Channapatna By Election: ಎಚ್‌ಡಿಕೆ, ನಿಖಿಲ್ ಮುಂದೆಯೇ ರಾಜೀನಾಮೆ ಘೋಷಿಸಿದ ನಾಯಕ!
ಬೆಂಗಳೂರು, ನವೆಂಬರ್ 30: ರಾಮನಗರ ಜಿಲ್ಲೆಯ ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶ ಘೋಷಣೆಯಾಗಿ ಒಂದು ವಾರ ಕಳೆದಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಉಪ ಚುನಾವಣೆಯಲ್ಲಿ ಸೋಲುವ ಮೂಲಕ 2023ರಲ್ಲಿ ಜೆಡಿಎಸ್ ಪಕ್ಷ ಗೆದ್ದಿದ್ದ ಕ್ಷೇತ್ರ ಈಗ ಕಾಂಗ್ರೆಸ್ ಪಾಲಾಗಿದೆ. ಜೆಡಿಎಸ್ ನಾಯಕರಿಗೆ ಎಚ್. ಡಿ. ಕುಮಾರಸ್ವಾಮಿ ತವರು ಕ್ಷೇತ್ರದ ಉಪ ಚುನಾವಣೆ ಸೋಲು ಆಘಾತವನ್ನು ನೀಡಿದೆ.
ಶನಿವಾರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಮಾರಂಭ ನಡೆಯುತ್ತಿದೆ. ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ, ಉಪ ಚುನಾವಣೆಯ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಚುನಾವಣಾ ಸೋಲಿನ ಕುರಿತು ಚರ್ಚೆಗಳು ನಡೆಯುತ್ತಿವೆ.

ಈ ಸಮಾರಂಭದಲ್ಲಿ ಚನ್ನಪಟ್ಟಣ ಉಪ ಚುನಾವಣೆ ಸೋಲಿನ ಹೊಣೆ ಹೊತ್ತು ಚನ್ನಪಟ್ಟಣ ತಾಲೂಕು ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ಜಯಮುತ್ತು ರಾಜೀನಾಮೆ ಘೋಷಣೆ ಮಾಡಿದರು. ಸಮಾರಂಭದಲ್ಲಿ ಎಚ್. ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮುಂದೆಯೇ ಜಯಮುತ್ತು ಈ ಘೋಷಣೆಯನ್ನು ಮಾಡಿದ್ದಾರೆ.
ಆಗ ವೇದಿಕೆಯಲ್ಲಿದ್ದ ನಿಖಿಲ್ ಕುಮಾರಸ್ವಾಮಿ ರಾಜೀನಾಮೆ ವಾಪಸ್ ಪಡೆಯುವಂತೆ ಸಲಹೆಯನ್ನು ನೀಡಿದರು. ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 87,229 ಮತಗಳನ್ನು ಪಡೆದು ಕಾಂಗ್ರೆಸ್‌ನ ಸಿ. ಪಿ. ಯೋಗೇಶ್ವರ ವಿರುದ್ಧ 25,413 ಮತಗಳ ಅಂತರದಿಂದ ಸೋಲು ಕಂಡಿದ್ದರು. ಇದರಿಂದಾಗಿ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್‌ನ ಅಸ್ತಿತ್ವ ಇಲ್ಲದಂತೆ ಆಗಿದ್ದು, ಜಿಲ್ಲೆಯಲ್ಲಿ ಯಾವ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರು ಇಲ್ಲದಂತಾಗಿದೆ.
ರಾಜಕೀಯ ಶಕ್ತಿ ನೀಡಿದ್ದೀರಿ: ಸಮಾರಂಭದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, "ಒಂದಲ್ಲ ಎರಡಲ್ಲ 8 ಬಾರಿ ಕ್ಷೇತ್ರದ ಜನರು ಶಾಸಕರಾಗಿ ನಮ್ಮನ್ನು ಆಯ್ಕೆ ಮಾಡಿ ರಾಜಕೀಯ ಶಕ್ತಿಯನ್ನು ತುಂಬಿದ್ದಾರೆ. ನಿಮ್ಮ ಋಣ ನಮ್ಮ ಮೇಲಿದೆ. ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ನಿಮಗೆ ನೀಡಿದ್ದ ಭರವಸೆಯನ್ನು ಈಡೇರಿಸಲು ಕೆಲಸ ಮಾಡುತ್ತೇವೆ" ಎಂದು ಭರವಸೆ ನೀಡಿದರು.
"ಸೋಲಿನಿಂದ ಯಾರೂ ಧೃತಿಗೆಡಬೇಡಿ ನಾನು ಎಲ್ಲೂ ಹೋಗುವುದಿಲ್ಲ. ನಿಮ್ಮ ಜೊತೆಗೆ ಇರುತ್ತಾನೆ. ಎಲ್ಲರೂ ಒಟ್ಟಾಗಿ ಮುಂದಿನ ಚುನಾವಣೆಗಾಗಿ ಕೆಲಸ ಮಾಡೋಣ. ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಗೆಲ್ಲಲು ಸಂಘಟನೆ ಮಾಡೋಣ, ಕುಳಿತು ಚರ್ಚೆ ಮಾಡಿ ಸಂಘಟನೆಯನ್ನು ಬಲಪಡಿಸೋಣ" ಎಂದು ನಿಖಿಲ್ ಕುಮಾರಸ್ವಾಮಿ ಕರೆ ಕೊಟ್ಟರು.
ಚನ್ನಪಟ್ಟಣ ಉಪ ಚುನಾವಣೆಯ ಸಂದರ್ಭದಲ್ಲಿ ಸಿ. ಪಿ. ಯೋಗೇಶ್ವರ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾದರು. ಆಗ ಅವರಿಗೆ ಎದುರಾಳಿಯಾಗಿ ನಿಖಿಲ್ ಕುಮಾರಸ್ವಾಮಿ, ಜಯಮುತ್ತು ಹೆಸರು ಕೇಳಿ ಬಂದಿತ್ತು. ಅಂತಿಮವಾಗಿ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾದರು. ಬಿಜೆಪಿ, ಜೆಡಿಎಸ್ ನಾಯಕರು ಒಟ್ಟಾಗಿ ಪ್ರಚಾರ ನಡೆಸಿದರೂ ಸಹ ಸಿ. ಪಿ. ಯೋಗೇಶ್ವರ ಪ್ರಭಾವ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿ ಇರುವ ಕಾರಣ ಚನ್ನಪಟ್ಟಣ ಕಾಂಗ್ರೆಸ್ ವಶವಾಯಿತು.
2023ರ ಚುನಾವಣೆಯಲ್ಲಿ ಜೆಡಿಎಸ್‌ನ ಎಚ್. ಡಿ. ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸಿ. ಪಿ. ಯೋಗೇಶ್ವರ ಸೋಲಿಸಿದ್ದರು. 2024ರ ಲೋಕಸಭೆ ಚುನಾವಣೆಯಲ್ಲಿ ಅವರು ಮಂಡ್ಯದಿಂದ ಕಣಕ್ಕಿಳಿದು ಗೆಲುವು ಸಾಧಿಸಿದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು, ಉಪ ಚುನಾವಣೆ ಎದುರಾಯಿತು. ಉಪ ಚುನಾವಣೆಯಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್ ಸೋಲಿಸುವ ಮೂಲಕ ಯೋಗೇಶ್ವರ ಹಿಂದಿನ ಚುನಾವಣೆ ಸೋಲಿನ ಸೇಡು ತೀರಿಸಿಕೊಂಡರು.












Click it and Unblock the Notifications