲೂಕಿನ 697 ಜನವಸತಿ ಪ್ರದೇಶಗಳ ಒಟ್ಟು 87,099 ಮನೆಗಳಿಗೆ ನದಿ ಮೂಲದ ಶುದ್ಧ ಕುಡಿಯುವ ನೀರು ಒದಗಿಸುವ ಒಟ್ಟು 825 ಕೋಟಿ ರೂ. ವೆಚ್ಚದ ಎರಡು ಪ್ರಮುಖ ಯೋಜನೆಗಳಿಗೆ ಇಂದು ನಡೆದ ಸಚಿವ ಸಂಪುಟ ಸಭೆಯುಲ್ಲಿ ಅನುಮೋದನೆ ಸಿಕ್ಕಿದೆ.
ಜಲಜೀವನ್ ಮಿಷನ್ ಯೋಜನೆಯಿಂದ ಎರಡು ತಾಲ್ಲೂಕುಗಳ 3,65,000 ಜನರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಸಿಗಲಿದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಮೊದಲನೆಯದಾಗಿ 670 ಕೋಟಿ ರೂ. ವೆಚ್ಚದ ಮಂಚನಬೆಲೆ ಜಲಾಶಯದಿಂದ ನೀರೊದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಹಾಗೂ ಎರಡನೆಯದಾಗಿ ವೈ. ಜಿ. ಗುಡ್ಡ ಜಲಾಶಯದಿಂದ ನೀರೊದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.

ಮಂಚನಬೆಲೆ ಯೋಜನೆಯಡಿಗೆ ಮಾಗಡಿ ತಾಲ್ಲೂಕಿನ 625 ಜನವಸತಿಗಳು ಮತ್ತು ರಾಮನಗರ ತಾಲ್ಲೂಕಿನ 250 ಜನವಸತಿಗಳು ಒಳಪಡುತ್ತವೆ. ಮತ್ತೊಂದು ಯೋಜನೆಯಾದ ವೈ. ಜಿ. ಗುಡ್ಡ ಯೋಜನೆಯು 155 ಕೋಟಿ ರೂ. ವೆಚ್ಚದಾಗಿದ್ದು, ಈ ವ್ಯಾಪ್ತಿಗೆ ರಾಮನಗರ ತಾಲ್ಲೂಕಿನ 94 ಜನವಸತಿಗಳು ಮತ್ತು ಮಾಗಡಿ ತಾಲ್ಲೂಕಿನ 72 ಜನವಸತಿಗಳು ಸೇರುತ್ತವೆ.
ಈ ಯೋಜನೆಗಳಿಂದ ರಾಮನಗರ ತಾಲ್ಲೂಕಿನ 39,816 ಮನೆಗಳಿಗೆ ಹಾಗೂ ಮಾಗಡಿ ತಾಲ್ಲೂಕಿನ 47,283 ಮನೆಗಳಿಗೆ ಉಪಯೋಗವಾಗುತ್ತದೆ. ಮಂಚನಬೆಲೆ ಯೋಜನೆಯನ್ನು 23 ತಿಂಗಳೊಳಗೆ ಹಾಗೂ ವೈ. ಜಿ. ಗುಡ್ಡ ಯೋಜನೆಯನ್ನು 15 ತಿಂಗಳೊಳಗೆ ಪೂರ್ತಿಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಮುಂದಿನ 30 ವರ್ಷಗಳ ಅಂದರೆ 2053ರ ವರೆಗಿನ ಜನಸಂಖ್ಯೆಯನ್ನು ಲೆಕ್ಕಾಚಾರ ಹಾಕಿ ಅದಕ್ಕೆ ತಕ್ಕಂತೆ ಯೋಜನೆ ರೂಪಿಸಲಾಗಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ 255 ಜನವಸತಿಗಳಿಗೆ ರಾವತ್ನಹಳ್ಳ ಜಲಾಶಯದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಪಿ. ಎಸ್. ಆರ್. ತಯಾರಿ ಹಂತದಲ್ಲಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಕನಕಪುರ ತಾಲೂಕಿನ ಹಲವು ಜನವಸತಿಗಳನ್ನು ಈ ಯೋಜನೆಗೆ ಸೇರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಶ್ವತ್ಥನಾರಾಯಣ ಹೇಳಿದರು.
ಜಿಲ್ಲೆಗೆ ಎರಡನೇ ಸ್ಥಾನ; "ಕರ್ನಾಟಕ ರಾಜ್ಯದಲ್ಲಿ ಸದ್ಯಕ್ಕೆ ಗದಗ ಜಿಲ್ಲೆಯಲ್ಲಿ ಮಾತ್ರ ಶೇ 100ರಷ್ಟು ಮನೆಗಳಿಗೆ ನಲ್ಲಿ ಸಂಪರ್ಕವಿದ್ದು, ರಾಮನಗರ ಜಿಲ್ಲೆಯು ಎರಡನೇ ಸ್ಥಾನದಲ್ಲಿದೆ. ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿರುವ ಪ್ರತಿಯೊಂದು ಮನೆಗೂ ನದಿ ಮೂಲದ ಕುಡಿಯುವ ನೀರು ಒದಗಿಸಲಾಗುವುದು ಎಂದು ನಮ್ಮ ಸರ್ಕಾರ ಮಾತು ಕೊಟ್ಟಿತ್ತು" ಎಂದು ಸಚಿವರು ತಿಳಿಸಿದರು.
"ಆ ವಾಗ್ದಾನವನ್ನು ನಾವು ಉಳಿಸಿಕೊಂಡಿದ್ದು, ಇದಕ್ಕಾಗಿ ವಿಶೇಷವಾಗಿ ಮುಖ್ಯಮಂತ್ರಿಯವರನ್ನು ಜಿಲ್ಲೆಯ ಜನರ ಪರವಾಗಿ ಅಭಿನಂದಿಸುತ್ತೇನೆ. ಈಗ ಹೊಸದಾಗಿ ಅನುಮೋದನೆ ಸಿಕ್ಕಿರುವ ಯೋಜನೆಗಳಿಗೆ ತಕ್ಷಣವೇ ಕಾಮಗಾರಿ ಕೈಗೊಳ್ಳುವ ದಿಸೆಯಲ್ಲಿ ಕ್ರಮ ವಹಿಸಲಾಗುವುದು" ಎಂದು ಸಚಿವರು ವಿವರಿಸಿದರು.
"ಈ ಯೋಜನೆಗಳು ಡಿಬಿಒಟಿ ಆಧಾರದಲ್ಲಿ ಜಾರಿಗೊಳ್ಳಲಿವೆ. ಮಂಚನಬೆಲೆ ಯೋಜನೆಯಡಿ ಅದೇ ಜಲಾಶಯದಲ್ಲಿ ಅಗತ್ಯ ಜಾಕ್ವೆಲ್ ಅನ್ನು ಸ್ಥಾಪಿಸುವ ಮೂಲಕ ಅಂತರ್ಜಲದ ಮಿತಿ ಮೀರಿದ ಬಳಕೆಯನ್ನು ನಿಯಂತ್ರಿಸಲಾಗುವುದು. ಯೋಜನೆಯ ಅನುಷ್ಠಾನಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ನೋಡಲ್ ಏಜೆನ್ಸಿಯಾಗಿರಲಿದೆ" ಎಂದರು.












Click it and Unblock the Notifications