ಸಿಪಿವೈ-ಡಿಕೆಶಿ ಬೆಂಬಲಿಗರಿಂದ ಶುರುವಾಯ್ತು "ಬ್ಯಾನರ್" ವಾರ್
ಚನ್ನಪಟ್ಟಣ, ಫೆಬ್ರವರಿ 09: ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಗೆ ಈ ಬಾರಿಯ ಬಿಜೆಪಿ ಸಚಿವ ಸಂಪುಟದಲ್ಲಿ ಸ್ಥಾನ ಖಚಿತ ಎಂದು ಸಚಿವ ಸಂಪುಟ ವಿಸ್ತರಣೆಗೆ ಎರಡು ದಿನ ಮೊದಲೇ ಅವರ ಬೆಂಬಲಿಗರು ಚನ್ನಪಟ್ಟಣ ನಗರದ ತುಂಬೆಲ್ಲ ಬ್ಯಾನರ್ ಗಳನ್ನು ಹಾಕಿದ್ದರು. ಆದರೆ ಕೊನೇ ಕ್ಷಣದಲ್ಲಿ ಅವರಿಗೆ ಸಚಿವ ಸ್ಥಾನ ತಪ್ಪಿತ್ತು.
ಹೀಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ ಬೆಂಬಲಿಗರು "ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆಸಿದಂತೆ" ಸಚಿವ ಸ್ಥಾನ ಸಿಗುವ ಮೊದಲೇ ಅತುರಕ್ಕೆ ಬಿದ್ದು ಬ್ಯಾನರ್ ಗಳನ್ನು ಹಾಕಿದ್ದೀರಿ ಎಂದು ಸಾಮಾಜಿಕ ತಾಣದಲ್ಲಿ ಸಿಪಿವೈ ಬೆಂಬಲಿಗರನ್ನು ಕಿಚಾಯಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು.
ಇದೀಗ ಡಿಕೆಶಿ ಬೆಂಬಲಿಗರ ವ್ಯಂಗ್ಯಕ್ಕೆ ಪ್ರತಿಯಾಗಿ ಸಿ.ಪಿ.ಯೋಗೇಶ್ವರ್ ಬೆಂಬಲಿಗರು, ನಿಮ್ಮ ನಾಯಕ ಡಿಕೆಶಿಗೆ KPCC ಅಧ್ಯಕ್ಷಗಿರಿ ಸಿಗುವ ಮೊದಲೇ ಶುಭಾಶಯ ಕೋರಿ ಬ್ಯಾನರ್ ಗಳನ್ನು ಹಾಕಿಸಿದ್ದೀರಿ. ಕೂಸು ಹುಟ್ಟುವ ಮೊದಲೇ ನೀವು ತೊಟ್ಟಿಲನ್ನೇ ಕಟ್ಟಿದ್ದೀರಿ ಎಂದು ಕೆಲ ಫೋಟೊಗಳನ್ನು ಸಾಮಾಜಿಕ ತಾಣದಲ್ಲಿ ಹರಿಬಿಟ್ಟು ಈಗ ನಮಗೆ ಪಾಠ ಹೇಳ್ತೀರಾ ಎಂದು ಡಿಕೆ ಫ್ಯಾನ್ಸ್ ಗೆ ಸಿಪಿವೈ ಫ್ಯಾನ್ಸ್ ಟಾಂಗ್ ಕೊಟ್ಟಿದ್ದಾರೆ.

ಸಿ.ಪಿ.ಯೋಗೇಶ್ವರ್ ಬ್ಯಾನರ್ ಮತ್ತು ಫ್ಲೆಕ್ಸ್ ಗಳಿಗಷ್ಟೇ ಸೀಮಿತವಾದ ಸ್ವಯಂ ಘೋಷಿತ ಸಚಿವರು ಎಂದು ಡಿಕೆಶಿ ಬೆಂಬಲಿಗರು ಟ್ವೀಟ್ ಮಾಡಿದರೆ, ಇದಕ್ಕೆ ಪ್ರತಿಯಾಗಿ ಸಿಪಿವೈ ಬೆಂಬಲಿಗರು ಐವತ್ತು ದಿನ ಜೈಲಿನಲ್ಲಿ ಇದ್ದು ಬಂದವರಿಗೆ ಊರು ತುಂಬಾ ಬ್ಯಾನರ್ ಹಾಕಿದ್ದು ಕಾಮಿಡಿಯಲ್ಲವೇ ಎಂದು ಡಿ.ಕೆ.ಶಿವಕುಮಾರ್ ಬೆಂಬಲಿಗರನ್ನು ಕೆಣಕಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications