ಅನಿತಾ ಕುಮಾರಸ್ವಾಮಿ ಪರ ಉಪಚುನಾವಣೆ ಅಖಾಡಕ್ಕಿಳಿದ ಡಿ.ಕೆ.ಸುರೇಶ್
ರಾಮನಗರ, ಅಕ್ಟೋಬರ್ 27: ಉಪಚುನಾವಣೆಗೆ ಮತದಾನಕ್ಕೆ ಇನ್ನು ಉಳಿದಿರುವುದು ಕೇವಲ 10 ದಿನ ಐದೂ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಬಿರುಸು ಪಡೆದುಕೊಂಡಿದೆ. ರಾಮನಗರದಲ್ಲಂತೂ ಜೆಡಿಎಸ್ ಹವಾ ಜೋರಾಗಿಯೇ ಎದ್ದಿದೆ.
ಎಚ್‌ಡಿ.ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ರಾಮನಗರ ಕ್ಷೇತ್ರಕ್ಕೆ ಮೈತ್ರಿ ಸರ್ಕಾರದ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಕುಮಾರಸ್ವಾಮಿ ಅವರ ಮಡದಿ ಅನಿತಾ ಕುಮಾರಸ್ವಾಮಿ ಅವರು ಕಣಕ್ಕಿಳಿದಿದ್ದಾರೆ.
ಅನಿತಾ ಕುಮಾರಸ್ವಾಮಿ ಅವರ ಪ್ರಚಾರ ಕೂಡಾ ಜೋರಾಗಿ ನಡೆಯುತ್ತಿದ್ದು. ಇಂದು ಬಹಿರಂಗ ಪ್ರಚಾರಕ್ಕೆ ಅನಿತಾ ಕುಮಾರಸ್ವಾಮಿ ಅವರ ಪರ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅಖಾಡಕ್ಕೆ ಇಳಿದಿದ್ದರು.
ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಒಮ್ಮತದ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರಾಗಿರುವ ಕಾರಣ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರು ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಅವರ ಪರ ಮತಯಾಚನೆ ಮಾಡಿದರು.

ಕ್ಷೇತ್ರ ಅಭಿವೃದ್ಧಿಗೆ ಅನಿತಾ ಅವರನ್ನು ಬೆಂಬಲಿಸಬೇಕಿದೆ
ಅನಿತಾ ಕುಮಾರಸ್ವಾಮಿ ಅವರ ಪರ ಮತಯಾಚನೆ ಮಾಡಿದ ಡಿ.ಕೆ.ಸುರೇಶ್ ಅವರು, ನಾವು ರಾಮನಗರದ ಅಭಿವೃದ್ಧಿಗಾಗಿ ತತ್ವ ಸಿದ್ಧಾಂತಗಳ ಜೊತೆಗೆ ಹೋರಾಡಿದ್ದೇವೆ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ರಾಮನಗರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಆ ಕಾರ್ಯಗಳು ಮುಂದುವರೆಯಲು ಅನಿತಾ ಕುಮಾರಸ್ವಾಮಿ ಅವರನ್ನು ಬೆಂಬಲಿಸಬೇಕಿದೆ ಎಂದು ಅವರು ಹೇಳಿದರು.

ಡಿಕೆ ಶಿವಕುಮಾರ ಗೈರಿನಲ್ಲಿ ಸುರೇಶ್‌ಗೆ ಜವಾಬ್ದಾರಿ
ಡಿ.ಕೆ.ಶಿವಕುಮಾರ್ ಅವರು ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರ ಪರ ಪ್ರಚಾರ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಶಿವಕುಮಾರ್ ಅವರು ಬಳ್ಳಾರಿ ಚುನಾವಣೆ ಉಸ್ತುವಾರಿ ವಹಿಸಿದ್ದು ಅಲ್ಲಿ ಕಾರ್ಯೋನ್ಮುಖರಾಗಿರುವ ಕಾರಣ ಅವರ ಬದಲಿಗೆ ಡಿ.ಕೆ.ಸುರೇಶ್ ಅವರು ಕಾಂಗ್ರೆಸ್ ವತಿಯಿಂದ ಪ್ರಚಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಸಹ ಬರುವ ಸಾಧ್ಯತೆ
ರಾಮನಗರದಲ್ಲಿ ಪ್ರಚಾರಕ್ಕೆ ಸಿದ್ದರಾಮಯ್ಯ ಅವರು ಬರುವುದಿಲ್ಲ ಎಂಬ ಸುದ್ದಿ ಹರಡಿತ್ತು. ಆದರೆ ಇತ್ತೀಚೆಗೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರೇ ಸ್ವತಃ ಅವಶ್ಯಕತೆ ಇದ್ದರೆ ರಾಮನಗರಕ್ಕೂ ಪ್ರಚಾರಕ್ಕೆ ಬರುವುದಾಗಿ ಹೇಳಿದರು. ಹಾಗಾಗಿ ಅವರೂ ಸಹ ರಾಮನಗರಕ್ಕೆ ಪ್ರಚಾರಕ್ಕೆ ಬರುವ ಸಾಧ್ಯತೆ ಇದೆ.

ಕುಮಾರಸ್ವಾಮಿ ಪ್ರಚಾರ
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪತ್ನಿ ಅನಿತಾ ಕುಮಾರಸ್ವಾಮಿ ಅವರ ಪರ ರಾಮನಗರದಲ್ಲಿ ಪ್ರಚಾರ ಮಾಡಲಿದ್ದಾರೆ. ಪ್ರಸ್ತುತ ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವ ಕುಮಾರಸ್ವಾಮಿ ನಾಳೆ ಅಥವಾ ನಾಡಿದ್ದು ರಾಮನಗರದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಬಿಜೆಪಿ-ಜೆಡಿಎಸ್ ನೇರ ಹಣಾಹಣಿ
ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಅವರು ಕಣಕ್ಕಿಳಿದಿದ್ದರೆ ಎದುರಾಳಿಯಾಗಿ ಬಿಜೆಪಿಯಿಂದ ಚಂದ್ರಶೇಖರ್ ಅವರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಬಿಜೆಪಿ-ಜೆಡಿಎಸ್‌ಗೆ ಇಲ್ಲಿ ನೇರ ಹಣಾಹಣಿ ಇದ್ದು, ಮೇಲ್ನೋಟಕ್ಕೆ ಅನಿತಾ ಕುಮಾರಸ್ವಾಮಿ ಅವರು ಬಹು ಅಂತರದಿಂದ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ.












Click it and Unblock the Notifications