ರಾಮನಗರದಲ್ಲಿ ಎಚ್‌ಡಿಕೆ ಹಾಗೂ ಸಿಪಿವೈ ನಡುವೆ ಅಭಿವೃದ್ಧಿ ಕ್ರೆಡಿಟ್ ವಾರ್: ಕಾರ್ಯಪಾಲಕ ಇಂಜಿನಿಯರ್ ಅಮಾನತು
ರಾಮನಗರ, ಡಿಸೆಂಬರ್, 13: ಬೊಂಬೆ ನಾಡು ಚನ್ನಪಟ್ಟಣ ತಾಲೂಕಿನ ರಸ್ತೆಗಳ ಅಭಿವೃದ್ಧಿಗಾಗಿ ಸಿಎಂ ಬಸವರಾಜ ಬೊಮ್ಮಯಿ ಅವರು ವಿಶೇಷ ಅನುದಾನದಡಿ 50 ಕೋಟಿ ರೂಪಾಯಿ ನೀಡಿದ್ದರು. ಈ ಅನುದಾನದ ವಿಚಾರವಾಗಿ ಕ್ಷೇತ್ರದ ಹಾಲಿ ಶಾಸಕ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ, ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ನಡುವೆ ಅಭಿವೃದ್ಧಿ ಕ್ರೆಡಿಟ್ ವಾರ್ ನಡೆದಿತ್ತು. ಇವರ ಕ್ರೆಡಿಟ್ ವಾರ್ ನಡುವೆ ಕೆಆರ್‌ಐಡಿಎಲ್ ಕಾರ್ಯಪಾಲಕ ಇಂಜಿನಿಯರ್ ತಲೆ ದಂಡವಾಗಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ವತಿಯಿಂದ ಭೂಮಿಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಭೂಮಿಪೂಜೆ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿಷಯದಲ್ಲಿ ಶಿಷ್ಟಾಚಾರ ಲೋಪ ಎಸಗಿದ ಆರೋಪದ ಮೇರೆಗೆ ಅಧಿಕಾರಿ ವಿ.ಶ್ರೀಧರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಕ್ಷೇತ್ರದಲ್ಲಿ ಅಕ್ಟೋಬರ್ 02ರಂದು ಅಭಿವೃದ್ಧಿ ಕಾಮಾಗಾರಿಗಳ ಶಂಕುಷ್ಥಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕ್ಷೇತ್ರದ ನನ್ನನ್ನು ಕಡೆಗಣಿಸಿ ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಕಾರಣ ಹಕ್ಕು ಚ್ಯುತಿ ಆಗಿದೆ ಎಂದು ಸ್ಪೀಕರ್ ಅವರಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ದೂರು ಸಲ್ಲಿಸಿದ್ದರು.

ಕಾರ್ಯಪಾಲಕ ಎಂಜಿನಿಯರ್ ಅಮಾನತು
ಎಚ್.ಡಿ.ಕುಮಾರಸ್ವಾಮಿಯವರು ದೂರು ನೀಡಿದ ಹಿನ್ನೆಲೆಯಲ್ಲಿ ರಾಮನಗರ ವಿಭಾಗದ ಪ್ರಭಾರಿ ಕಾರ್ಯಪಾಲಕ ಎಂಜಿನಿಯರ್ ವಿ.ಶ್ರೀಧರ್ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಅಮಾನತು ಆದೇಶ ಹೊರಡಿಸಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಜೆ.ಹಿರೇಮಠ್ ಅವರು, ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಿದ್ದಾರೆ.

ಸಿ.ಪಿ.ವೈ ವಿರುದ್ದ ಎಚ್.ಡಿ.ಕೆ ಆರೋಪ
ಅಕ್ಟೋಬರ್ 2 ರಂದು ಸಿಎಂ ನೀಡಿದ ಅನುದಾನದ ಕಾಮಾಗಾರಿಗಳ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹೊರಗಿಟ್ಟು, ಅಭಿವೃದ್ಧಿ ಕ್ರೆಡಿಟ್ ಪಡೆಯಲು ಸಿ.ಪಿ.ಯೋಗೇಶ್ವರ್ ಹುನ್ನಾರ ನಡೆಸಿದ್ದಾರೆ ಎನ್ನುವ ಆರೋಪ ಎದುರಾಗಿತ್ತು. ಹೀಗೆ ಆರೋಪ ಮಾಡಿದ ಜೆಡಿಎಸ್ ಪಕ್ಷದ ನೂರಾರು ಕಾರ್ಯಕರ್ತರು ಸರ್ಕಾರ ಹಾಗೂ ಎಂಎಲ್‌ಸಿ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನೆಡೆಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನೆ ನಿರತ ಜೆಡಿಎಸ್ ಮುಖಂಡರನ್ನು ಬಂಧಿಸಿದ್ದರು.

ಸಿ.ಪಿ.ವೈ ಕಾರಿನತ್ತ ಕಲ್ಲು, ಮೊಟ್ಟೆ ಎಸೆದ ಆರೋಪ
ಪೋಲಿಸರ ನಡೆಯಿಂದ ಕುಪಿತರಾಗಿ ಶಂಕುಸ್ಥಾಪನೆಯನ್ನು ತಡೆಯಲು ಮುಂದಾದ ಜೆಡಿಎಸ್ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡಸಿದ್ದರು. ಈ ಸಂದರ್ಭದಲ್ಲಿ ಉದ್ರಿಕ್ತ ಜೆಡಿಎಸ್ ಕಾರ್ಯಕರ್ತರು ಸಿ.ಪಿ.ಯೋಗೇಶ್ವರ್ ತೆರಳುತ್ತಿದ್ದ ಕಾರಿನತ್ತ ಮೊಟ್ಟೆ ಹಾಗೂ ಕಲ್ಲು ತೂರಿದರು ಘಟನೆ ನಡೆದಿತ್ತು. ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಕಾರಿನ ಮೇಲೆ ಮೊಟ್ಟೆ ಹಾಗೂ ಕಲ್ಲು ತೂರಿದ ಜನರನ್ನು ಚದುರಿಸಲು ಪೊಲೀಸರು ಲಾಠಿ ಜಾರ್ಜ್ ಮಾಡಿದರು. ಈ ವೇಳೆ ಸುಮಾರು 50ಕ್ಕೂ ಹೆಚ್ಚು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಘಟನೆ ಬಗ್ಗೆ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಪರಸ್ಪರ ದೂರು ನೀಡಿದ್ದರು.

ಶಿಷ್ಟಾಚಾರ ಉಲ್ಲಂಘನೆ, ಅಧಿಕಾರಿ ಅನಾನತು
ಅಧಿಕಾರಿಗಳು ತಮ್ಮ ವ್ಯಾಪ್ತಿಯ ಅಭಿವೃದ್ಧಿ ಕಾಮಾಗಾರಿಗಳ ಶಂಕುಷ್ಥಾಪನೆ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಅಧಿವೇಶನದಲ್ಲಿ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದರು. ಸರ್ಕಾರ ಚಳಿಗಾಲದ ಅಧಿವೇಶನ ಪ್ರಾರಂಭಕ್ಕೆ ಕೆಲ ದಿನಗಳು ಬಾಕಿ ಇರುವಂತೆ ಶಿಷ್ಟಾಚಾರ ಉಲ್ಲಂಘನೆ ಎಸಗಿದ ಅಧಿಕಾರಿಯ ಅಮಾನತು ಆದೇಶ ಮಾಡಿದೆ.












Click it and Unblock the Notifications